Site icon Vistara News

Sirsi News: ವಿಎಚ್‌ಪಿ ಮುಖಂಡ, ಅಜಾತಶತ್ರು ಕೇಶವ ಹೆಗಡೆ ಅಂತಿಮ ವಿದಾಯ

VHP, RSS leaders and many others Final respect to Keshav Hegdes body

ಶಿರಸಿ: ಕೇಶವ ಹೆಗಡೆ (Keshava Hegde) ಅಜಾತಶತ್ರುವಾಗಿದ್ದರು. ಅವರ ಅಗಲಿಕೆಯು ಕುಟುಂಬಕ್ಕೆ, ವಿಶ್ವ ಹಿಂದೂ ಪರಿಷತ್‌ಗೆ (VHP) ಮಾತ್ರ ನಷ್ಟವಲ್ಲ. ಬದಲಿಗೆ ಹಿಂದೂ (Hindu) ಸಮಾಜಕ್ಕೆ ದೊಡ್ಡ ನಷ್ಟ ಎಂದು ವಿಶ್ವ ಹಿಂದೂ ಪರಿಷತ್ ಕೇಂದ್ರೀಯ ಸಹ ಕಾರ್ಯದರ್ಶಿ ತಮಿಳುನಾಡಿನ‌ ಸ್ತಾನ‌ ಮಲೈನ್ ಬಣ್ಣಿಸಿದರು.

ನಗರದ ನೆಮ್ಮದಿಯ ಸದ್ಗತಿಯಲ್ಲಿ ಗುರುವಾರ ಅವರು ವಿಶ್ವ ಹಿಂದೂ ಪರಿಷತ್ ದಕ್ಷಿಣ ಕ್ಷೇತ್ರ ಕಾರ್ಯದರ್ಶಿ ಕೇಶವ ಹೆಗಡೆ ಅವರ ಪಾರ್ಥೀವ ಶರೀರಕ್ಕೆ ಅಂತಿಮ‌ ನಮನ ಸಲ್ಲಿಸಿ ಮಾತನಾಡಿದರು‌.

ಗೋ ಮಾತೆಗೆ, ಹಿಂದೂ‌ ಸಮಾಜಕ್ಕೆ, ಸನ್ಯಾಸಿಗಳಿಗೆ ಇಂದು ಪೂರಕ ವಾತಾವರಣ ಇಲ್ಲ. ಕೇಶವ ಹೆಗಡೆ ಅವರಂಥವರ ಅಗತ್ಯತೆ ಹಿಂದೆಂಗಿಂತ ಇಂದು ಹೆಚ್ಚಿತ್ತು, ಹಿಂದೂ‌ ಸಮಾಜಕ್ಕೆ ಪೂರಕ ವಾತಾವರಣ ಇಲ್ಲ. ಹಿಂದೂಗಳ ರಕ್ಷಣೆ ಅಗತ್ಯವಿದೆ‌ ಎಂದು ಹೇಳುತ್ತಿದ್ದವರು. ಅವರು ಹಿಂದೂ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದ ಅವರು, ನನಗೆ ಕೇವಲ 27 ತಿಂಗಳ ಪರಿಚಯ, ಅವರ ಅಗಲಿಕೆ ಸಂಘಟನೆಗೆ ದೊಡ್ಡ‌ ನಷ್ಟ. ಅವರು ಮೃದು ಭಾಷಿ, ಸತತ ಸಂಪರ್ಕಧಾರಿ, ಇನ್ಬೊಬ್ಬರಿಗೆ ಅವರ ಕಾರ್ಯ ಹೋಲಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ವಿಎಚ್‌ಪಿ ಹಿರಿಯ ಮುಖಂಡ ಕೇಶವ ಹೆಗಡೆ ಅವರ ನಿಧನದ ಹಿನ್ನೆಲೆಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ವಿಎಚ್‌ಪಿ ಕೇಂದ್ರೀಯ ಸಹ ಕಾರ್ಯದರ್ಶಿ ತಮಿಳುನಾಡಿನ‌ ಸ್ತಾನ‌ ಮಲೈನ್ ಮಾತನಾಡಿದರು.

ಇದನ್ನೂ ಓದಿ: Novak Djokovic: ಟವೆಲ್​ನಿಂದ ಮೈದಾನ ಒಣಗಿಸಿದ ನೊವಾಕ್‌ ಜೊಕೋವಿಕ್‌

ಕೇಶವ ಹೆಗಡೆ ಅವರ ಆದರ್ಶವನ್ನು ನಾವು ಪಾಲಿಸಬೇಕು. ಅವರ ಆದರ್ಶದ ಅನುಷ್ಠಾನಕ್ಕೆ ಇಂದಿನ ಯುವಕರೂ ಹೆಚ್ಚಿನ‌ ಸಮಯ ಕೊಡಬೇಕು ಎಂದೂ ಅವರು ಮನವಿ ಮಾಡಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ವ್ಯವಸ್ಥಾ ಪ್ರಮುಖ್ ಮಂಗೇಶ ಭೇಂಡೆ ಮಾತನಾಡಿ, ಕೇಶವ ಅವರು ಯಾರ ಜತೆಗೂ ಬೇಸರ ಮಾಡಿಕೊಳ್ಳಲಿಲ್ಲ. ಎಲ್ಲರನ್ನೂ ಸಂಘಟನೆಗೆ ಬಳಸಿಕೊಂಡು ಮುನ್ನಡೆದವರು. ಎಂಥ ವೇಳೆಯಲ್ಲೂ ವಿಚಲಿತರಾಗದೆ ಸಮಚಿತ್ತ ದೃಷ್ಟಿಯಲ್ಲಿ ವಿಎಚ್‌ಪಿಗೆ ಸಾಕಷ್ಟು ಕೊಡುಗೆ ನೀಡಿದವರು ಎಂದರು. ರಾಮ ಜನ್ಮಭೂಮಿ ಹೋರಾಟ‌ ಸಂದರ್ಭದಲ್ಲಿ ತೊಡಗಿಸಿಕೊಂಡವರು. ಈಗ ಜನವರಿಗೆ ಅಲ್ಲಿ ದೇವರ ಪ್ರತಿಷ್ಠಾಪನೆ ಆಗಲಿದೆ. ಆದರೆ, ಅದನ್ನು‌ ನೋಡುವ ಭಾಗ್ಯ ಅವರಿಗಿಲ್ಲವಾಯಿತು. ಆದರೆ ಅವರು ನೇತ್ರದಾನ ಮಾಡಿ ಆ ಕಣ್ಣು ರಾಮನ ಪ್ರತಿಷ್ಠಾಪನೆ ನೋಡಲಿದೆ ಎಂಬ ಸಮಾಧಾನವಿದೆ ಎಂದರು.

ದಕ್ಷಿಣ‌ ಪ್ರಾಂತ ಅಧ್ಯಕ್ಷ ಎಂ‌.ಬಿ. ಪುರಾಣಿಕ ಮಾತನಾಡಿ, ಕೊನೇ ನಿಮಿಷದ ತನಕ ಕರ್ತವ್ಯ ನಿರ್ವಹಿಸಿದ ಕೇಶವ ಹೆಗಡೆ ಅವರು‌ ಕಾರ್ಯಕರ್ತರಿಗೆಲ್ಲ ಮಾದರಿ. ಅವರು ಇನ್ನೊಬ್ಬರಿಗೋಸ್ಕರ ಬದುಕಿದವರು. ಜಟಿಲ ಸಂದರ್ಭದಲ್ಲೂ ಉದ್ವಿಗ್ನರಾಗದೆ ಸಮಾಧಾನವಾಗಿ ಆಲಿಸಿ ಕೆಲಸ ಮಾಡಿದ ಸಂತ. ಸದಾನಂದ ಕಾಕಡೆ ಅವರ ಜೊತೆ ಪಳಗಿದವರು. ಸಮಾಜಕ್ಕೋಸ್ಕರ ಬಾಳಿ ಬದುಕಿದವರು ಎಂದು ಬಣ್ಣಿಸಿದರು.

ಇದನ್ನೂ ಓದಿ: Education News : ತಾಂಜಾನಿಯಾದಲ್ಲಿ ಐಐಟಿಯ ಮೊದಲ ವಿದೇಶಿ ಕ್ಯಾಂಪಸ್‌

ವಿಎಚ್‌ಪಿಯ ಉತ್ತರ ಪ್ರಾಂತ ಉಪಾಧ್ಯಕ್ಷ ಲಿಂಗರಾಜಪ್ಪ ಅಪ್ಪ, ಆರ್ ಎಸ್ ಎಸ್ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ, ವಿ ಎಚ್ ಪಿ ಉತ್ತರ ಪ್ರಾಂತ ಉಪಾಧ್ಯಕ್ಷ ಗಂಗಾಧರ ಹೆಗಡೆ, ವಿಎಚ್‌ಪಿ ಅಖಿಲ‌ ಭಾರತೀಯ ‌ಸಂಘಟನಾ‌ ಮಹಾ ಮಂತ್ರಿ ವಿನಾಯಕ ರಾವ್ ದೇಶಪಾಂಡೆ, ವಿಭಾಗ ಬೌದ್ಧಿಕ ಪ್ರಮುಖ ಮಧು ಕಿರಗಾರ, ಬಜರಂಗ ದಳದ ಸೂರ್ಯನಾರಾಯಣ, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಕಾಂಗ್ರೆಸ್ ವಕ್ತಾರ ದೀಪಕ ದೊಡ್ಡೂರು, ಬಿಜೆಪಿ‌ ಜಿಲ್ಲಾ ಅಧ್ಯಕ್ಷ ವೆಂಕಟೇಶ ನಾಯ್ಕ, ಎನ್.ಎಸ್.ಹೆಗಡೆ ಸೇರಿದಂತೆ ಅನೇಕ ಜನರು ಅಂತಿಮ ನಮನ ಸಲ್ಲಿಸಿದರು.

ಶ್ರದ್ದಾಂಜಲಿ ಸಭೆಯ ಬಳಿಕ ಪಾರ್ಥೀವ ಶರೀರಕ್ಕೆ ಸಂಘದ ಪ್ರಾರ್ಥನೆ, ಶಾಂತಿ ಮಂತ್ರದ ಮೂಲಕ ಸಾಮೂಹಿಕವಾಗಿ ಸಲ್ಲಿಸಿ ನಮಿಸಲಾಯಿತು.

ಇದನ್ನೂ ಓದಿ: Tamim Iqbal: ಕಣ್ಣೀರು ಸುರಿಸುತ್ತಲೇ ಕ್ರಿಕೆಟ್​ಗೆ ವಿದಾಯ ಹೇಳಿದ ತಮೀಮ್ ಇಕ್ಬಾಲ್

ಪಂಚಭೂತದಲ್ಲಿ ಲೀನ

ಬುಧವಾರ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದ ವಿಎಚ್‌ಪಿ ಹಿರಿಯ ಮುಖಂಡ ಕೇಶವ ಹೆಗಡೆ ಅವರ ಪ್ರಾರ್ಥೀವ ಶರೀರವನ್ನು ಗುರುವಾರ ಸ್ವಗೃಹ ಮಣ್ಣಿಮನೆಗೆ ಕರೆದೊಯ್ದು ನಂತರ ನಗರದ ʼನೆಮ್ಮದಿಯ ಸದ್ಗತಿʼಯಲ್ಲಿ ಅಂತಿಮ ವಿಧಿ ವಿಧಾನ ನಡೆಸಲಾಯಿತು‌. ಅವರ ಸಹೋದರನ ಮಗ ಸುದರ್ಶನ ಹೆಗಡೆ‌ ಅಗ್ನಿ ಸ್ಪರ್ಶ ಮಾಡಿದರು.

ಸಮಾಜದ ಋಣ ತೀರಿಸಲು ಕಂಕಣ ಬದ್ದರಾಗಿದ್ದವರು ಕೇಶವ ಹೆಗಡೆ. ತನು ಮನ ಧನ ಎಲ್ಲವನ್ನೂ ಸಾಸಿವೆ ಕಾಳಿನಷ್ಟೂ ತಮಗಾಗಿ ಇಟ್ಟುಕೊಳ್ಳದೇ ರಾಷ್ಟ್ರ ಜೀವನಕ್ಕೆ‌ ಮುಡಿಪಾಗಿಟ್ಟರು. ಕಷ್ಟದಲ್ಲೂ ತತ್ವದಿಂದ ಹಿಂದೆ ಹೋಗದವರು ಕೇಶವಜೀ ಅವರಾಗಿದ್ದರು.

– ಮಂಗೇಶ ಭೇಂಡೆ, ಅಖಿಲ ಭಾರತ ವ್ಯವಸ್ಥಾ ಪ್ರಮುಖ, ಆರ್‌ಎಸ್ಎಸ್

Exit mobile version