ವಿಜಯನಗರ: ವಾರಕ್ಕೊಂದು ಹಾವು ಕಡಿತದಿಂದ (Snake Bite) ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ವಿಜಯನಗರದ ಹರಪನಹಳ್ಳಿ ತಾಲೂಕಿನ ಬಸವಾನಾಳು ಗ್ರಾಮದಲ್ಲಿ ಹಾವು ಕಡಿತದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ರತ್ನಮ್ಮ (45) ಮೃತ ದುರ್ದೈವಿ.
ರತ್ನಮ್ಮ ಹೊಲದಲ್ಲಿ ಮೆಕ್ಕೆಜೋಳದ ಕಟಾವು ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಹಾವೊಂದು ರತ್ನಮ್ಮರ ಕಾಲಿಗೆ ಕಚ್ಚಿದೆ. ಕೂಡಲೇ ಅವರನ್ನು ಅಲ್ಲಿದ್ದವರು ಕೊಟ್ಟೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನೆ ಮಾಡಲು ಮುಂದಾಗಿದ್ದಾರೆ. ಆದರೆ ಆದಾಗಲೇ ಹಾವಿನ ವಿಷ ಮೈಗೆ ಆವರಿಸಿದ್ದರಿಂದ ಮಾರ್ಗಮಧ್ಯೆಯೇ ಉಸಿರು ಚೆಲ್ಲಿದ್ದಾರೆ.
ಕೊಟ್ಟೂರು ತಾಲೂಕು ಆರೋಗ್ಯಾಧಿಕಾರಿ ಡಾ. ಬಸವೇಶ್ವರ ಅವರು ಮೃತಪಟ್ಟಿದ್ದಾಗಿ ಖಚಿತಪಡಿಸಿದ್ದಾರೆ. ಕೊಟ್ಟರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಹಾವು ಕಡಿತಕ್ಕೆ ಬಲಿಯಾಗಿದ್ದ ಮಕ್ಕಳು
ರಾಜ್ಯದಲ್ಲಿ ಹಾವು ಕಡಿತಕ್ಕೆ (Snake Bite) ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಧಾರವಾಡದಲ್ಲಿ ನ.27ರಂದು ಹಾವು ಕಡಿತದಿಂದ ಬಾಲಕ ಮೃತಪಟ್ಟಿದ್ದ. ಈ ಘಟನೆ ಮಾಸುವ ಮುನ್ನವೇ ಬಾಲಕಿಯೊಬ್ಬಳು ಸಹ ಹಾವಿನ ಕಡಿತದಿಂದ ಮೃತಪಟ್ಟಿದ್ದಳು.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಬಿಲ್ವಾಡ್ (ಬಿ) ಗ್ರಾಮದಲ್ಲಿ ಸೋನಿಕಾ ಪಾಟೀಲ್ (10) ಎಂಬಾಕೆ ಹಾವು ಕಡಿದು ಮೃತಪಟ್ಟಿದ್ದಳು. ಸೋನಿಕಾ ಬಿಲ್ವಾಡ್ (ಬಿ) ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 4 ನೇ ತರಗತಿ ಓದುತ್ತಿದ್ದಳು. ಶಾಲೆ ಮುಗಿಸಿ ಮನೆಗೆ ಬರುತ್ತಿದ್ದಾಗ ಹಾವು ಕಡಿದಿತ್ತು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಸೋನಿಕಾ ಮೃತಪಟ್ಟಿದ್ದಾಳೆ. ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಧಾರವಾಡ: ಧಾರವಾಡದ ಹೆಬ್ಬಳ್ಳಿ ಗ್ರಾಮದಲ್ಲಿ ಹಾವು ಕಡಿತದಿಂದ ಅರುಣ್ ಬಡಿಗೇರ್ (9) ಎಂಬ ಬಾಲಕ ಮೃತಪಟ್ಟಿದ್ದ. ಅರುಣ್ ಮನೆಯ ಪಕ್ಕದಲ್ಲೇ ಆಟವಾಡಲು ಹೋಗಿದ್ದಾಗ ಹಾವು ಕಚ್ಚಿತ್ತು. ಕೂಡಲೇ ಚಿಕಿತ್ಸೆಗೆ ಆಸ್ಪತ್ರೆಗೆ ಕರೆತಂದರೂ ಫಲಕಾರಿಯಾಗಲಿಲ್ಲ.
ಇತ್ತ ಹಾವು ಕಡಿತದಿಂದ ಮಹಿಳೆ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಗೌರಗಾನಹಳ್ಳಿಯಲ್ಲಿ ನಡೆದಿತ್ತು. ನ. 13 ಸೋಮವಾರ ಸಂಜೆ ತೋಟದಲ್ಲಿ ಬೆಳೆದಿದ್ದ ಹೂಗಳನ್ನ ಕೊಯ್ಯಲು ಹೋಗಿದ್ದಾಗ ಮಹಿಳೆಗೆ ಹಾವು ಕಚ್ಚಿತ್ತು. ಶಾರದಮ್ಮ (42) ಮೃತ ದುರ್ದೈವಿ. ಹಾವು ಕಚ್ಚಿದ ಕೂಡಲೇ ಅವರನ್ನು ಕೊರಟಗೆರೆ ತಾಲೂಕು ಆಸ್ಪತ್ರೆಗೆ ಕರೆದೊಯ್ಯತ್ತಿದ್ದಾಗ ಮಾರ್ಗ ಮಧ್ಯೆ ಮಹಿಳೆ ಮೃತಪಟ್ಟಿದ್ದರು.
ಘಟಿಕೋತ್ಸವದಲ್ಲಿ ಪದವಿ ಪಡೆದ ಕೇರಳ ಮೂಲದ ವಿದ್ಯಾರ್ಥಿಗೆ ಹಾವು ಕಡಿದು ಮೃತಪಟ್ಟಿರುವ ಘಟನೆ ತುಮಕೂರಿನಲ್ಲಿ ನಡೆದಿತ್ತು. ಜಿ.ಪರಮೇಶ್ವರ್ ಒಡೆತನದ ಸಿದ್ದಾರ್ಥ ಮೆಡಿಕಲ್ ಕಾಲೇಜಿನಲ್ಲಿ ಘಟಿಕೋತ್ಸವ ನಡೆದಿತ್ತು. ಇದರಲ್ಲಿ ಕೇರಳ ಮೂಲದ ಅದಿತ್ ಬಾಲಕೃಷ್ಣನ್ ಎಂಬಿಬಿಎಸ್ ಪದವಿ ಪಡೆದಿದ್ದ. ಪದವಿ ಪಡೆದು ಪಾರ್ಕ್‌ನಲ್ಲಿ ನಿಂತಿದ್ದವನಿಗೆ ಹಾವು ಕಡಿದಿರುವ ಶಂಕೆ ವ್ಯಕ್ತವಾಗಿದೆ. ಹಾವು ಕಡಿತ ಗಮನಿಸದೇ ಮನೆಗೆ ಬಂದಾಗ ಕುಸಿದು ಬಿದ್ದು ಮೃತಪಟ್ಟಿದ್ದ. ಮೃತದೇಹವನ್ನು ಸಿದ್ದಾರ್ಥ ಮೆಡಿಕಲ್ ಕಾಲೇಜಿಗೆ ರವಾನೆ ಮಾಡಲಾಗಿತ್ತು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.