ಹಾನಗಲ್: ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸುವ ವಿಸ್ತಾರ ನ್ಯೂಸ್‌ನ ʼನಮ್ಮೂರ ಶಾಲೆ ನಮ್ಮೆಲ್ಲರ ಶಾಲೆʼ ಅಭಿಯಾನಕ್ಕೆ ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಅವರು ಕೈಜೋಡಿಸಿದ್ದು, ಹಾನಗಲ್ ತಾಲೂಕಿನ 50 ಸರ್ಕಾರಿ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ (Smart Classe) ಅಳವಡಿಕೆ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಿದರು.
ಹಾನಗಲ್ ಪಟ್ಟಣದ ಗುರುಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಶ್ರೀನಿವಾಸ ಮಾನೆ ಅವರು, ತಾಲೂಕಿನ 223 ಸರ್ಕಾರಿಗಳಲ್ಲಿ 50 ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಅಳವಡಿಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಶಾಲೆಗಳಿಗೆ ಅಳವಡಿಕೆ ಮಾಡುತ್ತೇವೆ. ಮಕ್ಕಳ ಬೌದ್ಧಿಕ ಮಟ್ಟ ಸುಧಾರಿಸಲು ಸ್ಮಾರ್ಟ್ ಕ್ಲಾಸ್ ನೆರವಾಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ | UPSC CSE 2024: ಯುಪಿಎಸ್‌ಸಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ನಿಯಮದಲ್ಲಿದೆ ಕೆಲವು ಬದಲಾವಣೆ; ಇಲ್ಲಿದೆ ಮಾಹಿತಿ
ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ಮಾತನಾಡಿ, ಹಾನಗಲ್ ತಾಲೂಕಿನಲ್ಲಿ ಶಾಸಕ ಶ್ರೀನಿವಾಸ ಮಾನೆ ಅವರ ನೇತೃತ್ವದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಡಿಜಿಟಲ್ ಕ್ಲಾಸ್‌ಗಳ ವ್ಯವಸ್ಥೆಯನ್ನು ಹಂತ ಹಂತವಾಗಿ ಮಾಡಲಾಗುತ್ತಿದೆ. ಸ್ಮಾರ್ಟ್ ಕ್ಲಾಸ್‌ನಿಂದ ದೃಶ್ಯ ಮತ್ತು ಶ್ರಾವ್ಯದ ಮೂಲಕ ಪಠ್ಯವನ್ನು ಸುಲಭವಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗುವುದರಿಂದ ಕಲಿಕೆ ಮತ್ತಷ್ಟು ಸುಧಾರಣೆ ಆಗಲಿದೆ ಎಂದು ತಿಳಿಸಿದರು.
2023-24 41ಕ್ಲಬ್ ಅಧ್ಯಕ್ಷ ಶ್ರೀನಿವಾಸು ಸರಸ್ವತುಲಾ ಮಾತನಾಡಿ, ಡಿಜಿಟಲ್ ಶಿಕ್ಷಣ ಎಂಬುವುದು 41ಕ್ಲಬ್‌ನ ದೀರ್ಘಾವಧಿ ಯೋಜನೆಯಾಗಿದೆ. ಡಿಜಿಟಲ್ ಕ್ಲಾಸ್ ರೂಂಗಳು ವಿದ್ಯಾರ್ಥಿಗಳಿಗೆ ಪಠ್ಯವನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿ ಬೆಳೆಯುತ್ತದೆ ಎಂದು ಹೇಳಿದರು.
ಇದನ್ನೂ ಓದಿ | Raja Marga Column : ನಿಮ್ಮ ಮಗು ಮಗುವಾಗಿರಲಿ, ರಿಯಾಲಿಟಿ ಮಾರ್ಕೆಟ್ ಸರಕು ಆಗದಿರಲಿ!
ಇದೇ ವೇಳೆ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಪರೀಕ್ಷಾ ಪೂರ್ವ ತಯಾರಿಯ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಅನಿಲ ಮಲ್ಲಪ್ಪ, ವಿಜಯ ಮಾನೆ ಉಪಸ್ಥಿತರಿದ್ದರು.