ಭಾಸ್ಕರ್ ಆರ್. ಗೆಂಡ್ಲ, ವಿಸ್ತಾರ ನ್ಯೂಸ್
ಶಿರಸಿ: ಅಂದಿನ ಬಿಜೆಪಿ ಸರ್ಕಾರದ (BJP Govt) ಅಧಿಕಾರವಧಿಯಲ್ಲಿ ಶಿರಸಿಗೆ ಮಂಜೂರು ಮಾಡಿದ್ದ ಸಂಚಾರ ಪೊಲೀಸ್ ಠಾಣೆ (Traffic police station) ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಇದರಿಂದ ಶಿರಸಿ ನಗರ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆಯಿಂದ ಸಾರ್ವಜನಿಕರು ನಿತ್ಯವೂ ಕಿರಿಕಿರಿ ಅನುಭವಿಸುವಂತಾಗಿದೆ.
ಹೌದು….ಉತ್ತರ ಕನ್ನಡ ಜಿಲ್ಲೆಯ ವಾಣಿಜ್ಯ ನಗರ ಶಿರಸಿ ಪಟ್ಟಣದಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರ ವ್ಯಾಪ್ತಿಯಲ್ಲಿ ಸರಿಯಾದ ವಾಹನ ನಿಲುಗಡೆ ವ್ಯವಸ್ಥೆ ಹಾಗೂ ಏಕಮುಖ ಸಂಚಾರ ವ್ಯವಸ್ಥೆ ಅನುಷ್ಠಾನದಲ್ಲಿನ ದೋಷಗಳು ಸಂಚಾರ ದಟ್ಟಣೆಗೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ಜತೆಗೆ ಸಂಚಾರ ಸುಗಮಗೊಳಿಸುವ ಉದ್ದೇಶದಿಂದ 2023ರ ಫೆಬ್ರವರಿಯಲ್ಲಿ ಸಂಚಾರ ಪೊಲೀಸ್ ಠಾಣೆ ಮಂಜೂರು ಮಾಡಲಾಗಿತ್ತು.
ಇದನ್ನೂ ಓದಿ: Gold Rate Today: ಬಂಗಾರದ ದರ ಯಥಾಸ್ಥಿತಿ, ಬೆಳ್ಳಿ ದರವೂ ಬದಲಾವಣೆ ಇಲ್ಲ
ಶಿರಸಿ ವೃತ್ತದಲ್ಲಿ 2021ರಲ್ಲಿ ಒಟ್ಟು 71 ಅಪಘಾತ ಪ್ರಕರಣಗಳು ದಾಖಲಾಗಿತ್ತು. ಅವುಗಳಲ್ಲಿ 15 ಜನ ಮೃತಪಟ್ಟಿದ್ದು, 93 ಜನ ಗಾಯಗೊಂಡಿದ್ದರು. 2015ರಿಂದ 2022ರವರೆಗೆ ಒಟ್ಟು 3184 ಅಪಘಾತ ಪ್ರಕರಣಗಳು ದಾಖಲಾಗಿವೆ. ಪ್ರಸಕ್ತ ವರ್ಷ ಈವರೆಗೆ 76ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. ಇದರಲ್ಲಿ 10 ಜನ ಮೃತಪಟ್ಟರೆ, 63 ಜನ ಗಾಯಗೊಂಡಿದ್ದಾರೆ. ಈ ಎಲ್ಲ ಸಮಸ್ಯೆ ನಿವಾರಣೆ ಉದ್ದೇಶದಿಂದ 1 ಪಿಎಸ್ಐ, 2 ಎಎಸ್ಐ, 8 ಹೆಡ್ ಕಾನ್‌ಸ್ಟೆಬಲ್ ಹಾಗೂ 31 ಸಿಬ್ಬಂದಿ ಸೇರಿ 42 ವಿವಿಧ ದರ್ಜೆಯ ಹುದ್ದೆಗಳೊಂದಿಗೆ ಸಂಚಾರ ಠಾಣೆ ಮಂಜೂರಾತಿ ಆದೇಶ ಹೊರಡಿಸಲಾಗಿತ್ತು. ಬದಲಾದ ಸರ್ಕಾರದ ವ್ಯವಸ್ಥೆಯಲ್ಲಿ ಇನ್ನೂ ಅನುಷ್ಠಾನಕ್ಕೆ ಅನುಮತಿ ಸಿಕ್ಕಿಲ್ಲ.
ನಗರ ವ್ಯಾಪ್ತಿಯಲ್ಲಿ ಮಾರಿಕಾಂಬಾ ದೇವಾಲಯ, ತೋಟಗಾರಿಕೆ ಕಾಲೇಜ್, ವಿವಿಧ ಆಸ್ಪತ್ರೆಗಳು, ಅನೇಕ ವಾಣಿಜ್ಯ ಸಂಸ್ಥೆಗಳು, ಮಾರುಕಟ್ಟೆ ಸೇರಿದಂತೆ ಅನೇಕ ಪ್ರೇಕ್ಷಣೀಯ ಸ್ಥಳಗಳಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುವ ಕಾರಣ ವಾಹನ ದಟ್ಟಣೆ ಸಮಸ್ಯೆ ಹೆಚ್ಚಿದೆ. ಇದರ ಜತೆಗೆ ಎರಡು ವರ್ಷಗಳಿಗೊಮ್ಮೆ ನಡೆಯುವ ಮಾರಿಕಾಂಬಾ ದೇವಿಯ ಜಾತ್ರೆ ಸಂದರ್ಭದಲ್ಲಿ ಸಂಚಾರ ದಟ್ಟಣೆ ಸಮಸ್ಯೆ ನಿರ್ವಹಣೆಗಾಗಿ ಜಿಲ್ಲೆಯ ಇತರ ಠಾಣೆಗಳಿಂದ ಪೊಲೀಸರನ್ನು ನಿಯೋಜಿಸಲಾಗುತ್ತದೆ.
ಇದನ್ನೂ ಓದಿ: Ather 450S : ಹೊಸ ಏಥರ್ 450 ಎಸ್ ಸ್ಕೂಟರ್ ಬಿಡುಗಡೆ, ಬೆಲೆ ಸೇರಿದಂತೆ ಎಲ್ಲ ಮಾಹಿತಿಗಳು ಇಲ್ಲಿವೆ
ನಗರದ ಹೃದಯ ಭಾಗವಾದ ಹಳೇ ಬಸ್ ನಿಲ್ದಾಣ ವೃತ್ತದಿಂದ ಹಿಡಿದು ಡ್ರೈವರ್ ಕಟ್ಟೆ, ಶಿವಾಜಿ ಚೌಕದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಪೊಲೀಸರು ನಿತ್ಯ ಹರಸಾಹಸ ಪಡಬೇಕಾದ ಸ್ಥಿತಿಯಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ನಗರದ ಕೆಲ ರಸ್ತೆಗಳನ್ನು ಏಕಮುಖ ಸಂಚಾರ ರಸ್ತೆಯನ್ನಾಗಿ ಪೊಲೀಸ್ ಇಲಾಖೆ ಗುರುತು ಮಾಡಿತ್ತು. ಆದರೆ, ಅದು ಕೆಲವೇ ದಿನಗಳಿಗೆ ಮಾತ್ರ ಸೀಮಿತವಾಗಿ ಇದೀಗ ಯಥಾರೀತಿ ಮೊದಲಿನಂತೆ ಸಂಚಾರ ವ್ಯವಸ್ಥೆ ನಡೆದಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.
ಶಿರಸಿಯಲ್ಲಿ ಮೂರು ಪೊಲೀಸ್ ಠಾಣೆಗಳಿದ್ದು, ಕೆಲವೊಮ್ಮೆ ಸಂಚಾರ ದಟ್ಟಣೆ ನಿಯಂತ್ರಿಸಲು ಸಿಬ್ಬಂದಿ ಕೊರತೆ ಸಹ ಎದುರಾಗುತ್ತಿದೆ. ಈ ಹಿಂದೆ ಇದ್ದ ರಸ್ತೆಯನ್ನು ವಿಸ್ತರಿಸಿ ನಗರದ ಮುಖ್ಯ ರಸ್ತೆಗಳನ್ನು ದ್ವಿ ಪಥ ಮಾರ್ಗಗಳಾಗಿ ನಿರ್ಮಿಸಲಾಗಿದೆ. ಆದರೂ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಬರುತ್ತಿಲ್ಲ. ಇದು ಪೊಲೀಸರಿಗೂ ಸಮಸ್ಯೆಯಾಗಿ ಕಾಡುತ್ತಿದೆ.
ಇದನ್ನೂ ಓದಿ: Prithvi Shaw: ಆಯ್ಕೆ ಸಮಿತಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ; ಪೃಥ್ವಿ ಶಾ
ಶಿರಸಿ ನಗರದಲ್ಲಿ ಸಂಚಾರ ಪೊಲೀಸ್ ಠಾಣೆ ಅನುಷ್ಠಾನದ ಅವಧಿಗಾಗಿ ಮೇಲಾಧಿಕಾರಿಗಳ ಅನುಮತಿ ಕೇಳಲಾಗಿದೆ. ಅವರ ನಿರ್ದೇಶನ ಬಂದ ನಂತರ ಕ್ರಮ ವಹಿಸಲಾಗುವುದು.
-ವಿಷ್ಣುವರ್ಧನ್, ಪೊಲೀಸ್ ವರಿಷ್ಠಾಧಿಕಾರಿ, ಉತ್ತರ ಕನ್ನಡ