ಕಲಬುರಗಿ: ರಾಜ್ಯದಲ್ಲಿ ಹಾವು ಕಡಿತಕ್ಕೆ (Snake Bite) ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಧಾರವಾಡದಲ್ಲಿ ನ.27ರಂದು ಹಾವು ಕಡಿತದಿಂದ ಬಾಲಕ ಮೃತಪಟ್ಟಿದ್ದ. ಈ ಘಟನೆ ಮಾಸುವ ಮುನ್ನವೇ ಇದೀಗ ಬಾಲಕಿಯೊಬ್ಬಳು ಹಾವಿನ ಕಡಿತದಿಂದ ಮೃತಪಟ್ಟಿದ್ದಾಳೆ.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಿಲ್ವಾಡ್ (ಬಿ) ಗ್ರಾಮದಲ್ಲಿ ಸೋನಿಕಾ ಪಾಟೀಲ್ (10) ಎಂಬಾಕೆ ಹಾವು ಕಡಿದು ಮೃತಪಟ್ಟಿದ್ದಾಳೆ. ಸೋನಿಕಾ ಬಿಲ್ವಾಡ್ (ಬಿ) ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 4 ನೇ ತರಗತಿ ಓದುತ್ತಿದ್ದಳು. ನಿನ್ನೆ ಸೋಮವಾರ ಶಾಲೆ ಮುಗಿಸಿ ಮನೆಗೆ ಬರುತ್ತಿದ್ದಾಗ ಹಾವು ಕಡಿದಿದೆ.
ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆದರೆ ಚಿಕಿತ್ಸೆ ಫಲಿಸದೇ ಸೋನಿಕಾ ಮೃತಪಟ್ಟಿದ್ದಾಳೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾವು ಕಡಿತಕ್ಕೆ ಬಾಲಕ ಬಲಿ
ಧಾರವಾಡ: ಹಾವು ಕಡಿತಕ್ಕೆ ಬಾಲಕನೊಬ್ಬ (snake bite) ಬಲಿಯಾಗಿದ್ದಾನೆ. ಧಾರವಾಡದ ಹೆಬ್ಬಳ್ಳಿ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಅರುಣ್ ಬಡಿಗೇರ್ (9) ಸಾವನ್ನಪ್ಪಿದ ಬಾಲಕ. ಅರುಣ್ ಮನೆಯ ಪಕ್ಕದಲ್ಲೇ ಆಟವಾಡಲು ಹೋಗಿದ್ದಾಗ ಹಾವು ಕಚ್ಚಿದೆ. ಕೂಡಲೇ ಚಿಕಿತ್ಸೆಗೆ ಆಸ್ಪತ್ರೆಗೆ ಕರೆತಂದರೂ ಫಲಕಾರಿಯಾಗಲಿಲ್ಲ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಮಗಳ ಮೇಲೆಯೇ ಪ್ರಿಯತಮ ಲೈಂಗಿಕ ದೌರ್ಜನ್ಯ ಎಸಗಲು ಬಿಟ್ಟ ಮಹಿಳೆಗೆ 40 ವರ್ಷ ಜೈಲು
ಹಾವು ಕಡಿತದಿಂದ ಮಹಿಳೆ ಸಾವು
ಹಾವು ಕಡಿತದಿಂದ ಮಹಿಳೆ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗೌರಗಾನಹಳ್ಳಿಯಲ್ಲಿ ನಡೆದಿತ್ತು. ನ. 13 ಸೋಮವಾರ ಸಂಜೆ ತೋಟದಲ್ಲಿ ಬೆಳೆದಿದ್ದ ಹೂಗಳನ್ನ ಕೊಯ್ಯಲು ಹೋಗಿದ್ದಾಗ ಮಹಿಳೆಗೆ ಹಾವು ಕಚ್ಚಿತ್ತು. ಶಾರದಮ್ಮ (42) ಮೃತ ದುರ್ದೈವಿ. ಹಾವು ಕಚ್ಚಿದ ಕೂಡಲೇ ಅವರನ್ನು ಕೊರಟಗೆರೆ ತಾಲೂಕು ಆಸ್ಪತ್ರೆಗೆ ಕರೆದೊಯ್ಯತ್ತಿದ್ದಾಗ ಮಾರ್ಗ ಮಧ್ಯೆ ಮಹಿಳೆ ಮೃತಪಟ್ಟಿದ್ದರು. ಘಟನಾ ಸ್ಥಳಕ್ಕೆ ಕೊರಟಗೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡರು.
ಕಾಟ ಕೊಟ್ಟಿದ್ದ ಯುವಕನನ್ನು ಕಚ್ಚಿ ಸಾಯಿಸಿತೇ ನಾಗರಹಾವು?
ಹಾವಿನ ದ್ವೇಷ (Snake hatred) 12 ವರುಷ ಎಂದು ಹೇಳುವುದು ನಿಜವೋ ಸುಳ್ಳೋ ಗೊತ್ತಿಲ್ಲ. ಇದೊಂದು ನಂಬಿಕೆಯಾಗಿ ಇಲ್ಲಿಯವರೆಗೂ ಚಾಲ್ತಿಯಲ್ಲದಿದೆ. ಆದರೆ, ಈಗ ಇದು ನಿಜಕ್ಕೂ ಹೌದೇ ಎಂದು ಅನುಮಾನ ಹುಟ್ಟಿಸುವಂತಹ ಒಂದು ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದಿತ್ತು. ಹಾವಿಗೆ ಪದೇ ಪದೆ ತೊಂದರೆ ಕೊಟ್ಟು ಅದನ್ನು ವಿಡಿಯೊ (Snake Video) ಮಾಡಿಕೊಂಡಿದ್ದ ಯುವಕ, ಅದಾಗಿ ಕೆಲವೇ ದಿನಗಳಲ್ಲಿ ಹಾವು ಕಚ್ಚಿ (Snake Bite) ಮೃತಪಟ್ಟಿದ್ದಾನೆ.
ಈ ಯುವಕ ಹಾವಿನ ದ್ವೇಷಕ್ಕೆ ಬಲಿಯಾದನೇ ಎಂಬ ಅನುಮಾನ ಹಾಗೂ ಚರ್ಚೆಯನ್ನು ತಾಲೂಕಿನಲ್ಲಿ ಹುಟ್ಟುಹಾಕಿದೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ದೇವರಗುಡ್ಡೇನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಹಾವಿಗೆ ತೊಂದರೆ ಕೊಟ್ಟಿದ್ದಕ್ಕೆ ಜ್ಞಾಪಕವಿಟ್ಟುಕೊಂಡು ಬಂದ ಹಾವು ಕಚ್ಚಿರಬಹುದು ಎಂದು ಈಗ ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.
ಏನಿದು ಘಟನೆ?
ಅಕ್ಟೋಬರ್ 29ರ ಸಂಜೆ ಹಾವು ಕಡಿತದಿಂದ ಯುವಕ ಅಭಿಲಾಷ್ ಮೃತಪಟ್ಟಿದ್ದ. ಮೊದಲಿಗೆ ಈತ ಹಾವು ಕಚ್ಚಿ ತೀರಿ ಹೋದ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಈತನ ಮೊಬೈಲ್ ಅನ್ನು ಎರಡು ದಿನಗಳ ಬಳಿಕ ಪರಿಶೀಲನೆ ನಡೆಸಿದಾಗ ಅಲ್ಲೊಂದು ವಿಡಿಯೊ ಸಿಕ್ಕಿದೆ. ಇದು ಎಲ್ಲರನ್ನೂ ಭಯಗೊಳಿಸುವಂತೆ ಮಾಡಿದೆ.
ಕಾರಣ ಆ ವಿಡಿಯೊದಲ್ಲಿ ಅಭಿಲಾಷ್ ನಾಗರಹಾವೊಂದಕ್ಕೆ ಭಾರಿ ಕಾಟ ಕೊಟ್ಟಿರುವುದು ಸೆರೆಯಾಗಿದೆ. ಅದೂ ಅವರದ್ದೇ ತೋಟದಲ್ಲಿ ಕೀಟಲೆ ಕೊಟ್ಟಿರುವ ವಿಡಿಯೊ ಆಗಿತ್ತು. ಪದೇ ಪದೆ ಆ ಹಾವಿಗೆ ಕೀಟಲೆ ಕೊಟ್ಟಿದ್ದು ಅದೂ ಸಹ ಹೆಡೆ ಎತ್ತಿ ನೆಲಕ್ಕೆ ಕುಕ್ಕಿತ್ತು.
ಪೈಪ್ ಮೂಲಕ ಕಾಟ ಕೊಟ್ಟಿದ್ದ ಅಭಿಲಾಷ್
ಅಭಿಲಾಷ್ ಎಂದಿನಂತೆ ತೋಟಕ್ಕೆ ಹೋಗಿದ್ದಾನೆ. ಅಲ್ಲಿ ಚಿಕ್ಕ ಕಾಲುವೆಯೊಂದರಲ್ಲಿ ನಾಗರ ಹಾವೊಂದು ಕಾಣಿಸಿಕೊಂಡಿದೆ. ಅಲ್ಲಿ ನೀರಿನ ನಡುವೆ ಹಾವೊಂದು ಹೆಡೆ ಎತ್ತಿ ಕುಳಿತಿತ್ತು. ಇದನ್ನು ನೋಡಿದ ಅಭಿಲಾಷ್ ತನ್ನ ಮೊಬೈಲ್ ಕ್ಯಾಮೆರಾವನ್ನು ಆನ್ ಮಾಡಿದ್ದು, ಬಳಿಕ ಒಂದು ಪೈಪ್ ಅನ್ನು ತೆಗೆದುಕೊಂಡು ಹಾವಿನತ್ತ ತೆಗೆದುಕೊಂಡು ಹೋಗಿದ್ದಾನೆ. ಅಲ್ಲಿ ಹಾವಿನ ಮುಖದ ಹತ್ತಿರಕ್ಕೆ ಪೈಪ್ ತೆಗೆದುಕೊಂಡು ಹೋಗಿದ್ದಾನೆ. ಅದಕ್ಕೆ ಸಿಟ್ಟಾಗುತ್ತಿದ್ದ ಹಾವು ಆ ಪೈಪ್‌ಗೆ ಹಾಗೂ ನೆಲಕ್ಕೆ ಕುಕ್ಕುತ್ತಿತ್ತು. ಹೀಗೆ ಕೆಲ ಕಾಲ ಮಾಡಿದ್ದಾನೆ. ಮುಂದೆ ಆ ಹಾವು ಅಲ್ಲಿಂದ ಹೇಗೆ ಹೋಯಿತು ಎಂಬುದು ಗೊತ್ತಿಲ್ಲ. ಇದಾಗಿ ಕೆಲವೇ ದಿನಗಳ ನಂತರ ಅಭಿಲಾಷ್ ಹಾವು ಕಡಿತದಿಂದ ಮೃತಪಟ್ಟಿದ್ದಾನೆ.
ಹಾವಿನ ದ್ವೇಷವೇ?
ಈಗ ಅಭಿಲಾಷ್‌ಗೆ ಅದೇ ಹಾವು ಬಂದು ಕಡಿದಿದೆಯೇ ಎಂಬ ಬಗ್ಗೆ ಯಾವುದೇ ನಿಖರತೆ ಇಲ್ಲ. ಜತೆಗೆ ಯಾರಿಗೂ ಈ ಬಗ್ಗೆ ಗೊತ್ತಿಲ್ಲ. ಆದರೆ, ಜನರು ಮಾತ್ರ ಈಗ ಹಾವಿಗೆ ಕಾಟ ಕೊಟ್ಟಿದ್ದಕ್ಕೇ ಅದು ಬಂದು ಕಚ್ಚಿರಬಹುದು. ಹಾವಿನ ದ್ವೇಷ ಎಂದರೆ ಸುಮ್ಮನೆಯೇ? ಎಂದು ಸಹ ಚರ್ಚೆ ಮಾಡುತ್ತಿದ್ದಾರೆ. ಹಳ್ಳಿ ಮೈಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ