ಶಿರಾ: ಭಾರೀ ಗಾತ್ರದ ಹೆಬ್ಬಾವೊಂದು ತಾಲೂಕಿನ ಚಿಕ್ಕಸಂದ್ರ ಗ್ರಾಮದ ಬಳಿ ಭಾನುವಾರ ರಾತ್ರಿ ಪ್ರತ್ಯಕ್ಷವಾಗಿದ್ದು, ಮಾಜಿ ಸೈನಿಕರೊಬ್ಬರು ಹೆಬ್ಬಾವನ್ನು ಹಿಡಿದು ರಕ್ಷಿಸಿರುವ (Snake Rescue) ಘಟನೆ ನಡೆದಿದೆ.
ಮಾಜಿ ಸೈನಿಕ ಭಾನು ಪ್ರಕಾಶ್ ಅವರು, ಕಳೆದ ರಾತ್ರಿ ತಮ್ಮ ಜಮೀನಿನಲ್ಲಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುವ ಸಮಯದಲ್ಲಿ ರಸ್ತೆಯ ಬದಿ ಕಾಣಿಸಿಕೊಂಡಿತ್ತು. ಈ ಭಾರೀ ಗಾತ್ರದ ಹೆಬ್ಬಾವನ್ನು ಅವರು ತಮ್ಮ ಸ್ನೇಹಿತರ ಸಹಾಯದಿಂದ ಸೆರೆ ಹಿಡಿದಿದ್ದಾರೆ.
ಇದನ್ನೂ ಓದಿ: Drowns in Farm Pond: ಜಾನುವಾರು ಮೇಯಿಸುತ್ತಿದ್ದಾಗ ಕೃಷಿ ಹೊಂಡದಲ್ಲಿ ಬಿದ್ದು ಬಾಲಕ ಸಾವು
ಈ ಹೆಬ್ಬಾವು ಸುಮಾರು 12 ಅಡಿ ಉದ್ದವಿದ್ದು, ಈ ಬೃಹದಾಕಾರದ ಹೆಬ್ಬಾವನ್ನು ನೋಡಿ ಗ್ರಾಮಸ್ಥರು ಆತಂಕಕ್ಕೊಳಗಾಗಿದ್ದರು. ಈ ವೇಳೆ ಮಾಜಿ ಸೈನಿಕ ಭಾನು ಪ್ರಕಾಶ್, ಈ ಹಾವನ್ನು ರಕ್ಷಿಸಿ, ಬುಕ್ಕಾಪಟ್ಟಣ ಅರಣ್ಯ ಇಲಾಖೆಯ ಸಿಬ್ಬಂದಿ ವಶಕ್ಕೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಮಾಜಿ ಸೈನಿಕ ಭಾನು ಪ್ರಕಾಶ್, ಹಾವುಗಳನ್ನಾಗಲೀ ಅಥವಾ ಯಾವುದೇ ಪ್ರಾಣಿಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ. ಅವನ್ನು ನಮ್ಮ ಮುಂದಿನ ಪೀಳಿಗೆಗಾಗಿ ಉಳಿಸಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.
ಹೆಬ್ಬಾವನ್ನು ರಕ್ಷಿಸಿ, ಮಾನವೀಯತೆ ಮೆರೆದ ಮಾಜಿ ಸೈನಿಕ ಭಾನು ಪ್ರಕಾಶ್ ಅವರ ಕಾರ್ಯಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆ ವ್ಯಕ್ತವಾಗಿದೆ.
Snake Bite : ಮುಳ್ಳು ಚುಚ್ಚಿದೆ ಎಂದು ನಿದ್ರೆಗೆ ಜಾರಿದವನ ಮೈ ಸೇರಿತು ಹಾವಿನ ವಿಷ! ಬೆಳಗಾಗುವಷ್ಟರಲ್ಲಿ ಮೃತ್ಯು
ಚಿಕ್ಕಮಗಳೂರು: ಜಮೀನಿನಲ್ಲಿ ಕೆಲಸ ಮುಗಿಸಿ ಬಂದ ವ್ಯಕ್ತಿಯೊಬ್ಬ ಮುಳ್ಳು ಚುಚ್ಚಿದೆ ಎಂದು ತಿಳಿದು ರಾತ್ರಿ ಊಟ ಮಾಡಿ ಮಲಗಿದವ ಚಿರನಿದ್ರೆಗೆ ಜಾರಿದ್ದ. ಗ್ರಾಮದ ಗಣ್ಯ ನಾಯ್ಕ್ (44) ಮೃತ ದುರ್ದೈವಿ. ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ಘಟನೆ (Snake Bite) ನಡೆದಿದೆ.
ಗಣ್ಯ ನಾಯ್ಕ್ ಜಮೀನಿನಲ್ಲಿ ಕೆಲಸ ಮಾಡುವಾಗ ಕಾಲಿಗೆ ಎರಡು ಬಾರಿ ಹಾವು ಕಚ್ಚಿತ್ತು. ಆದರೆ ಮುಳ್ಳು ಚುಚ್ಚಿರಬೇಕು ಏನು ಆಗಲ್ಲ ಎಂದು ನಿರ್ಲಕ್ಷಿಸಿದ್ದ. ಹಾವು ಕಚ್ಚಿದ್ದು ಗಮನಕ್ಕೆ ಬಾರದೆ ಮನೆಗೆ ಬಂದು ಊಟ ಮಾಡಿ ಮಲಗಿದ್ದರು. ಆದರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಹೆಣವಾಗಿದ್ದ.
ಇದನ್ನೂ ಓದಿ: Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ
ಕುಟುಂಬಸ್ಥರು ಮಲಗಿದ್ದ ಗಣ್ಯನನ್ನು ಎಬ್ಬಿಸಲು ಮುಂದಾಗಿದ್ದಾರೆ. ಆದರೆ ಆತ ಅಲುಗಾಡದೆ ಇದ್ದಾಗ ಅನುಮಾನಗೊಂದು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಹಾವು ಕಚ್ಚಿ ಮೃತಪಟ್ಟಿದ್ದಾಗಿ ಹೇಳಿದ್ದಾರೆ. ಒಂದು ಸಣ್ಣ ನಿರ್ಲಕ್ಷ್ಯಕ್ಕೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.