Site icon Vistara News

Sirsi News: ಕಲ್ಲಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ನೂತನ ಪ್ರಾಚಾರ್ಯರ ನೇಮಕ ವಿರೋಧಿಸಿ ಪ್ರತಿಭಟನೆ

Protest by students against appointment of new principal at Morarji Desai Residential School Kalli

ಶಿರಸಿ: ಕಿರುಕುಳ ಆರೋಪ ಹೊತ್ತಿರುವ ಪ್ರಾಂಶುಪಾಲರನ್ನು (Principal) ತಾಲೂಕಿನ ಕಲ್ಲಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ (Morarji Desai Residential School) ನೇಮಿಸಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು (Students) ತರಗತಿ ಬಹಿಷ್ಕರಿಸಿ, ತಿಂಡಿ, ಊಟ, ನೀರು ತ್ಯಜಿಸಿ, ಶಾಲಾ ಆವಣರದಲ್ಲಿ ದಿಢೀರ್ ಪ್ರತಿಭಟನೆ (Protest) ನಡೆಸಿದರು.

ಕಾರವಾರದ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಚಂದ್ರಶೇಖರ ನಾಯ್ಕ ಅವರನ್ನು ನೇಮಕ ಮಾಡಿ, ಈಗಿದ್ದ ಪ್ರಾಂಶುಪಾಲ ರಾಘವೇಂದ್ರ ನಾಯ್ಕ ಅವರನ್ನು ವರ್ಗಾವಣೆ ಮಾಡಿ, ರಾಜ್ಯ ಸರ್ಕಾರ ಆದೇಶ ನೀಡಿದೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಹಾಗೂ ಪಾಲಕರು ದಿಢೀರ್ ಪ್ರತಿಭಟನೆ ನಡೆಸಿ, ಸರ್ಕಾರ ಹಾಗೂ ಅಧಿಕಾರಿಗಳ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈಗಿರುವ ಪ್ರಾಚಾರ್ಯ ರಾಘವೇಂದ್ರ ಅವರನ್ನೇ ಮುಂದುವರಿಸಬೇಕು. ಅಲ್ಲಿಯವರೆಗೆ ಪ್ರತಿಭಟನೆ ಕೈ ಬಿಡುವುದಿಲ್ಲ. ಅಲ್ಲದೇ ಅಲ್ಲಿಯವರೆಗೆ ತರಗತಿಗೆ ಹಾಜರಾಗುವುದಿಲ್ಲ. ವಿದ್ಯಾರ್ಥಿನಿಯರಿಗೆ ಕಿರುಕುಳ ಆರೋಪ ಎದುರಿಸುತ್ತಿರುವ ಪ್ರಾಂಶುಪಾಲರು ಯಾವುದೇ ಕಾರಣಕ್ಕೂ ನಮಗೆ ಬೇಡ. ಶಾಲೆಯಲ್ಲಿ 6 ರಿಂದ 10 ನೇ ತರಗತಿ ವರೆಗೆ ಸುಮಾರು 246 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ನಾಗರಪಂಚಮಿಗೆ ಮನೆಗೆ ಹೋದ ಸಂದರ್ಭದಲ್ಲಿ ಪ್ರಾಂಶುಪಾಲ ರಾಘವೇಂದ್ರ ಅವರನ್ನು ದಿಢೀರ್ ವರ್ಗಾವಣೆ ಮಾಡಿದ್ದಾರೆ. ಹಳೆಯ ಪ್ರಾಂಶುಪಾಲರು ಮರು ನೇಮಕ ಆಗುವವರೆಗೆ ನಾವು ತಿಂಡಿ, ಊಟ, ನೀರು ಸೇವಿಸುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು.

ಇದನ್ನೂ ಓದಿ: Economy of India: 20 ವರ್ಷಗಳಲ್ಲಿ ಭಾರತದ ಆರ್ಥಿಕ ಅಸಮಾನತೆ ಏರಿಕೆ; ಎಷ್ಟಾಗಿದೆ ನೋಡಿ

ಶಾಲೆಯಲ್ಲಿ ಕಳೆದ 10 ವರ್ಷಗಳಿಂದ ಪ್ರಾಂಶುಪಾಲರಾಗಿ ರಾಘವೇಂದ್ರ ಅವರನ್ನು ಉತ್ತಮವಾಗಿ ಶಾಲೆಯನ್ನು ಮುನ್ನೆಡೆಸಿದ್ದರು. ಯಾರೂ ಬರಲು ಒಪ್ಪದ ಸಮಯದಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ರಾಜ್ಯದ ಅತ್ಯುತ್ತಮ ವಸತಿ ಶಾಲೆಯನ್ನಾಗಿ ರೂಪಿಸಿದ್ದಾರೆ. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಗಳ ವರೆಗೆ ಪ್ರತಿ ಕ್ಷಣವೂ ನಮ್ಮ ವಿದ್ಯಾಭ್ಯಾಸ, ಊಟೋಪಚಾರ ಬಗ್ಗೆ ಕಾಳಜಿ ವಹಿಸುತ್ತಿದ್ದರು. ನಾವೆಲ್ಲ ಬಡ ಕುಟುಂಬದ ಹಿನ್ನಲೆಯಿಂದ ಬಂದು ಈ ಶಾಲೆಯಲ್ಲಿ ಕಲಿಯುತ್ತಿದ್ದೇವೆ. ನಮ್ಮ ಮೇಲೆ ಪ್ರಾಂಶುಪಾಲರು ತೋರಿಸುವ ಪ್ರೀತಿಯಿಂದ ನಾವು ಬಡವರು ಎಂಬುದನ್ನು ಮರೆತು ಬಿಟ್ಟಿದ್ದೆವು. ಅವರು ಎಲ್ಲ ವಿದ್ಯಾರ್ಥಿಗಳನ್ನು ಸಮಾನ ರೀತಿಯಲ್ಲಿ ನೋಡುತ್ತಿದ್ದರು. ಇಂತಹ ಪ್ರಾಂಶುಪಾಲರು ಯಾವುದೇ ಕಾರಣಕ್ಕೂ ವರ್ಗಾಯಿಸಬಾರದು ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಒತ್ತಾಯಿಸಿದರು.

ಕಲ್ಲಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ.

ವಿದ್ಯಾರ್ಥಿಗಳ ಮನವೊಲಿಸುವ ಯತ್ನ ವಿಫಲ

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರ ವರ್ಗಾವಣೆ ಖಂಡಿಸಿ, ಅಲ್ಲಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವ ಸುದ್ದಿ ತಿಳಿದ ತಹಸೀಲ್ದಾರ್ ಶ್ರೀಧರ ಮುಂದಲಮನಿ ಆಗಮಿಸಿ, ವಿದ್ಯಾರ್ಥಿಗಳ ಮನವೊಲಿಸಲು ಮುಂದಾದರು. ತರಗತಿ ಬಹಿಷ್ಕರಿಸುವುದು ಸರಿಯಾದ ಕ್ರಮವಲ್ಲ. ನಿಮ್ಮ ಬೇಡಿಕೆಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಜಿಲ್ಲಾಧಿಕಾರಿ ಮತ್ತು ಜಿ.ಪಂ ಸಿಇಒ ಅವರಿಗೆ ವಸ್ತುಸ್ಥಿತಿ ತಿಳಿಸಲಾಗುತ್ತದೆ. ಅವರ ಜತೆ ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರೂ, ವಿದ್ಯಾರ್ಥಿಗಳು ಒಪ್ಪದೇ ಪ್ರತಿಭಟನೆ ಮುಂದುವರೆಸಿದರು.

ಅಸ್ವಸ್ಥಗೊಂಡ ವಿದ್ಯಾರ್ಥಿಗಳು

ಬೆಳಗ್ಗೆಯಿಂದ ತಿಂಡಿ, ಊಟ ನೀರು ತ್ಯಜಿಸಿ ಸುಡು ಬಿಸಿಲಿನಲ್ಲಿ ಪ್ರತಿಭಟನೆ ನಡೆಸುತ್ತಿರುವ ಹಲವು ವಿದ್ಯಾರ್ಥಿಗಳು ತಲೆ ತಿರುಗಿ ಬಿದ್ದು ಅಸ್ವಸ್ಥಗೊಂಡರು. ಶಿಕ್ಷಕರು ವಿದ್ಯಾರ್ಥಿಗಳ ಬಳಿ ಪ್ರತಿಭಟನೆ ಕೈ ಬಿಟ್ಟು ತರಗತಿಗೆ ಹಾಜರಾಗಿ ಎಂದು ತಿಳಿಸಿದರೂ ನಮ್ಮ ಪ್ರಾಂಶುಪಾಲರಾದ ರಾಘವೇಂದ್ರ ಅವರು ಮರು ನೇಮಕವಾದರೆ ಮಾತ್ರ ಪ್ರತಿಭಟನೆ ಹಿಂಪಡೆದುಕೊಳ್ಳುತ್ತೇವೆ. ಇಲ್ಲವಾದಲ್ಲಿ ಯಾವುದೇ ಕಾರಣಕ್ಕೂ ಬಗ್ಗುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದು ಕುಳಿತರು.

ಇದನ್ನೂ ಓದಿ: Chandrayaan 3: ಚಂದ್ರಯಾನದ ಯಶಸ್ಸಿನಿಂದ ಭಾರತಕ್ಕೆ ಆಗುವ ಲಾಭಗಳೇನು?

ಒಳ ಪ್ರವೇಶಿಸಲು ವಿದ್ಯಾರ್ಥಿಗಳ ವಿರೋಧ

ಕಲ್ಲಿಯ ಮೊರಾರ್ಜಿ ವಸತಿ ಶಾಲೆಗೆ ನೇಮಕಗೊಂಡ ಪ್ರಾಂಶುಪಾಲ ಚಂದ್ರಶೇಖರ ನಾಯ್ಕ ಅಧಿಕಾರ ಪಡೆದುಕೊಳ್ಳಲು ಶಾಲೆಗೆ ಆಗಮಿಸುತ್ತಿದ್ದಂತೆ ಶಾಲೆಯ ಕಂಪೌಂಡ್ ಬೀಗ ತೆಗೆದುಕೊಡಿ ನಾವು ವಾಪಸ್ಸು ಮನೆಗೆ ಹೋಗುತ್ತೇವೆ ಎಂದು ವಿದ್ಯಾರ್ಥಿಗಳು ತಳ್ಳಾಟ ನಡೆಸಿ, ಪ್ರಾಂಶುಪಲಾರ ಕೊಠಡಿಗೆ ನುಗ್ಗಿ ಬಾಗಿಲು ಮುರಿದು ದಾಂಧಲೆ ನಡೆಸಿದಲ್ಲದೇ, ಕೆಲ ವಿದ್ಯಾರ್ಥಿಗಳು ಕಂಪೌಂಡ್ ಜಿಗಿಯಲು ಮುಂದಾಗಿ, ಚಂದ್ರಶೇಖರ ನಾಯ್ಕ ಅಧಿಕಾರ ಸ್ವೀಕರಿಸಲು ವಿರೋಧ ವ್ಯಕ್ತಪಡಿಸಿದರು.

ಪಾಲಕ ರುದ್ರಸ್ವಾಮಿ ಆರಾಧ್ಯಮಠ ಕಾಳಂಗಿ ಮಾತನಾಡಿ, ಕಿರುಕುಳ ಆರೋಪ ಎದುರಿಸುತ್ತಿರುವ ಚಂದ್ರಶೇಖರ ನಾಯ್ಕ ಅವರನ್ನು ನೂರಾರು ವಿದ್ಯಾರ್ಥಿನಿಯರು ಇರುವ ವಸತಿ ಶಾಲೆಯ ಪ್ರಾಂಶುಪಾಲರನ್ನಾಗಿ ನೇಮಕ ಮಾಡಿರುವುದು ಎಷ್ಟು ಸರಿ. ಕಳೆದ 10 ವರ್ಷಗಳಿಂದ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ ಪ್ರಾಂಶುಪಾಲರನ್ನು ವರ್ಗಾವಣೆ ಮಾಡಿರುವುದು ತಪ್ಪು ನಿರ್ಧಾರ. ಸರ್ಕಾರ ಹಾಗೂ ಸಂಬಂಧಿಸಿದ ಅಧಿಕಾರಿಗಳು ಈ ಆದೇಶಕ್ಕೆ ತಡೆ ನೀಡಬೇಕು ಎಂದು ಆಗ್ರಹಿಸಿದರು.

ವಿರೋಧ ನಡುವೆ ಅಧಿಕಾರ ಸ್ವೀಕರಿಸಲು ಶಾಲೆಗೆ ಚಂದ್ರಶೇಖರ ನಾಯ್ಕ ಆಗಮಿಸುತ್ತಿದ್ದಂತೆ ವಿದ್ಯಾರ್ಥಿಗಳು ಗೋ ಬ್ಯಾಕ್, ಗೋ ಬ್ಯಾಕ್ ಎಂದು ಘೋಷಣೆ ಕೂಗಿದರು. ಪೊಲೀಸ್ ರಕ್ಷಣೆಯಲ್ಲಿ ಸಹಿ ಹಾಕಿ ವಾಪಸ್ಸು ತೆರಳಿದರು. ಪ್ರಾಂಶುಪಾಲರಾಗಿ ನೇಮಕಗೊಂಡ ಚಂದ್ರಶೇಖರ ನಾಯ್ಕ ಬದಲಾಯಿಸಿ, ರಾಘವೇಂದ್ರ ಅವರನ್ನು ನೇಮಿಸಬೇಕು. ಚಂದ್ರಶೇಖರ ನಾಯ್ಕ ಮೇಲೆ ನಮಗೆ ನಂಬಿಕೆ ಇಲ್ಲ. ವಿದ್ಯಾರ್ಥಿಗಳಿಗೆ ತೊಂದರೆಯಾದರೆ ಅವರೇ ನೇರ ಹೊಣೆಯಾಗುತ್ತಾರೆ ಎಂದು ಎಚ್ಚರಿಸಿದ ಪಾಲಕರು, ನಮ್ಮ ಮಕ್ಕಳ ವರ್ಗಾವಣೆ ಪತ್ರ ತೆಗೆದುಕೊಂಡು ಹೋಗಿ, ಸರ್ಕಾರ ವಿರುದ್ಧ ಹೋರಾಟ ನಡೆಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: Viral Video: ಕಣ್ಣೀರು ಸುರಿಸಿದ ಅಲ್ಕರಾಜ್‌, ಜೆರ್ಸಿ ಹರಿದು ಸಂಭ್ರಮಿಸಿದ ಜೊಕೋವಿಕ್‌

ಹಳೆ ಪ್ರಾಂಶುಪಾಲರನ್ನು ಮುಂದುವರಿಸಬೇಕೆಂಬ ವಿದ್ಯಾರ್ಥಿಗಳ ಆಗ್ರಹವನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಕಾಲಾವಕಾಶ ಬೇಕಾಗುತ್ತದೆ. ಸಂಬಂಧಿಸಿದ ಅಧಿಕಾರಿಗಳ ಜತೆ ಮಾತನಾಡುತ್ತೇನೆ. ವಿದ್ಯಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸುವುದು ಸರಿಯಲ್ಲ. ಶಿಕ್ಷಕರು ಜವಾಬ್ದಾರರಾಗಿದ್ದು, ಅವರು ಉತ್ತರ ನೀಡಬೇಕಾಗುತ್ತದೆ. ಪಾಲಕರು ಹಾಗೂ ಅಧಿಕಾರಿಗಳು ಕುರಿತು ಸಭೆ ನಡೆಸಿ, ಸಮಸ್ಯೆ ಬಗೆಹರಿಸಲು ಪ್ರಯತ್ನಿಸೋಣ.

-ಶ್ರೀಧರ ಮುಂದಲಮನಿ, ತಹಸೀಲ್ದಾರ್

Exit mobile version