ಬೆಂಗಳೂರು: ರಾಜಧಾನಿ ಬೆಂಗಳೂರಿನ ಸೌಂದರ್ಯಕ್ಕೆ ಕಲಶದಂತಿರುವ ಕಬ್ಬನ್ ಪಾರ್ಕ್ (Cubbon park), ವಾಯುವಿಹಾರಿಗಳ ಪಾಲಿಗೆ ಸ್ವರ್ಗ ಎಂದರೆ ತಪ್ಪಾಗುವುದಿಲ್ಲ. ವೀಕೆಂಡ್ ಹಾಗೂ ಹಾಲಿಡೇ ಇದ್ದಾಗ ಬಹುತೇಕ ಮಂದಿ ಕಬ್ಬನ್ ಪಾರ್ಕ್‌ಗೆ ಭೇಟಿ ನೀಡುತ್ತಾರೆ. ಅದರಲ್ಲೂ ಸ್ಕೇಟಿಂಗ್‌ಗಾಗಿ (No Skating) ಬಹುತೇಕರು ಕಬ್ಬನ್‌ಪಾರ್ಕ್ ಅನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ತೋಟಗಾರಿಕಾ ಇಲಾಖೆ (Horticulture Department) ತಂದಿರುವ ಹೊಸ ರೂಲ್ಸ್ ಈಗ ಸ್ಕೇಟರ್ಸ್ ಕೆಂಗಣ್ಣಿಗೆ ಗುರಿಯಾಗಿದೆ.
ಬೆಂಗಳೂರಿಗೆ ಹಚ್ಚ ಹಸಿರಿನ ಹೊದಿಕೆಯಿಂದ ನಿಸರ್ಗದ ಮಧ್ಯೆ ಸ್ವಚ್ಛ ತಂಗಾಳಿಯಿಂದ ಕೂಡಿರುವ ಜಾಗ ಎಂದರೆ ಅದು ಕಬ್ಬನ್ ಪಾರ್ಕ್. ದುಡಿದು ದಣಿದು ಬಂದವರಿಗೆ ರಿಲ್ಯಾಕ್ಸ್ ಮಾಡಲು, ಮಕ್ಕಳಿಗೆ ಆಟ ಆಡಲು, ಕುಟುಂಬ ಸಮೇತ ಬಂದು ಕಾಲ ಕಳೆಯಲು ಕಬ್ಬನ್ ಪಾರ್ಕ್‌ಗೆ ಭೇಟಿ ನೀಡುತ್ತಾರೆ.
ಆದರೆ, ಇತ್ತೀಚೆಗೆ ಕಬ್ಬನ್‌ಪಾರ್ಕ್‌ನಲ್ಲಿ ವೀಕ್ ಟೈಮ್‌ನಲ್ಲಿ ವಾಹನಗಳ ಗಲಾಟೆ, ವೀಕೆಂಡ್‌ನಲ್ಲಿ ಸ್ಕೇಟರ್‌ಗಳ ಸಂಖ್ಯೆ ಜಾಸ್ತಿ ಆಗುತ್ತಿದೆ ಎಂಬ ಕೂಗು ಕೇಳಿಬರುತ್ತಿದೆ. ಇದರಿಂದ ವಾಕಿಂಗ್ ಮಾಡುವವರಿಗೆ ಕಿರಿಕಿರಿ ಆಗುತ್ತಿದೆ ಎಂಬ ದೂರುಗಳು ಬರುತ್ತಿವೆ ಎನ್ನಲಾಗಿದೆ. ಹೀಗಾಗಿ ತೋಟಗಾರಿಕಾ ಇಲಾಖೆಯು ಈ ನಿರ್ಧಾರಕ್ಕೆ ಬಂದಿದ್ದು, ಪಾರ್ಕ್ ಒಳಗಡೆ ಸ್ಕೇಟಿಂಗ್ ಮಾಡದಂತೆ ರೂಲ್ಸ್ ಮಾಡಿದೆ.
ಸ್ಕೇಟರ್ಸ್ಗಳಿಂದ ವಿರೋಧ
ಬೆಳಗಿನ ಹೊತ್ತು ವಾಕಿಂಗ್ ಮಾಡುವವರಿಗೆ ಸ್ಕೇಟರ್ಸ್ಗಳಿಂದ ಸಮಸ್ಯೆ ಆಗುತ್ತಿದೆ ಎಂದು ಇಲಾಖೆ ತೆಗೆದುಕೊಂಡಿರುವ ಈ ನಿರ್ಧಾರಕ್ಕೆ ಸ್ಕೇಟರ್ಸ್ಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಇದೇ ರಸ್ತೆಯಲ್ಲಿ ಸಾಕಷ್ಟು ವಾಹನಗಳು ಓಡಾಡುತ್ತವೆ. ಆಗ ಇವರಿಗೆ ಸಮಸ್ಯೆಯಾಗುವುದಿಲ್ಲವೇ? ಆದರೆ, ನಾವು ರಸ್ತೆ ಬದಿಯಲ್ಲಿ ಸ್ಕೇಟಿಂಗ್ ಮಾಡಿದರೆ ಹೇಗೆ ಸಮಸ್ಯೆಯಾಗುತ್ತದೆ ಎಂದು ಸ್ಕೇಟರ್ ಅಬ್ಬಾಸ್ ಪ್ರಶ್ನೆ ಮಾಡಿದ್ದಾರೆ. ಇಲಾಖೆಯು ಈ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: Pratap Simha: ಗದಗದಲ್ಲಿ ಕೂಲ್ ಡ್ರಿಂಕ್ಸ್ ವ್ಯಾಪಾರಿಗೆ ನಷ್ಟ; ಹಣ ನೀಡಿ ಮಾನವೀಯತೆ ಮೆರೆದ ಪ್ರತಾಪ್ ಸಿಂಹ
ಈ ಹಿಂದೆ ಕಬ್ಬನ್‌ಪಾರ್ಕ್‌ನಲ್ಲಿ ಪ್ರೇಮಿಗಳಿಗೆ ಕಡಿವಾಣ ಹಾಕುತ್ತೇವೆ ಎಂದು ಮೈಕ್ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿತ್ತು. ಈ ನಿರ್ಧಾರದಿಂದ ಜನರ ಮೆಚ್ಚುಗೆಗೆ ಪಾತ್ರವಾಗಿದ್ದ ತೋಟಗಾರಿಕೆ ಇಲಾಖೆ, ಈಗ ಸ್ಕೇಟರ್ಸ್‌ಗಳಿಗೆ ನಿಯಮ ಮಾಡಲು ಹೋಗಿ ಸ್ಕೇಟರ್ಸ್ಗಳ ಕಣ್ಣಲ್ಲಿ ವಿಲನ್ ಆಗಿದೆ. ತಮ್ಮ ಪಾಡಿಗೆ ತಾವು ಸ್ಕೇಟಿಂಗ್ ಮಾಡುತ್ತಿದ್ದವರು, ಈ ಹೊಸ ರೂಲ್ಸ್ನಿಂದ ಬೇಸರಗೊಂಡಿದ್ದಾರೆ. ಕೇವಲ ವಾಹನಗಳೇ ತುಂಬಿರುವ ಬೆಂಗಳೂರಲ್ಲಿ ಎಲ್ಲಿ ಹೋಗಿ ಸ್ಕೇಟಿಂಗ್ ಮಾಡಬೇಕೆಂದು ಕಿಡಿಕಾರಿದ್ದಾರೆ.