Site icon Vistara News

Solar Grid: ಸೋಲಾರ್‌ ಗ್ರಿಡ್‌ನಲ್ಲಿ ಭ್ರಷ್ಟಾಚಾರ; ಕರ್ನಾಟಕಕ್ಕೆ ಸಿಗದ ಟೆಂಡರ್ ಕೇರಳದ ಕಂಪನಿಗೆ ಸಿಕ್ಕಿದ್ಹೇಗೆ?

Solar plant shivamogga

#image_title

ವಿವೇಕ ಮಹಾಲೆ, ಶಿವಮೊಗ್ಗ
ರಾಜ್ಯದಲ್ಲಿ ಸೋಲಾರ್ ಗ್ರಿಡ್ (Solar Grid) ಕಾಮಗಾರಿಯಲ್ಲಿ ಕೋಟ್ಯಂತರ ರೂಪಾಯಿ ಭಷ್ಟಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಇದು ರಾಜ್ಯದಲ್ಲಿಯೇ ಅತಿ ದೊಡ್ಡ ಹಗರಣಗಳಲ್ಲೊಂದಾಗಿದೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತದಲ್ಲಿ ದೂರು ದಾಖಲಿಸಲಾಗಿದೆ.

ರಾಜ್ಯದ 6022 ಗ್ರಾಮ ಪಂಚಾಯಿತಿ ಕಟ್ಟಡಗಳ ಮೇಲ್ಭಾಗದಲ್ಲಿ ಅಳವಡಿಸಿರುವ 3 ಕೆವಿ ಸೋಲಾರ್ ಗ್ರಿಡ್ ಕಾಮಗಾರಿಯಲ್ಲಿ ಗೋಲ್ಮಾಲ್ ನಡೆದಿರುವ ಶಂಕೆ ವ್ಯಕ್ತವಾಗಿದೆ. ಪ್ರತಿ ಗ್ರಾಮ ಪಂಚಾಯಿತಿಗೆ 4.98 ಲಕ್ಷ ರೂ. ಖರ್ಚು ಮಾಡಿ, ಸೋಲಾರ್ ಪ್ಲಾಂಟ್ ಅಳವಡಿಸಲಾಗಿದ್ದು, ಒಟ್ಟಾರೆ ಸುಮಾರು 300 ಕೋಟಿಯಷ್ಟು ಹಣ ಖರ್ಚು ಮಾಡಲಾಗಿದೆ. ಈ ಯೋಜನೆ ಅನುಷ್ಠಾನಕ್ಕಾಗಿ 2020ರ ಅ.22ರಂದು ಇ-ಟೆಂಡರ್ ಆಹ್ವಾನಿಸಲಾಗಿದ್ದು, ಎರಡು ಹಂತದಲ್ಲಿ ಬಿಡ್ ಅಂತಿಮಗೊಳಿಸಲಾಗಿದೆ. 2020ರ ನ.2ರಂದು ಜಿಲ್ಲಾವಾರು ಗುರಿ ಹಂಚಿಕೆ ಮಾಡಿ ಆದೇಶ ಹೊರಡಿಸಲಾಗಿದ್ದು, ಕೇರಳದ Inkel Limited ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಆದರೆ, 33KV ಸೋಲಾರ್ ಗ್ರಿಡ್ ಅಳವಡಿಕೆಗೆ ಸದ್ಯದ ಮಾರ್ಕೆಟ್ ದರ 2.68 ಲಕ್ಷ ರೂ. ಇದ್ದು, ಮಾರ್ಕೆಟ್ ದರಕ್ಕಿಂತ ದುಪ್ಪಟ್ಟು ದರದಲ್ಲಿ ಟೆಂಡರ್ ಅಂತಿಮಗೊಳಿಸಲಾಗಿದೆ.

ರಾಜ್ಯದ ವಿವಿಧ ಕಂಪನಿಗಳ ಅಂದಾಜು ಪಟ್ಟಿಗೂ ಕೇರಳ ಮೂಲದ ಕಂಪನಿಗೂ ತುಂಬಾ ವ್ಯತ್ಯಾಸ ಇರುವುದು ಸಂಶಯ ಮೂಡಿಸಿದ್ದು, ಪ್ರಕರಣದಲ್ಲಿ ಭಾರೀ ಗೋಲ್ಮಾಲ್ ನಡೆದಿರುವ ಸಾಧ್ಯತೆ ಹೆಚ್ಚಾಗಿದೆ. ಪ್ರತಿ ಸೋಲಾರ್ ಪ್ಲಾಂಟ್ ಗೆ ಸುಮಾರು 2.50 ಲಕ್ಷ ರೂ. ಹೆಚ್ಚುವರಿ ಖರ್ಚು ಮಾಡಲಾಗಿದ್ದು, ಒಟ್ಟಾರೆ ಇಡೀ ರಾಜ್ಯದಲ್ಲಿ ಸುಮಾರು 150 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಲಾಗಿದೆ.

ಇದನ್ನೂ ಒದಿ: Naatu Naatu: ನಾಟು ನಾಟು ಹಾಡನ್ನು ಗೂಗಲ್‌ನಲ್ಲಿ ಹುಡುಕಿದವರ ಸಂಖ್ಯೆಯಲ್ಲಿ ಶೇ.1105 ಏರಿಕೆ!

ಗ್ರಾಪಂಗಳಲ್ಲಿ ಚುನಾಯಿತ ಪ್ರತಿನಿಧಿಗಳು ಇಲ್ಲದ ಅವಧಿಯಲ್ಲಿ ಆಡಳಿತಾಧಿಕಾರಿಗಳ ಅವಧಿಯಲ್ಲಿ ಯೋಜನೆ ಅನುಷ್ಠಾನಗೊಂಡಿದೆ. ಇದಲ್ಲದೆ ಎಲ್ಲ ಮುಕ್ತಾಯಗೊಳ್ಳದ ಯೋಜನೆಗಳನ್ನು ಬದಿಗಿಟ್ಟು, ಪ್ರಥಮಾದ್ಯತೆಯಲ್ಲಿ ಸೋಲಾರ್ ಗ್ರಿಡ್ ಅಳವಡಿಕೆ ಕಾಮಗಾರಿ ಅನುಷ್ಠಾನಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೂಚಿಸಿತ್ತು. ಅಂದಿನ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ರಾಜ್ಯದ ಎಲ್ಲ ಜಿಪಂ ಸಿಇಒಗಳಿಗೆ ಈ ಕುರಿತು ನಿರ್ದೇಶನ ನೀಡಿದ್ದರು. ಗ್ರಾಪಂಗಳಿಗೆ ಚುನಾವಣೆ ನಡೆಯುವ ಪೂರ್ವದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗಿದ್ದು, ಹಣ ಎತ್ತುವ ಉದ್ದೇಶಕ್ಕಾಗಿ ನಡೆದಿತ್ತೇ? ತರಾತುರಿಯ ಯೋಜನೆ ಅನುಷ್ಠಾನ ಮಾಡಲಾಯಿತಾ ಎಂಬ ಪ್ರಶ್ನೆ ಎದ್ದಿದೆ.

ಲೋಕಾಯುಕ್ತದಲ್ಲಿ ದಾಖಲಾಯ್ತು ದೂರು

ಭದ್ರಾವತಿಯ ಸಾಮಾಜಿಕ ಹೋರಾಟಗಾರ ಶಿವಕುಮಾರ್ ಅವರಿಂದ ಮಾ.6 ರಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ದೂರು ದಾಖಲಾಗಿದೆ. ಅವ್ಯವಹಾರದ ಶಂಕೆ ವ್ಯಕ್ತಪಡಿಸಿ, ತನಿಖೆಗೆ ಮನವಿ ಮಾಡಿಕೊಂಡಿದ್ದು, ಕಳಪೆ ಗುಣಮಟ್ಟದ ಸಾಮಗ್ರಿ ಅಳವಡಿಕೆ ಮಾಡಲಾಗಿದೆ. ಟೆಂಡರ್‌ನಲ್ಲಿ ಕಾಣಿಸಿದಂತೆ ಸೋಲಾರ್ ಪ್ಯಾನೆಲ್, ಬ್ಯಾಟರಿ, ನೆಟ್ ಮೀಟರಿಂಗ್ (Power Plants) ಮಾಡಿಲ್ಲ. ಇದುವರೆಗೂ ಇದರ ನಿರ್ವಹಣೆ ಆಗುತ್ತಿಲ್ಲ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉಸ್ತುವಾರಿಯಲ್ಲಿ ಈ ಕಾಮಗಾರಿ ನಡೆದಿದ್ದು, ಅಂದಿನ ಸಚಿವ ಕೆ.ಎಸ್.ಈಶ್ವರಪ್ಪ ಅವರೇ ನೇರ ಹೊಣೆ ಎಂದು ದೂರುದಾರ ಆರೋಪಿಸಿದ್ದಾರೆ.

ಇದನ್ನೂ ಓದಿ: Chewing Gum : ಚ್ಯೂಯಿಂಗ್‌ ಗಮ್‌ ನುಂಗಿದಿರೇ? ಹೆದರಬೇಡಿ, ಜೀವ ಹೋಗುವುದಿಲ್ಲ!

ಒಟ್ಟಿನಲ್ಲಿ ರಾಜ್ಯದಲ್ಲೇ ಗುತ್ತಿಗೆದಾರರಿದ್ದರೂ ಹೊರ ರಾಜ್ಯದವರಿಗೆ ಮಣೆ ಹಾಕಿರುವುದು ಭ್ರಷ್ಟಾಚಾರದ ವಾಸನೆ ಹೊಡೆಯಲು ಪ್ರಮುಖ ಕಾರಣವಾಗಿದ್ದು, ಅದರಲ್ಲೂ, ದುಪ್ಪಟ್ಟು ದರದಲ್ಲಿ ಗುತ್ತಿಗೆ ನೀಡಿರುವುದು ಮತ್ತು ತರಾತುರಿಯಲ್ಲಿ ಅನುಷ್ಠಾನಕ್ಕೆ ಮುಂದಾಗಿರುವುದು ಹಲವಾರು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಲೋಕಾಯುಕ್ತ ತನಿಖೆಯಿಂದ ಈ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕಿದೆ.

Exit mobile version