Site icon Vistara News

Snake Bite: ರಾಘವೇಂದ್ರ ಮಠದ ಅಡುಗೆ ಮನೆಯಲ್ಲಿ ಹಾವು; ಸ್ನೇಕ್ ಕ್ಯಾಚರ್‌ಗೆ ಕಚ್ಚೇ ಬಿಟ್ಟಿತು!

Snake in raghavendra mutt kitchen Snake bite to snake catcher

ಗದಗ: ಜಿಲ್ಲೆಯಲ್ಲಿ ಈಗ ಮನೆಯೊಳಗೆ ಹಾವು ನುಗ್ಗುತ್ತಿರುವ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಅಲ್ಲದೆ, ಈಚೆಗಷ್ಟೇ ಚಿಕ್ಕಮಗಳೂರಿನಲ್ಲಿ ಹಾವು ರಕ್ಷಣೆ ವೇಳೆ ನರೇಶ್‌ ಎಂಬುವವರು ಹಾವಿನಿಂದ ಕಚ್ಚಿಸಿಕೊಂಡು (Snake Bite) ಮೃತಪಟ್ಟಿದ್ದರು. ಈಗ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಮಠದ ಅಡುಗೆ ಕೋಣೆಗೆ ನುಗ್ಗಿದ್ದ ಹಾವನ್ನು ರಕ್ಷಣೆ ಮಾಡಲು ಹೋಗಿದ್ದ ಸ್ನೇಕ್‌ ಕ್ಯಾಚರ್‌ಗೆ (Snake Catcher) ಅದು ಕಚ್ಚಿಬಿಟ್ಟಿದೆ. ಅದೃಷ್ಟವಶಾತ್‌ ಅವರಿಗೆ ಯಾವುದೇ ಅಪಾಯ ಆಗಿಲ್ಲ. ಅದೂ ಅಲ್ಲದೆ, ಅದು ಕೇರೆ ಹಾವು ಎಂದು ಹೇಳಲಾಗಿದೆ.

ಕೊಣ್ಣೂರ ಗ್ರಾಮದ ರಾಘವೇಂದ್ರ ಮಠದ ಅಡುಗೆ ಮನೆಯಲ್ಲಿ ಹಾವೊಂದು ಅವಿತಿತ್ತು. ಈ ವೇಳೆ ಅಡುಗೆ ಮನೆ ಸಿಬ್ಬಂದಿ ಅಡುಗೆ ಕೋಣೆಗೆ ಹೋಗಿದ್ದಾಗ ಮೊದಲಿಗೆ ಅವರಿಗೆ ಏನೂ ಗೊತ್ತಾಗಿರಲಿಲ್ಲ. ಆದರೆ, ಒಮ್ಮೆ ಅವರಿಗೆ ಹಾವು ಇರುವುದು ಕಂಡುಬಂದಿದೆ. ಕೂಡಲೇ ಉರಗ ರಕ್ಷಕ ಬುಡ್ನೇಸಾಬ್ ಸುರೇಬಾನ್ ಅವರಿಗೆ ವಿಷಯ ತಿಳಿಸಿದ್ದಾರೆ.

ಇದನ್ನೂ ಓದಿ: DK Shivakumar: ಡಿ.ಕೆ. ಶಿವಕುಮಾರ್‌ ಆ್ಯಕ್ಟಿಂಗ್ ಸಿಎಂ, ಅವರದ್ದು ಅತಿರೇಕದ ನಡೆ: ಆರ್.‌ ಅಶೋಕ್

ಸ್ವಲ್ಪ ಸಮಯದ ಬಳಿಕ ಮಠಕ್ಕೆ ಆಗಮಿಸಿದ ಉರಗ ರಕ್ಷಕ ಬುಡ್ನೇಸಾಬ್ ಸುರೇಬಾನ್, ಹಾವಿನ ರಕ್ಷಣೆಗೆ ಮುಂದಾಗಿದ್ದಾರೆ. ಹಾವು ಸುಮಾರು 8 ಅಡಿಯಷ್ಟು ಉದ್ದವಿತ್ತು. ಆದರೆ, ಹೀಗೆ ರಕ್ಷಣೆ ಮಾಡುವಾಗ ತಪ್ಪಿಸಿಕೊಳ್ಳಲು ಹಾವು ಯತ್ನ ಮಾಡಿದೆ. ಆದರೆ, ಅವರು ಅದರ ಬಾಲವನ್ನು ಹಿಡಿದು ಎಳೆದಿದ್ದಾರೆ. ಹೀಗೆ ಹಿಡಿಯುವಾಗ ಹಾವು ಕಚ್ಚಿದೆ.

ಹಾವು ಕಚ್ಚಿದ್ದನ್ನೂ ಲೆಕ್ಕಿಸದೇ ಸುರೇಬಾನ್ ಹಾವನ್ನು ಸೆರೆ ಹಿಡಿದಿದ್ದಾರೆ. ಬಳಿಕ ಬುಡ್ನೇಸಾಬ್ ಟಿಟಿ ಇಂಜೆಕ್ಷನ್ ಪಡೆದು ಚಿಕಿತ್ಸೆ ಪಡೆದಿದ್ದಾರೆ. ಸದ್ಯ ಜೀವಕ್ಕೆ ಯಾವುದೇ ಅಪಾಯ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಕೇರೆ ಹಾವು ಕಚ್ಚಿದರೆ ಮನುಷ್ಯರು ಸಾಯುವುದಿಲ್ಲ ಎಂದು ಉರಗ ತಜ್ಞರು ಸಹ ಹೇಳಿದ್ದಾರೆ. ಬುಡ್ನೇಸಾಬ್ ಅವರು ಹಾವು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ.

ರಕ್ಷಣೆ ವೇಳೆ ಕಚ್ಚಿದ ಹಾವು; ಇಲ್ಲಿದೆ ವಿಡಿಯೊ

ಜಗಾಪುರದ ಮನೆಯೊಂದರ ಅಡುಗೆ ಮನೆಯಲ್ಲಿ ಪತ್ತೆಯಾಗಿತ್ತು

ಗದಗ ಜಿಲ್ಲೆ ನರಗುಂದ ತಾಲೂಕಿನ ಜಗಾಪುರ ಗ್ರಾಮದ ಮನೆಯೊಂದರ ಅಡುಗೆ ಮನೆಯಲ್ಲಿ ಜೂನ್‌ 20ರಂದು ಹಾವೊಂದು ಬಂದಿತ್ತು. ಗ್ರಾಮದ ಹನುಮಂತ ಗುಂಡಳ್ಳಿ ಅವರ ನಿವಾಸದಲ್ಲಿ ಹಾವು ಪ್ರವೇಶ ಮಾಡಿತ್ತು. ಅಡುಗೆ ಮನೆಯ ಡಬ್ಬಿಯ ಹಿಂದುಗಡೆ ಹಾವೊಂದು ಅವಿತು ಕುಳಿತಿರುವುದು ಮನೆಯವರಿಗೆ ಕಂಡಿತ್ತು.

ತಕ್ಷಣವೇ ಉರಗ ರಕ್ಷಕ ಬಿ.ಆರ್. ಸುರೇಬಾನ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಲಾಗಿದೆ. ಸುರೇಬಾನ್ ಅವರು ಬರುವವರೆಗೂ ಮನೆಯವರಿಗೆ ಆತಂಕ ಸ್ವಲ್ಪವೂ ಕಡಿಮೆಯಾಗಿರಲಿಲ್ಲ. ಭಯದಲ್ಲೇ ಆಗಾಗ ಇಣುಕಿ, ಇಣುಕಿ ಆ ಹಾವು ಇನ್ನೂ ಅಲ್ಲೇ ಇದೆಯೇ? ಎಂಬುದನ್ನು ಖಾತ್ರಿ ಪಡಿಸಿಕೊಳ್ಳುತ್ತಿದ್ದರು.

ಇದನ್ನೂ ಓದಿ: ಕಾಂಗ್ರೆಸ್‌ ಶಾಸಕನ ಅಪ್ಪಿದ ಬಿಜೆಪಿ ಸಂಸದ ಅನಂತಕುಮಾರ ಹೆಗಡೆ; ಎಲ್ಲೋ ಲೆಕ್ಕಾಚಾರ ತಪ್ಪಿದೆ ಅಂದ್ರು ಜನ!

ಸ್ವಲ್ಪ ಹೊತ್ತಿನಲ್ಲೇ ಮನೆಗೆ ಬಂದ ಸುರೇಬಾನ್ ಅವರು ನಾಲ್ಕು ಅಡಿಯಷ್ಟು ಉದ್ದದ ಹಾವನ್ನು ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದರು. ಹಾವುಗಳನ್ನು ಸೆರೆ ಹಿಡಿದು ಸುರಕ್ಷಿತವಾಗಿ ಬಿಡುವುದರಲ್ಲಿ ಸುರೇಬಾನ್ ಅವರು ಈ‌ ಭಾಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಸತತ ಆರು ವರ್ಷಗಳಿಂದ ಅವರು ಹಾವುಗಳನ್ನು ರಕ್ಷಿಸುತ್ತಾ ಬಂದಿದ್ದು, ಸಾವಿರಾರು ಹಾವುಗಳನ್ನು ಸೆರೆ ಹಿಡಿದು, ಅಪಾಯಗಳನ್ನು ತಪ್ಪಿಸಿದ್ದಾರೆ. ಈಗ ಅವರಿಗೆ ರಕ್ಷಣೆ ವೇಳೆ ಹಾವೊಂದು ಕಚ್ಚಿದೆ.

Exit mobile version