ಶಿರಸಿ: ಇಲ್ಲಿನ ಸಾಹಿತ್ಯ ಸಿಂಚನ ಬಳಗದ ವಾರ್ಷಿಕೋತ್ಸವದ ಅಂಗವಾಗಿ ನೀಡುವ ಸಾಹಿತ್ಯ ಸಿಂಚನ ಶ್ರೀ (Sahitya Sinchana Sri) ಪ್ರಶಸ್ತಿಯನ್ನು ಸಿದ್ದಾಪುರದ ಮಗೇಗಾರಿನ ಹಳೆ ಹಾಡು ಬರಹಗಾರ್ತಿ ಶೈಲಜಾ ಹೆಗಡೆ ಅವರಿಗೆ ನೀಡಿ ಅಭಿನಂದಿಸಲಾಯಿತು.
ನಗರದ ನೆಮ್ಮದಿ ಕುಠೀರದಲ್ಲಿ ಭಾನುವಾರ (ಮಾ.19) ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, “ಗ್ರಾಮೀಣ ಭಾಗದಲ್ಲಿ ಇರುವ ನನ್ನ ಸಣ್ಣ ಸಾಹಿತ್ಯ ಸೇವೆಯನ್ನು ಗಮನಿಸಿ ಪ್ರಶಸ್ತಿ ನೀಡಿದ್ದು ಖುಷಿಯಾಗಿದೆ. ಪ್ರಶಸ್ತಿ ಪಡೆದುಕೊಳ್ಳುತ್ತಿರುವುದು ಇದೇ ಮೊದಲ” ಎಂದರು.
ಇದನ್ನೂ ಓದಿ: Auto Strike: ರ‍್ಯಾಪಿಡೋ ಬೈಕ್ ಟ್ಯಾಕ್ಸಿಗೆ ವಿರೋಧ; ಆಟೋ ಓಡಾಟಕ್ಕೆ ಬ್ರೇಕ್, ರೋಡಿಗಿಳಿದ ಹೆಚ್ಚುವರಿ ಬಿಎಂಟಿಸಿ ಬಸ್
ತಾಲೂಕು ಕಸಾಪ ಅಧ್ಯಕ್ಷ ಜಿ. ಸುಬ್ರಾಯ ಭಟ್ಟ ಬಕ್ಕಳ ಉದ್ಘಾಟಿಸಿ, “ಕಾವ್ಯ ಸಂಕಲನದ ಗುಣಮಟ್ಟದ ಕುರಿತು ಪರಿಶೀಲನೆ ಮಾಡಬೇಕಾದ ಕಾಲದಲ್ಲಿ ಇದ್ದೇವೆ. ಸಾಹಿತ್ಯ ಸಂಘಟನೆಯಲ್ಲಿ ಜೀವನೋತ್ಸಾಹ ಉಳಿಸಿ ಬೆಳೆಸಬೇಕಿದೆ.
ಶೈಲಜಾ ಹೆಗಡೆ ಅವರು ಬರೆಯುವ ಮೂಲಕ ಸಾಹಿತ್ಯ ಆಸಕ್ತಿ ಉಳಿಸಿಕೊಂಡಿದ್ದಾರೆ” ಎಂದರು.
ಕೈಗಾದ ಸಾಹಿತಿ ಎಸ್.ಆರ್.ಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, “ಸಾಹಿತ್ಯವೆಂಬುದು ಖುಷಿಯನ್ನು ನೀಡುವುದರ ಜತೆಗೆ ಜೀವನದ ಪಾಠವಾಗುತ್ತದೆ. ಅತಿ ಹೆಚ್ಚು ಸಾಹಿತಿಗಳನ್ನು ಲೇಖಕರನ್ನು ಶಿರಸಿ ನೀಡುತ್ತಿದೆ. ಸಾಹಿತ್ಯ ವಾತಾವರಣವನ್ನು ಶಿರಸಿಯಲ್ಲಿ ನಿರ್ಮಾಣ ಮಾಡಲು ಹಲವರು ಶ್ರಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಾಹಿತ್ಯ ಸಿಂಚನ ಬಳಗ ಹಾಗೂ ಶಿರಸಿಯ ಸಾಹಿತ್ಯ ಕ್ಷೇತ್ರ ಇನ್ನಷ್ಟು ಬೆಳೆಯಲಿ” ಎಂದರು.
ಇದನ್ನೂ ಓದಿ: Swara Bhasker: ಪಾಕಿಸ್ತಾನದ ಪ್ರಸಿದ್ಧ ಡಿಸೈನರ್ ವಿನ್ಯಾಸ ಮಾಡಿದ ಲೆಹೆಂಗಾದಲ್ಲಿ ಮಿಂಚಿದ ನಟಿ ಸ್ವರಾ ಭಾಸ್ಕರ್
ಹಿರಿಯ ಸಾಹಿತಿ ಹಾಗೂ ಪತ್ರಕರ್ತರಾದ ರಾಜೀವ ಅಜ್ಜಿಬಳ ಅವರ ಸಮುದ್ಧರಣ ಮತ್ತು ದ್ವೀಪಾಂತರ ಹಾಗೂ ಲತಾ ಹೆಗಡೆ ಬಾಳೆಗದ್ದೆ ಅವರ ನುಡಿ ಸಿಂಚನ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಶಿವ ಪ್ರಸಾದ ಹೆಗಡೆ ಹಿರೇಕೈ ಪ್ರಾಸ್ತಾವಿಕ ಮಾತನಾಡಿದರು. ಯಶಸ್ವಿನಿ ಕಾನಸೂರು ಸ್ವಾಗತಿಸಿದರು. ಭವ್ಯ ಹಳೆಯೂರು ನಿರ್ವಹಣೆ ಮಾಡಿದರು. ನಾಗವೇಣಿ ಹೆಗಡೆ ಪರಿಚಯಿಸಿದರು. ಸುಜಾತಾ ದಂಟಕಲ್ ವಂದಿಸಿದರು. ಹದಿನೈದಕ್ಕೂ ಅಧಿಕ ಕವಿಗಳು ಕಾವ್ಯ ವಾಚನ ಮಾಡಿದರು.