Site icon Vistara News

Skill Competition: ವಿಶ್ವ ಮಟ್ಟದ ಕೌಶಲ್ಯ ಸ್ಪರ್ಧೆಯಲ್ಲಿ ವಿಜೇತರಿಗೆ ಕೌಶಲ್ಯ ನಿಗಮದಿಂದ ತಲಾ 2 ಲಕ್ಷ ಬಹುಮಾನ

#image_title

ಬೆಂಗಳೂರು: ವಿಶ್ವ ಮಟ್ಟದ ಕೌಶಲ್ಯ ಸ್ಪರ್ಧೆಯಲ್ಲಿ (Skill Competition- 2022) ವಿಜೇತರಾದ ಸಾಧಕರನ್ನು ವಿಕಾಸಸೌಧದಲ್ಲಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಗುರುವಾರ ಸನ್ಮಾನಿಸಿದರು. ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆ(ಟಿಟಿಟಿಐ)ಯಿಂದ ತರಬೇತಿ ಪಡೆದಿರುವ ವೈ.ಪಿ.ಲಿಖಿತ್‌ಕುಮಾರ್, ಎಸ್‌.ಎನ್‌. ಕಾರ್ತಿಕ್‌ ಗೌಡ ಮತ್ತು ಎನ್‌. ಅಖಿಲೇಶ್‌ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮೂವರೂ ವಿಜೇತರಿಗೆ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ತಲಾ 2 ಲಕ್ಷ ರೂ.ಗಳನ್ನು ನಗದು ಪುರಸ್ಕಾರವಾಗಿ ಪ್ರದಾನ ಮಾಡಲಾಯಿತು. ವಿಜೇತರ ಪೈಕಿ ಕಾರ್ತೀಕ್‌ ಮತ್ತು ಅಖಿಲೇಶ್‌ ಅವರು ಜರ್ಮನಿಯಲ್ಲಿ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಮೆಕ್ಯಾಟ್ರಾನಿಕ್ಸ್‌ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದು, ಲಿಖಿತ್‌ಕುಮಾರ್ ಅವರು ಸ್ವಿಜರ್ಲೆಂಡ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಪೋಟ್ರೋಟೈಪ್‌ ಮಾಡೆಲಿಂಗ್‌ ಸ್ಕಿಲ್ಸ್‌ ವಿಭಾಗದಲ್ಲಿ ಕಂಚಿನ ಪದಕಕ್ಕೆ ಪಾತ್ರರಾಗಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಅಶ್ವತ್ಥನಾರಾಯಣ ಯುವಜನರಿಗೆ ಆದಷ್ಟು ಬೇಗ ಆಧುನಿಕ ತರಬೇತಿ ಕೊಡುವುದನ್ನು ಸರ್ಕಾರವು ಗಂಭೀರವಾಗಿ ಕೈಗೆತ್ತಿಕೊಂಡಿದೆ. ಈ ವಿಷಯದಲ್ಲಿ ಟೊಯೋಟಾ ಕಿರ್ಲೋಸ್ಕರ್‌ ಮೋಟಾರ್ಸ್‌ ತಾಂತ್ರಿಕ ತರಬೇತಿ ನೀಡುವ ಮೂಲಕ ಇತರ ಕಂಪನಿಗಳಿಗೆ ಮೇಲ್ಪಂಕ್ತಿಯಾಗಿದೆ. ಈ ಮೂವರು ವಿಜೇತರು ಜಾಗತಿಕ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದನ್ನೂ ಓದಿ: ಈ ಐಟಿ ಕಂಪನಿಯಲ್ಲಿ ಕೆಲಸದ ಅವಧಿ ಮುಗಿದ ಮೇಲೆ ಕಂಪ್ಯೂಟರ್​ ಎಚ್ಚರಿಕೆ ನೀಡುತ್ತದೆ!; ಶಟ್​ಡೌನ್​​ಗೆ 10 ನಿಮಿಷ ಮಾತ್ರ ಟೈಮ್​

ಕಾರ್ಯಕ್ರಮದಲ್ಲಿ ಟೊಯೋಟಾದ ಕಾರ್ಯನಿರ್ವಾಹಕ ಉಪಾಧ್ಯಕ್ಷ ಸ್ವಪ್ನೇಶ್‌ ಮರು, ಹಿರಿಯ ಉಪಾಧ್ಯಕ್ಷ ಸುದೀಪ್‌ ದಳವಿ, ಉಪಾಧ್ಯಕ್ಷ ಜಿ.ಶಂಕರ್, ತಾಂತ್ರಿಕ ಸಲಹೆಗಾರ ಹಿರೊಕಿ ಅಂಡೊ, ಉಪ ಪ್ರಧಾನ ವ್ಯವಸ್ಥಾಪಕ ಆರ್.ರೋಷನ್, ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಆರ್. ಅಶ್ವಿನ್‌ ಗೌಡ ಇದ್ದರು.

Exit mobile version