ಶಿರಸಿ: ಅತ್ಯಂತ ಕಿರಿಯ ವಯಸ್ಸಿನಲ್ಲೇ ʼವಿಶ್ವಶಾಂತಿಗೆ ಯಕ್ಷ ನೃತ್ಯʼ ಮೂಲಕ ಕೊಡುಗೆ ನೀಡುತ್ತಿರುವ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆ ಹೆಸರು ಇದೀಗ ಜಾಗತಿಕ ಮಟ್ಟದಲ್ಲೂ (Sirsi News) ದಾಖಲಾಗಿದೆ.
ಲಂಡನ್ ಮೂಲದ ಪ್ರತಿಷ್ಠಿತ ವರ್ಲ್ಡ್ ರೆಕಾರ್ಡ್ ಸಂಸ್ಥೆಯು ತುಳಸಿ ಹೆಗಡೆ ಹೆಸರನ್ನು ತನ್ನ ವಿಶ್ವದಾಖಲೆಯ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಕೊಂಡಿದೆ. ಯಕ್ಷಗಾನ ಕಲಾ ಪ್ರಕಾರದ ಮೂಲಕ ವಿಶ್ವಶಾಂತಿಗೆ ಈವರೆಗೆ 9 ಕಲಾ ಕುಸುಮದ ಮೂಲಕ ನೀಡುತ್ತಿರುವ ಕೊಡುಗೆಗಳನ್ನು ಗಮನಿಸಿ ಮಕ್ಕಳ ವಿಭಾಗದ ತನ್ನ ದಾಖಲಾತಿಯಲ್ಲಿ ಸೇರಿಸಿಕೊಂಡಿದೆ.
ಬೆರಳ ತುದಿಯಲ್ಲಿ ನರ್ತನ ಮಾಡುವ ವಿದೇಶವೊಂದರ ನೃತ್ಯ ಕಲಾ ಪ್ರಕಾರ ಹೊರತುಪಡಿಸಿದರೆ ಈವರೆಗೆ ಪ್ರಪಂಚದ ಯಾವುದೇ ಕಲಾ ಪ್ರಕಾರ ಈ ದಾಖಲಾತಿ ಪಟ್ಟಿಗೆ ಸೇರ್ಪಡೆ ಆಗಿರಲಿಲ್ಲ ಎಂದು ಈ ಸಂಸ್ಥೆ ತಿಳಿಸಿದೆ. ಈ ದಾಖಲೆಗೆ ತುಳಸಿ ಹೆಗಡೆ ಹೆಸರು ಸೇರ್ಪಡೆಯಿಂದ ಯಕ್ಷ ರೂಪಕದ ಮೂಲಕ ಯಕ್ಷಗಾನದ ಹೆಸರೂ ಇದೇ ಪ್ರಥಮ ಬಾರಿಗೆ ಸೇರಿದಂತಾಗಿದೆ.
ಇದನ್ನೂ ಓದಿ: Bengaluru News: ಬೆಂಗಳೂರಿನ ವಿದ್ಯಾರ್ಥಿನಿಗೆ ಐಐಟಿ ಬಾಂಬೆಯ ಪ್ರತಿಷ್ಠಿತ ಪ್ರಶಸ್ತಿ
ಶಿರಸಿ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿರುವ ತುಳಸಿ ಹೆಗಡೆ ತನ್ನ 3ನೇ ವಯಸ್ಸಿನಿಂದಲೇ ಯಕ್ಷಗಾನ ಕ್ಷೇತ್ರಕ್ಕೆ ಬಾಲ ಹೆಜ್ಜೆ ಇಟ್ಟವಳು. ಐದೂವರೆ ವರ್ಷದಿಂದ ವಿಶ್ವ ಶಾಂತಿ ರೂಪಕಗಳನ್ನು ಪ್ರಸ್ತುತಗೊಳಿಸುತ್ತಿದ್ದಾಳೆ. ಪೌರಾಣಿಕ ಆಖ್ಯಾನಗಳ 9 ರೂಪಕಗಳನ್ನು ಪ್ರಸ್ತುತಗೊಳಿಸುವ ತುಳಸಿ, ರಾಜ್ಯ, ಹೊರ ರಾಜ್ಯಗಳಲ್ಲಿ 850ಕ್ಕೂ ಅಧಿಕ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾಳೆ. ಜತೆಗೆ ಹಿರಿಯ ಕಲಾವಿದರ ಜತೆ ಬೇರೆ ಬೇರೆ ಯಕ್ಷಗಾನ ಆಖ್ಯಾನಗಳಲ್ಲೂ ಪಾತ್ರ ಮಾಡುತ್ತಿದ್ದಾಳೆ.
ಇದನ್ನೂ ಓದಿ: Kannada New Movie: ಗೋಪಿನಾಥ ಬೆಟ್ಟದಲ್ಲಿ ನಡೆದ ಧರ್ಮ ಕೀರ್ತಿರಾಜ್ ಅಭಿನಯದ ʼಪ್ರೊಡಕ್ಷನ್ ನಂ 1ʼ ಚಿತ್ರದ ಮುಹೂರ್ತ
ಈಗಾಗಲೇ ತುಳಸಿ ಹೆಗಡೆ ಹೆಸರು ಇಂಡಿಯಾ ಬುಕ್ ಆಪ್ ರೆಕಾರ್ಡ್‌ನಲ್ಲಿಯೂ ದಾಖಲಾಗಿದ್ದು, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ನೀಡುವ ರಾಜ್ಯ ಮಟ್ಟದ ಬಾಲ ಗೌರವ ಪ್ರಶಸ್ತಿ, ಟೈಮ್ಸ್ ಆಫ್ ಇಂಡಿಯಾದ ದೇಶ ಮಟ್ಟದ 21 ವರ್ಷದೊಳಗಿನ ಅನ್ ಸ್ಟಾಪೇಬಲ್ 21 ಅವಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಅರಸಿ ಬಂದಿವೆ. ತುಳಸಿ ಹೆಗಡೆ ತನ್ನ ಪ್ರತಿಭೆಯಿಂದಲೇ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೂ ಅವಕಾಶ ಸಿಕ್ಕಿತ್ತು.