ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು 2021 ಹಾಗೂ 2022ನೇ ಸಾಲಿನ ʻಶ್ರೀಮತಿ ಲಕ್ಷ್ಮೀದೇವಿ ಮತ್ತು ಎಸ್. ರಾಮಚಂದ್ರ ಬಾಯರ್ ದತ್ತಿ ʼ ಪ್ರಶಸ್ತಿಗೆ (Datti Awards) ಸಿ.ವಿ. ಮಹದೇವಯ್ಯ ಮತ್ತು ಟಿ.ಎಸ್. ರಾಘವೇಂದ್ರ ರಾವ್ ಅವರನ್ನು ಆಯ್ಕೆ ಮಾಡಲಾಗಿದೆ.
ಬೆಂಗಳೂರಿನ ಗಣೇಶ್ ಫುಡ್ ಫ್ರಾಡಕ್ಟ್ಸ್ ( ಪ್ರೈ) ಲಿಮಿಟೆಡ್ ಸಂಸ್ಥೆ ವತಿಯಿಂದ ನಾಗರಾಜರಾವ್ ಅವರು `ಶ್ರೀಮತಿ ಲಕ್ಷ್ಮೀದೇವಿ ಮತ್ತು ಎಸ್. ರಾಮಚಂದ್ರ ಬಾಯರ್’ ಅವರ ಹೆಸರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ವಿಶೇಷ ದತ್ತಿ ನಿಧಿಯನ್ನು ಸ್ಥಾಪಿಸಿ, ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡು ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸುತ್ತಿರುವ ಒಬ್ಬರನ್ನು ಗುರುತಿಸಿ ಶ್ರೀಮತಿ ಲಕ್ಷ್ಮೀದೇವಿ ಮತ್ತು ಎಸ್. ರಾಮಚಂದ್ರ ಬಾಯರ್ ದತ್ತಿ ಪ್ರದಾನ ಮಾಡಬೇಕು ಎನ್ನುವುದು ದತ್ತಿ ದಾನಿಗಳ ಆಶಯವಾಗಿದೆ. ದತ್ತಿಯ ಆಶಯದಂತೆ ಕನ್ನಡ ನಾಡಿನಲ್ಲಿ ಹೋಟೆಲ್ ಉದ್ಯಮವನ್ನು ಸ್ಥಾಪಿಸಿ ಅದರೊಂದಿಗೆ ನಿರಂತರ ಕನ್ನಡದ ಕಾಯಕದಲ್ಲಿ ಗುರುತಿಸಿಕೊಂಡಿರುವ ಕನ್ನಡದ ಹೋಟೆಲ್ ಉದ್ಯಮಿಯೊಬ್ಬರನ್ನು ಪ್ರತಿ ವರ್ಷ ಆಯ್ಕೆಮಾಡಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಇದನ್ನೂ ಓದಿ: Siddaramaiah: ಸಿಎಂ ಸಿದ್ದರಾಮಯ್ಯ ಪತ್ನಿ ಆಸ್ಪತ್ರೆಗೆ ದಾಖಲು; ಆರೋಗ್ಯ ಸ್ಥಿರ
2021ನೇ ಸಾಲಿನ ಶ್ರೀಮತಿ ಲಕ್ಷ್ಮೀದೇವಿ ಮತ್ತು ಎಸ್. ರಾಮಚಂದ್ರ ಬಾಯರ್ ದತ್ತಿ ಪ್ರಶಸ್ತಿಗಾಗಿ ಹೋಟೆಲ್ ಕ್ಷೇತ್ರದಲ್ಲಿ ಕನ್ನಡದ ಕಾಯಕದಲ್ಲಿ ತೊಡಗಿಕೊಂಡು ಅಗಣಿತ ಸಾಧನೆ ಮಾಡಿರುವ ತುಮಕೂರಿನ ಹೋಟೆಲ್ ನಂಜುಂಡೇಶ್ವರ ಹೋಟೆಲ್ ಮಾಲೀಕರಾದ ಸಿ.ವಿ. ಮಹದೇವಯ್ಯ ಅವರು ಆಯ್ಕೆಯಾಗಿದ್ದಾರೆ. 2022ನೇ ಸಾಲಿನ ಪ್ರಶಸ್ತಿಗಾಗಿ ಉಡುಪಿ ಉಪಾಹಾರ, ದ್ವಾರಕಾ ಹೋಟೆಲ್ ಸ್ಥಾಪಿಸಿ ಕನ್ನಡದ ಕೆಲಸದಲ್ಲಿ ಗುರುತಿಸಿಕೊಂಡ ಉಡುಪಿಯ ಟಿ.ಎಸ್. ರಾಘವೇಂದ್ರ ರಾವ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಣೆಯಲ್ಲಿ ತಿಳಿಸಿದೆ.
ದತ್ತಿ ಆಯ್ಕೆ ಸಮಿತಿಯ ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ, ಪ್ರಸ್ತುತ ದತ್ತಿ ಪ್ರಶಸ್ತಿಗಳ ಆಯ್ಕೆಯಾಯಾಗಿರುವ ಎಲ್ಲ ಸಾಧಕರಿಗೆ ಕನ್ನಡ ಸಾಹಿತ್ಯ ಪರಿಷತ್ತು ಅಭಿನಂದಿಸುತ್ತಿದೆ. ಅವರು ವೃತ್ತಿಗಾಗಿ ಹೋಟೆಲ್ ಉದ್ಯಮವನ್ನು ಆಯ್ಕೆ ಮಾಡಿಕೊಂಡರೂ ಕನ್ನಡ ನಾಡು ನುಡಿಯ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತುಮಕೂರಿನ ಸಿ.ವಿ. ಮಹದೇವಯ್ಯ ಹಾಗೂ ಉಡುಪಿಯ ಟಿ.ಎಸ್. ರಾಘವೇಂದ್ರ ರಾವ್ ಅವರ ಕನ್ನಡ ಸೇವೆ ಮುಂದಿನ ದಿನಗಳಲ್ಲಿಯೂ ನಿರಂತರವಾಗಿರಲಿ ಎಂದು ಕನ್ನಡ ಸಾಹಿತ್ಯ ಪರಿಷತ್ತು ಆಶಿಸುತ್ತದೆ ಎಂದು ಹೇಳಿದರು.
ಕನ್ನಡ ನಾಡಿನಲ್ಲಿ ಆತಿಥ್ಯ ಕ್ಷೇತ್ರದಲ್ಲಿ ಅಪರಿಮಿತ ಸಾಧನೆ ಮಾಡಿ ಕನ್ನಡ ಸೇವೆಯಲ್ಲಿ ಇರುವ ಗಣ್ಯರನ್ನು ಸೂಕ್ಷ್ಮವಾಗಿ ಗುರುತಿಸಿ ದತ್ತಿ ದಾನಿಗಳ ಆಶಯಕ್ಕೆ ಯಾವುದೇ ಚ್ಯುತಿಯಾಗದ ರೀತಿಯಲ್ಲಿ ಆಯ್ಕೆ ಸಮಿತಿಯು ಆಯ್ಕೆ ಮಾಡಿದೆ ಎಂದು ನಾಡೋಜ ಡಾ. ಮಹೇಶ ಜೋಶಿ ಹೇಳಿದ್ದಾರೆ.
ಇದನ್ನೂ ಓದಿ: PSI Scam: ಪಿಎಸ್‌ಐ ಹಗರಣದ 52 ಕಳಂಕಿತರು ಶಾಶ್ವತ ಡಿಬಾರ್, ಉಳಿದವರಿಗೆ ಒಲಿಯುತ್ತಾ ಅದೃಷ್ಟ?
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿಯಲ್ಲಿ ದತ್ತಿ ದಾನಿಗಳ ಪರವಾಗಿ ಶ್ರೀ ಬಾಳೆಕುದ್ರ ರಾಮಚಂದ್ರ ಉಪಾಧ್ಯ, ಪರಿಷತ್ತಿನ ಗೌರವ ಕಾರ್ಯದರ್ಶಿ ನೇ.ಭ. ರಾಮಲಿಂಗ ಶೆಟ್ಟಿ, ಡಾ. ಪದ್ಮಿನಿ ನಾಗರಾಜು ಹಾಗೂ ಗೌರವ ಕೋಶಾಧ್ಯಕ್ಷರಾದ ಡಾ. ಬಿ.ಎಂ.ಪಟೇಲ್ ಪಾಂಡು ಅವರು ಉಪಸ್ಥಿತರಿದ್ದರು.