ಯಲ್ಲಾಪುರ: ಶಿಕ್ಷಣ, ಧಾರ್ಮಿಕ, ಸಹಕಾರಿ, ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಉತ್ತರ ಕನ್ನಡ ಜಿಲ್ಲೆಯ ಎನ್.ಎಸ್.ಹೆಗಡೆ ಕುಂದರಗಿ (90) ಅವರು ಗುರುವಾರ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿಕ್ಷಣ, ಧಾರ್ಮಿಕ ಸೇರಿ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಅವರು, ಮಾದರಿ ಎನಿಸಿದ್ದರು.
ಎನ್.ಎಸ್.ಹೆಗಡೆ ಕುಂದರಗಿ ಅವರ ನಿಧನದ ಸುದ್ದಿ ತಿಳಿಯುತ್ತಲೇ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರು ಕುಂದರಗಿಯಲ್ಲಿರುವ ಹೆಗಡೆ ಅವರ ಮನೆಗೆ ತೆರಳಿ ಅಂತಿಮ ದರ್ಶನ ಪಡೆದರು. ಹಾಗೆಯೇ, “ಸಹಕಾರಿ ಧುರೀಣ, ತಾಲೂಕಿನಲ್ಲಿ ಶಿಕ್ಷಣ ಕ್ರಾಂತಿ ಮಾಡಿದ ಎನ್.ಎಸ್.ಹೆಗಡೆ ಕುಂದರಗಿ ಅವರ ಅಗಲಿಕೆಯ ಸುದ್ದಿ ತಿಳಿದು ದುಃಖವಾಯಿತು. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಸಂತಾಪ ಸೂಚಿಸಿದರು.
ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆ
ಶಿಕ್ಷಣ ಪ್ರೇಮಿಯಾಗಿದ್ದ ಎನ್.ಎಸ್.ಹೆಗಡೆ ಕುಂದರಗಿ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಯಲ್ಲಾಪುರ ತಾಲೂಕಿನ ಭರತನಹಳ್ಳಿಯಲ್ಲಿ ಪ್ರಗತಿ ವಿದ್ಯಾಲಯ, ಉಮ್ಮಚಗಿಯ ಶ್ರೀ ಮಾತಾ ಸಂಸ್ಕೃತ ವಿದ್ಯಾಲಯಗಳನ್ನು ಸ್ಥಾಪಿಸಿ ತಾಲೂಕಿನಲ್ಲಿ ಅಕ್ಷರ ಕ್ರಾಂತಿಗೆ ಮುನ್ನುಡಿ ಬರೆದಿದ್ದರು.
ಕಸಾಪ ಮೊದಲ ಜಿಲ್ಲಾಧ್ಯಕ್ಷ
ಕುಂದರಗಿ ಅವರು ಉತ್ತರ ಕನ್ನಡ ಜಿಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸಹಕಾರಿ ಕ್ಷೇತ್ರದ ಕೊಡುಗೆಯ ಜತೆಗೆ ಶಿರಸಿಯ ಟಿ.ಎಸ್.ಎಸ್, ಯಲ್ಲಾಪುರದ ಎಪಿಎಂಸಿ, ಸ್ವರ್ಣವಲ್ಲಿ ಮಹಾ ಸಂಸ್ಥಾನ ಸೇರಿ ಹಲವು ಸಂಸ್ಥೆಗಳ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇವರ ಕೊಡುಗೆ, ಸೇವೆ ಪರಿಗಣಿಸಿ 2020ರಲ್ಲಿ ರಾಜ್ಯ ಸರ್ಕಾರವು ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
ಇದನ್ನೂ ಓದಿ | ಶ್ರೀಶೈಲಪ್ಪ ಬಿದರೂರು ನಿಧನ | ನಾಯಕನ ಹಠಾತ್ ನಿಧನಕ್ಕೆ ಸಂತಾಪ ಸೂಚಿಸಿದ ಗಣ್ಯರು