ಶಿರಸಿ: ಸರ್ಕಾರದ ಸವಲತ್ತನ್ನು ತೆಗೆದುಕೊಳ್ಳಬೇಕೇ ವಿನಃ ಸರ್ಕಾರವನ್ನೇ ನಂಬಿ ಯಾವುದೇ ಸಾಮಾಜಿಕ ಕಾರ್ಯದಲ್ಲಿ ತೊಡಗುವುದು ಸಮಂಜಸವಲ್ಲ ಎಂದು ಜೀವಜಲ ಕಾರ್ಯಪಡೆ ಅಧ್ಯಕ್ಷ ಹಾಗೂ ವಿಸ್ತಾರ ನ್ಯೂಸ್ ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಶ್ರೀನಿವಾಸ್ ಹೆಬ್ಬಾರ್ ಅಭಿಪ್ರಾಯಪಟ್ಟರು.
ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ (ಫೆ.೪) ಹಮ್ಮಿಕೊಳ್ಳಲಾಗಿದ್ದ ಕಲ್ಪವೃಕ್ಷ ಚಾರಿಟಬಲ್ ಟ್ರಸ್ಟ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ಸರ್ಕಾರದ ಹಣವನ್ನೇ ನಂಬಿ ಯಾವುದೇ ಎನ್‌ಜಿಒ ಕಾರ್ಯದಲ್ಲಿ ತೊಡಗುವುದು ಸರಿಯಲ್ಲ. ಸಮಾಜಿಮುಖಿ ಕಾರ್ಯದಲ್ಲಿ ತಮ್ಮದೇ ಆದ ಅಳಿಲು ಸೇವೆ ನೀಡುವುದು ಪ್ರತಿಯೊಬ್ಬರ ಕರ್ತವ್ಯ. ಮಕ್ಕಳ ಶೈಕ್ಷಣಿಕ ಕ್ಷೇತ್ರಕ್ಕೆ ಒತ್ತು ನೀಡುವ ದೃಷ್ಟಿಯಿಂದ ಈ ಟ್ರಸ್ಟ್ ಹುಟ್ಟಿಕೊಂಡಿರುವುದು ಖುಷಿಯ ವಿಚಾರ. ಇಂತಹ ಕಾರ್ಯಕ್ಕೆ ಎಲ್ಲರೂ ಕೈ ಜೋಡಿಸಬೇಕು. ನಾವು ಕೂಡ ಜೀವಜಲ ಕಾರ್ಯಪಡೆ ಹೆಸರಿನಲ್ಲಿ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇವೆ. ನಮ್ಮ ಸಾಮಾಜಿಕ ಕಾರ್ಯಕ್ಕೆ ಸರ್ಕಾರದಿಂದ ಯಾವುದೇ ಹಣ ಪಡೆದಿಲ್ಲ. ಎನ್‌ಜಿಒ ಸಂಸ್ಥೆ ಎಂದರೆ ಸರ್ಕಾರದಿಂದ ಹಣ ಬರತ್ತದೆ. ಆದರೆ ಸರ್ಕಾರದ ಹಣವನ್ನೇ ನಂಬಿ ಒಂದು ಸಂಸ್ಥೆ ನಡೆಸುವುದು ಸುಲಭದ ಮಾತಲ್ಲ. ಅದಕ್ಕೆ ದಾನಿಗಳ ಸಹಾಯ ಮುಖ್ಯ. ಅಂತಹ ದಾನಿಗಳು ಈ ಸಾಮಾಜಿಕ ಕಾರ್ಯದಲ್ಲಿ ತೊಡಗುವುದು ಮುಖ್ಯ. ಅವರಿಂದ ಪಡೆದ ಹಣ ಸದ್ಬಳಕೆ ಮಾಡಿಕೊಳ್ಳುವುದು ಆ ಸಂಸ್ಥೆಯ ಕರ್ತವ್ಯ. ಹುಟ್ಟು ಸಾವು ಸಹಜ. ಆ ಮಧ್ಯದಲ್ಲಿ ಜನರಿಗಾಗಿ ನಾವು ಏನು ಮಾಡಿದ್ದೇವೆ ಎಂಬುದನ್ನು ವಿಮರ್ಶಿಸಿಕೊಳ್ಳಬೇಕು ಎಂದರು.
ಇದನ್ನೂ ಓದಿ: Judges Appointment: ಬಿಕ್ಕಟ್ಟಿನ ಮಧ್ಯೆಯೇ ಸುಪ್ರೀಂ ಕೋರ್ಟ್‌ಗೆ ಐವರು ಜಡ್ಜ್‌ಗಳ ನೇಮಕಕ್ಕೆ ಕೇಂದ್ರ ಅಸ್ತು
ಟಿ.ಎಸ್.ಎಸ್ ಆಸ್ಪತ್ರೆಯ ವೈದ್ಯ ಡಾ. ಗೌತಮ್ ಶೇಟ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆ.ಎಂ.ಎಫ್ ಹಾಗೂ ಕೆಡಿಸಿಸಿ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಪಾರಿ ಬಸವರಾಜ್, ರೋಟರಿ ಚಾರಿಟಬಲ್ ಆಸ್ಪತ್ರೆಯ ಅಧ್ಯಕ್ಷೆ ಲಕ್ಷ್ಮೀದಾಸ ಎ. ಕಾಸರಗೋಡ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್. ಹೆಗಡೆ ಹಾಜರಿದ್ದರು.