ಶಿರಸಿ: ಬುಡಕಟ್ಟು, ಪರಿಸರ ಹಾಗೂ ಸಮುದ್ರ ವಿಜ್ಞಾನ ಕುರಿತ ಅಧ್ಯಯನಕ್ಕೆ ಪೂರಕವಾಗುವಂತೆ ಶಿರಸಿಯಲ್ಲಿ (Sirsi News)ವಿಶ್ವವಿದ್ಯಾನಿಲಯ ಸ್ಥಾಪಿಸುವಂತೆ ಜ. ೧೫ರಂದು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದು ಸ್ಕೊಡ್‌ವೆಸ್ ಸಂಸ್ಥೆಯ ಮುಖ್ಯಸ್ಥ ಡಾ.ವೆಂಕಟೇಶ ನಾಯ್ಕ ತಿಳಿಸಿದರು.
ನಗರದಲ್ಲಿ ಬುಧವಾರ (ಜ.೧೧) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಅಭಿವೃದ್ಧಿ ಆಗುತ್ತಿದ್ದರೂ ಸಮಸ್ಯೆಗಳ ನಿವಾರಣೆ ಆಗುತ್ತಿಲ್ಲ. ಈ ಕಾರಣ ಸ್ಥಳೀಯವಾಗಿ ಚಿಂತಿಸುವ ಅಗತ್ಯವಿದೆ. ಇದಕ್ಕೆ ವಿಶ್ವವಿದ್ಯಾಲಯ ಸ್ಥಾಪನೆಯೇ ಪರಿಹಾರವಾಗಿದೆ. ನವ ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಎಲ್ಲ ಜಿಲ್ಲೆಗಳಲ್ಲಿ ಒಂದಾದರೂ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂದಿದೆ. ಈ ಕಾರಣ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಸುವ, ಪರಿಸರ ಸಂರಕ್ಷಣೆ ಜತೆ ಅಭಿವೃದ್ಧಿಗೆ ಪೂರಕವಾಗಬಲ್ಲ ಅರಣ್ಯ, ಬುಡಕಟ್ಟು, ಪರಿಸರ ಹಾಗೂ ಸಮುದ್ರ ವಿಜ್ಞಾನಕ್ಕೆ ಸಂಬಂಧಪಟ್ಟ ನೂತನ ವಿಶ್ವವಿದ್ಯಾಲಯ ಸ್ಥಾಪಿಸುವ ಅಗತ್ಯವಿದೆ ಎಂದರು.
ಇದನ್ನೂ ಓದಿ | Shivamogga terror | ಉಗ್ರ ಸಂಪರ್ಕ ಹೊಂದಿದ ಮತ್ತಿಬ್ಬರು ಸೆರೆ: ಮಂಗಳೂರು, ಹೊನ್ನಾಳಿಯಲ್ಲಿ NIA ಕಾರ್ಯಾಚರಣೆ
ರಾಜ್ಯದಲ್ಲಿ ಕಾಡಿನ ಸಂಪತ್ತು ಅಪಾರವಾಗಿದೆ. ಅಂದಾಜು ೪೦ ಸಾವಿರ ಚದರ ಕಿ.ಮೀ ಅರಣ್ಯ ಪ್ರದೇಶವನ್ನು ಒಳಗೊಂಡು ೩೨೦ ಕಿಲೋಮೀಟರ್ ಕರಾವಳಿ ತೀರದೊಂದಿಗೆ ಅದ್ಭುತ ಸಸ್ಯ, ಪ್ರಾಣಿ ಸಂಕುಲಗಳ ಆಗರವಾಗಿದೆ. ದೇಶದ ಪ್ರಮುಖ ಅರಣ್ಯ ಪ್ರಾಕಾರಗಳನ್ನು ಇಲ್ಲಿ ಕಾಣಬಹುದು. ಅರಣ್ಯ ಮತ್ತು ಕರಾವಳಿಯ ಸಮುದ್ರ ಸಂಪತ್ತು ನಮ್ಮ ಜನಜೀವನದ ಜೀವನಾಡಿಯಾಗಿದೆ. ೪೦ಕ್ಕೂ ಹೆಚ್ಚಿನ ಆದಿವಾಸಿ ಬುಡಕಟ್ಟು ಸಮುದಾಯಗಳು ಈ ಪ್ರದೇಶದಲ್ಲಿ ನೆಲೆ ನಿಂತಿದೆ. ಎರಡು ಕೋಟಿಗೂ ಹೆಚ್ಚು ಜನರ ಜೀವನೋಪಾಯದ ಅಡಿಗಲ್ಲಾಗಿ ಈ ಅರಣ್ಯ ಮತ್ತು ಸಮುದ್ರದ ಸಂಪನ್ಮೂಲಗಳು ಇವೆ. ಎಂಟು ಜೀವ ನದಿಗಳು ಪಶ್ಚಿಮ ಘಟ್ಟಗಳಲ್ಲಿ ಜನ್ಮ ತಳೆದು ಅಪಾರ ಪ್ರಮಾಣದ ಜೀವನೋಪಾಯವನ್ನು ಕಲ್ಪಿಸಿವೆ. ಇದು ಇಡೀ ಪ್ರಪಂಚದ ತಾಪಮಾನವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸುವ ಪಶ್ಚಿಮ ಘಟ್ಟದ ಪ್ರದೇಶವಾಗಿದೆ. ಪಶ್ಚಿಮ ಘಟ್ಟದ ಮಧ್ಯ ಭಾಗ ಉತ್ತರ ಕನ್ನಡ ಜಿಲ್ಲೆಯಲ್ಲಿದೆ. ಈ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆ ಮತ್ತು ಸದ್ಬಳಕೆಗೆ ಬೇಕಾಗುವ ಮಾನವ ಸಂಪನ್ಮೂಲಗಳನ್ನು ತಯಾರು ಮಾಡುವುದನ್ನು ಗುರಿಯನ್ನಿಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾಲಯಗಳು ದೇಶದಲ್ಲೇ ಇಲ್ಲ ಎಂದರು.
ಕ್ಷಿಪ್ರವಾಗಿ ಬದಲಾಗುತ್ತಿರುವ ಹವಾಮಾನ ಕೂಡ ಈ ಅಮೂಲ್ಯ ಸಂಪನ್ಮೂಲಗಳಿಗೆ ದಕ್ಕೆ ತಂದೊಡ್ಡಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ಪರಿಸರ ಅರಣ್ಯ ಮತ್ತು ಸಮುದ್ರ ಸಂಪನ್ಮೂಲಗಳ ನಿರ್ವಹಣೆಯ ಬೋಧನೆಯು ಮೂಲಭೂತ ವಿಜ್ಞಾನ, ಅನ್ವಯಿಕ ವಿಜ್ಞಾನ, ಜನಾಂಗೀಯ ಅಧ್ಯಯನ, ಸಮಾಜ ವಿಜ್ಞಾನ ಮತ್ತು ಮಾನವೀಯತೆ ಕಲೆಗಳೊಂದಿಗೆ ಮಿಳಿತಗೊಂಡಿದ್ದು ಅವುಗಳನ್ನು ಒಟ್ಟಾರೆ ಬೋಧಿಸಲು, ತನ್ಮೂಲಕ ಮಾನವ ಸಂಪನ್ಮೂಲ ರೂಪಿಸಲು ಒಂದು ವಿಶಿಷ್ಟ ವಿಶ್ವವಿದ್ಯಾಲಯದ ಅವಶ್ಯಕತೆ ಇದೆ. ಇಂತಹ ವಿಶ್ವವಿದ್ಯಾಲಯದಲ್ಲಿ ಮಾನವ ಸಂಪನ್ಮೂಲಗಳನ್ನು ರೂಪಿಸುವುದರ ಜತೆಗೆ ಉತ್ಕೃಷ್ಟ ಅಂತಾರಾಷ್ಟ್ರೀಯ ಮಟ್ಟದ ಸಂಶೋಧನೆಗಳನ್ನು ಕೈಗೊಳ್ಳುವ ಅವಶ್ಯಕತೆ ಇದೆ ಎಂದು ಹೇಳಿದರು.
ಇದನ್ನೂ ಓದಿ | RRR Golden Globe Award | ʼಆರ್‌ಆರ್‌ಆರ್ʼಗೆ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ತಂದುಕೊಟ್ಟ ಎಂ ಎಂ ಕೀರವಾಣಿ ಹಿನ್ನೆಲೆ ಗೊತ್ತಾ?
ವಿಷಯ ತಜ್ಞರು ಮತ್ತು ವಿವಿಧ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರೊಂದಿಗೆ ಸಂವಾದದ ಆಧಾರದಲ್ಲಿ ಇಂತಹ ಒಂದು ವಿಶಿಷ್ಟ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಉತ್ತರ ಕನ್ನಡ ಜಿಲ್ಲೆಯ ಕೇಂದ್ರ ಸ್ಥಾನವಾದ ಶಿರಸಿ ನಗರವು ಅತ್ಯಂತ ಪ್ರಶಸ್ತವಾದ ಆಯ್ಕೆಯಾದ ಸ್ಥಳವಾಗಿದೆ. ಇಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಲು ಬೇಕಾಗುವ ಮೂಲಭೂತ ಸೌಕರ್ಯಗಳ ಜತೆ ಅರಣ್ಯ ಸಂಪತ್ತಿಗೆ ಮತ್ತು ಸಮುದ್ರ ತೀರಕ್ಕೆ ಸನಿಹದಲ್ಲಿದ್ದು, ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳನ್ನು ನಡೆಸಲು ಅತ್ಯಂತ ಪ್ರಶಸ್ತವಾಗಿದೆ. ಈಗಾಗಲೇ ಶಿರಸಿಯು ಪರಿಸರ ವಿಷಯದಲ್ಲಿ ದೇಶದಲ್ಲಿಯೇ ಹೆಸರುವಾಸಿಯಾಗಿದ್ದು ಇಂತಹ ವಿಶ್ವವಿದ್ಯಾಲಯ ಸ್ಥಾಪನೆಗೆ ಸೂಕ್ತವಾದ ಸ್ಥಳವಾಗಿದೆ. ಪ್ರಸ್ತಾವಿತ ವಿಶ್ವವಿದ್ಯಾಲಯವು ಬಹುತೇಕ ಎಲ್ಲಾ ವಿಜ್ಞಾನ, ಕಲೆ ಮತ್ತು ಮಾನವೀಯತೆ ನಿಕಾಯಗಳನ್ನು ಹೊಂದಿ ರಾಷ್ಟ್ರೀಯ ಶಿಕ್ಷಣ ನೀತಿಯ ಮೂಲಭೂತ ಆಶೋತ್ತರಗಳಿಗೆ ಅನುಗುಣವಾಗಿದೆ. ಈ ಎಲ್ಲ ಅಂಶಗಳನ್ನು ಒಳಗೊಂಡ ಪ್ರಸ್ತಾವವನ್ನು ಮುಖ್ಯಮಂತ್ರಿಗೆ ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷ ಕೆ.ವಿ.ಖೂರ್ಸೆ, ಪ್ರಮುಖರಾದ ಕೆ.ಎನ್.ಹೊಸ್ಮನಿ, ಸರಸ್ವತಿ ರವಿ, ದಯಾನಂದ, ರಿಯಾಜ ಸಾಗರ ಇದ್ದರು.
ಇದನ್ನೂ ಓದಿ | Isha Foundation | ಚಿಕ್ಕಬಳ್ಳಾಪುರದ ಬಳಿ ಈಶ ಫೌಂಡೇಷನ್ ಕಾರ್ಯಕ್ಕೆ ಹೈಕೋರ್ಟ್ ತಡೆ