Site icon Vistara News

Solar Power Plant: 400 ಕಿಲೋವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕ ಲೋಕಾರ್ಪಣೆ

Solar Power plant JNN Engineering College mp raghavendra

ಶಿವಮೊಗ್ಗ: ವಿದ್ಯಾಸಂಸ್ಥೆಗಳು ಓದಿನ ಜತೆಗೆ ನಾವೀನ್ಯ ಪ್ರಯೋಗಗಳನ್ನು ನಡೆಸುವ ಪೂರಕ ವೇದಿಕೆಗಳನ್ನು ನಿರ್ಮಾಣ ಮಾಡಬೇಕಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತ ಮಹೋತ್ಸವದ ಪ್ರಯುಕ್ತ ಜೆ.ಎನ್.ಎನ್. ಎಂಜಿನಿಯರಿಂಗ್ ಕಾಲೇಜಿನಲ್ಲಿ ಸ್ಥಾಪಿಸಿರುವ 400 ಕಿ.ವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕವನ್ನು ಬುಧವಾರ (ಜ.೨೫) ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಸಾಮಾಜಿಕ ಸಂಶೋಧನಾ ಪ್ರಯೋಗಗಳು ಸಮಾಜದ ಉನ್ನತಿಗೆ ಅತಿ ಅಗತ್ಯ ವಿಚಾರವಾಗಿದ್ದು, ಸಂಶೋಧನಾ ಪ್ರಕ್ರಿಯೆಗಳಿಗೆ ವಿದ್ಯಾರ್ಥಿಗಳು ತಮ್ಮನ್ನು ತೆರೆದುಕೊಳ್ಳಬೇಕಿದೆ. ಪರಿವರ್ತಿತ ಸಮಾಜದಲ್ಲಿ ಪರಿಸರ ಪೂರಕ ನಾವೀನ್ಯ ಪ್ರಯೋಗಗಳು ಅಗತ್ಯ. ಪ್ರಧಾನ ಮಂತ್ರಿಗಳ ಸಂಕಲ್ಪದಿಂದ ಗ್ರಾಮೀಣ ಭಾಗದ ಪ್ರತಿ ಮನೆಗಳಿಗೆ ಗ್ಯಾಸ್ ಸಂಪರ್ಕ ನೀಡುವಲ್ಲಿ ಸರ್ಕಾರ ಸಫಲವಾಗಿದೆ. ಜತೆಯಲ್ಲಿ ಸೌರ ವಿದ್ಯುತ್ ಘಟಕಗಳ ಮೂಲಕ ಹಳ್ಳಿಗೆ ಬೇಕಾದ ಸಂಪೂರ್ಣ ವಿದ್ಯುತ್ ಸೇವೆ ನೀಡುವ ಪ್ರಯೋಗಗಳು ಹೊಸನಗರದ ಹನಿಯದಂತಹ ಗ್ರಾಮಗಳು ಸಫಲವಾಗಿದೆ. ಸೋಲಾರ್ ಶಕ್ತಿಯು ಪರ್ಯಾಯ ವಿದ್ಯುಚ್ಛಕ್ತಿ ಕಂಡುಕೊಳ್ಳುವಲ್ಲಿ ಉತ್ತಮ ಬೆಳವಣಿಗೆಯಾಗಿದೆ. ಮಲೆನಾಡಿನ ಭಾಗದಲ್ಲಿ ಏನೂ ಇಲ್ಲದ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಎನ್ಇಎಸ್ ಸಂಸ್ಥೆ ನೀಡಿದ ಕೊಡುಗೆ ಅವಿಸ್ಮರಣೀಯ ಎಂದು ಹೇಳಿದರು.

ಇಂದು ಶಿವಮೊಗ್ಗ ಜಿಲ್ಲೆ ಉದ್ಯಮ, ಪ್ರವಾಸೋದ್ಯಮ, ಶಿಕ್ಷಣ ಕ್ಷೇತ್ರದಲ್ಲಿ ಬಲಿಷ್ಠ ಜಿಲ್ಲೆಯಾಗಿ ಅಭಿವೃದ್ಧಿ ಹೊಂದುತ್ತಿದೆ. ಇದಕ್ಕೆ ಪೂರಕವಾಗಿ ವಿಮಾನ ನಿಲ್ದಾಣ ಲೋಕಾರ್ಪಣೆಯಾಗುತ್ತಿದೆ. ಕೊಲ್ಲೂರು ಮತ್ತು ಕೊಡಚಾದ್ರಿಗೆ ಕೇಬಲ್ ಕಾರ್ ಮೂಲಕ ಸಂಪರ್ಕ ನೀಡುವ ಐತಿಹಾಸಿಕ ಯೋಜನೆಗೆ ಕೇಂದ್ರ ಸರ್ಕಾರ ಐನೂರು ಕೋಟಿ ರೂ. ಬಿಡುಗಡೆಗೊಳಿಸಿ ಆದೇಶಿಸಿದೆ. ಶಿವಮೊಗ್ಗ ಮತ್ತು ಉತ್ತರ ಕರ್ನಾಟಕ ಸಂಪರ್ಕಿಸುವ ರೈಲ್ವೆ ಯೋಜನೆಯ ಕೆಲಸ ಭರದಿಂದ ಸಾಗುತ್ತಿದೆ ಎಂದು ಹೇಳಿದರು.

ಸೌರ ವಿದ್ಯುತ್ ಘಟಕ ಸ್ಥಾಪನೆಗೆ ಶ್ರಮಿಸಿದ ಎನ್.ಇ.ಎಸ್. ಮಾಜಿ ಅಧ್ಯಕ್ಷ ಎ.ಎಸ್.ವಿಶ್ವನಾಥ, ನಿವೃತ್ತ ಉಪ ಪ್ರಾಂಶುಪಾಲ ಡಾ.ಎಲ್.ಕೆ. ಶ್ರೀಪತಿ, ಪ್ರಾಧ್ಯಾಪಕ ಡಾ.ಅಜ್ಜಣ್ಣ, ಟಾಟಾ ಕಂಪನಿಯ ದರ್ಶನ್ ಅವರನ್ನು ಸನ್ಮಾನಿಸಲಾಯಿತು.

ಎನ್.ಇ.ಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಎರಡು ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಿರುವ 400 ಕಿ.ವ್ಯಾಟ್ ಉತ್ಪಾದಿಸುವ ಸೌರ ವಿದ್ಯುತ್ ಘಟಕವು ಸಂಪೂರ್ಣ ಪರಿಸರ ಸ್ನೇಹಿಯಾಗಿದೆ. ಇದರಿಂದ ಸುಮಾರು ಹನ್ನೆರಡು ಸಾವಿರ ಟನ್ ಇಂಗಾಲ ಡೈಆಕ್ಸೈಡ್ ಕಡಿಮೆಯಾಗಲಿದೆ. ದೇಶೀಯ ಉತ್ಪಾದನೆಗೆ ಹೆಚ್ಚು ಒತ್ತು ನೀಡಿ, ದಾಬಸ್ ಪೇಟೆಯಲ್ಲಿ ತಯಾರಾದ ಟಾಟಾ ಪವರ್ ಕಂಪನಿಯ ಉಪಕರಣಗಳನ್ನು ಬಳಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ | ICC Awards: ಐಸಿಸಿ ವರ್ಷದ ಉದಯೋನ್ಮುಖ ಆಟಗಾರ್ತಿ ಪ್ರಶಸ್ತಿ ಪಡೆದ ಟೀಮ್​ ಇಂಡಿಯಾದ ರೇಣುಕಾ ಸಿಂಗ್​

ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ಪರಿಸರದ ಮೇಲಿನ ಹಾನಿಗಳನ್ನು ಸೂಕ್ಷ್ಮವಾಗಿ ಗಮನಿಸಿ, ಜವಾಬ್ದಾರಿಯುತ ನಡೆ ನಮ್ಮದಾಗಬೇಕಿದೆ. ಸೋಲಾರ್ ಯೂನಿಟ್‌ಗಳ ಸ್ಥಾಪನೆಗೆ ಸರ್ಕಾರ ಅನೇಕ ಸಬ್ಸಿಡಿ ಯೋಜನೆಗಳನ್ನು ನೀಡುತ್ತಿದೆ. ಆಧುನಿಕತೆಯ ಭರದಲ್ಲಿ ಪಕೃತಿ ಮೇಲಾಗುತ್ತಿರುವ ಒತ್ತಡ ಕಡಿಮೆಯಾಗಬೇಕಿದೆ. ಪ್ರಕೃತಿಯನ್ನು ಪ್ರೀತಿಸದಿರುವವನು ಏನನ್ನೂ ಪ್ರೀತಿಸಲಾರ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಸದಸ್ಯ ವಿಶ್ವಾಸ್, ರಾಷ್ಟ್ರೀಯ ಶಿಕ್ಷಣ ಸಮಿತಿಯ ಉಪಾಧ್ಯಕ್ಷ ಸಿ.ಆರ್.ನಾಗರಾಜ, ಕಾರ್ಯದರ್ಶಿ ಎಸ್.ಎನ್. ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಖಜಾಂಚಿ ಡಿ.ಜಿ.ರಮೇಶ್, ನಿರ್ದೇಶಕರಾದ ಟಿ.ಆರ್.ಅಶ್ವತ್ಥ ನಾರಾಯಣ ಶೆಟ್ಟಿ, ಎಚ್.ಸಿ.ಶಿವಕುಮಾರ್, ಸೀತಾಲಕ್ಷ್ಮೀ, ಪ್ರಾಂಶುಪಾಲ ಡಾ.ಕೆ.ನಾಗೇಂದ್ರ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ಸೌರ ವಿದ್ಯುತ್ ಘಟಕ ಸ್ಥಾಪನೆಗೆ ಶ್ರಮಿಸಿದ ಎನ್.ಇ.ಎಸ್. ಮಾಜಿ ಅಧ್ಯಕ್ಷ ಎ.ಎಸ್.ವಿಶ್ವನಾಥ, ನಿವೃತ್ತ ಉಪ ಪ್ರಾಂಶುಪಾಲ ಡಾ.ಎಲ್.ಕೆ. ಶ್ರೀಪತಿ, ಪ್ರಾಧ್ಯಾಪಕ ಡಾ.ಅಜ್ಜಣ್ಣ, ಟಾಟಾ ಕಂಪನಿಯ ದರ್ಶನ್ ಅವರನ್ನು ಸನ್ಮಾನಿಸಲಾಯಿತು.

ಇದನ್ನೂ ಓದಿ | Republic Day 2023: ಗಣರಾಜ್ಯೋತ್ಸವಕ್ಕೆ ಯಾವ ಪುರಸ್ಕಾರ, ಪ್ರಶಸ್ತಿ ಘೋಷಣೆ? ಅವುಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ…

Exit mobile version