ದಾವಣಗೆರೆ: ಇಲ್ಲಿನ ಹರಿಹರ ತಾಲೂಕಿನ ಸಾರಥಿ ಗ್ರಾಮದಲ್ಲಿ ಮಣ್ಣು ಗಣಿಗಾರಿಕೆ (Soil Mining) ವಿರುದ್ಧ ಒಂಟಿಯಾಗಿ ಮಹಿಳೆ ಪ್ರತಿಭಟನೆ ನಡೆಸುತ್ತಿದ್ದಾರೆ. ರಸ್ತೆ ಮಧ್ಯೆವೇ ಕುಳಿತ ರೈತ ಮಹಿಳೆ ಕೊಟ್ರಮ್ಮ, ತಾವು ಜಮೀನಿನಲ್ಲಿ ಬೆಳೆದ ಬೆಳೆ ಹಾಳಾದರೆ ಹೊಣೆ ಯಾರು ಎಂದು ಪ್ರಶ್ನೆ ಮಾಡಿದ್ದಾರೆ. ಇವರ ಪ್ರತಿಭಟನೆಗೆ ಕಾರಣ, ಲಾರಿಯ ಧೂಳಾಗಿದೆ. ಲಾರಿಯು ಪ್ರತಿ ಬಾರಿ ಹೋಗಬೇಕಾದರೂ ಸಾಕಷ್ಟು ಪ್ರಮಾಣದ ಧೂಳು ಏಳುತ್ತಿದ್ದು, ಇದು ರಸ್ತೆ ಪಕ್ಕದಲ್ಲಿಯೇ ಇರುವ ಬೆಳೆಗಳ ಮೇಲೆ ಬಿದ್ದು, ನಷ್ಟವಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ.
ಇಟ್ಟಿಗೆ ಭಟ್ಟಿಗೆ ನದಿ ದಡದಿಂದ ಮಣ್ಣು ಸಾಗಾಟ ಮಾಡಲಾಗುತ್ತಿದೆ. ಪ್ರತಿನಿತ್ಯ ನೂರಕ್ಕೂ ಹೆಚ್ಚು ಲಾರಿಗಳ ಸಂಚಾರ ಮಾಡುತ್ತಿದ್ದರೂ, ಮಾಲೀಕರು ಧೂಳು ನಿಯಂತ್ರಿಸಲು ರಸ್ತೆಗೆ ನೀರು ಹಾಕುವುದನ್ನೂ ಬಿಟ್ಟಿದ್ದಾರೆ. ಇದರಿಂದ ಲಾರಿ ಓಡಾಡುವಾಗ ಧೂಳು ಬೆಳೆದ ಬೆಳೆ ಮೇಲೆ ಬಿದ್ದು ರೋಗ ಬಂದು ಹಾಳಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಾಲಸೋಲ ಮಾಡಿ ಬಂಡವಾಳ ಹಾಕಿ, ಕಷ್ಟಪಟ್ಟು ಬೆಳೆದ ತರಕಾರಿ ಸೇರಿದಂತೆ ವಿವಿಧ ಬೆಳೆಗಳು ಹಾಳಾಗಿವೆ ಎಂದು ರಸ್ತೆ ಮಧ್ಯೆ ಕುಳಿತುಕೊಂಡಿರುವ ರೈತ ಮಹಿಳೆ ಕೊಟ್ರಮ್ಮ ಸಂಕಷ್ಟ ತೋಡಿಕೊಂಡಿದ್ದಾರೆ. ಲಾರಿ ತಡೆದು ಪ್ರತಿಭಟನೆ ನಡೆಸಲು ಮುಂದಾದ ಹಿನ್ನೆಲೆಯಲ್ಲಿ ಸ್ಥಳೀಯರು ಮನವೊಲಿಕೆಗೆ ಮುಂದಾಗಿದ್ದು, ರಸ್ತೆಗೆ ನೀರು ಸಿಂಪಡಣೆ ಮಾಡಬೇಕೆಂದು ಲಾರಿಯವರಿಗೆ ತಾಕೀತು ಮಾಡಿದ್ದಾರೆ.
ಇದನ್ನೂ ಓದಿ | Aircraft Industry | ವಿಮಾನಗಳ ಉತ್ಪಾದನೆಗೆ ಭಾರತದ ಸಿದ್ಧತೆ, ಏರ್‌ಪೋರ್ಟ್ ಬಳಿ ಸ್ಥಳ ಪರಿಶೀಲನೆ