ಶಿರಸಿ: ಕಾರ್ಗಿಲ್ ವಿಜಯ್ ದಿವಸ ಭಾರತೀಯ ಸೇನೆಯು ತನ್ನ ಶಕ್ತಿ ಸಾಬೀತುಪಡಿಸಿದ ಐತಿಹಾಸಿಕ ದಿನವಾಗಿದ್ದು, ಅದೆಷ್ಟೋ ಸೈನಿಕರ ಬಲಿದಾನದ ಫಲವಾಗಿ ನಾವಿಂದು ಶಾಂತಿ, ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ. ಹೀಗಾಗಿ ಪ್ರತಿಯೊಂದು ಮನೆಯಿಂದಲೂ ಸೇನೆಗೆ ಸೇರಿ ನಿಸ್ವಾರ್ಥ ಸೇವೆ ಸಲ್ಲಿಸುವ ದೇಶಾಭಿಮಾನ ಬೆಳೆಯಬೇಕಿದೆ ಎಂದು ಭಾರತೀಯ ಸೇನೆ ನಿವೃತ್ತ ಸೈನಿಕ ಶಿವರಾಮ ಜಿ. ಭಟ್ಟ ಹೇಳಿದರು.
ಯಲ್ಲಾಪುರ ತಾಲೂಕಿನ ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ (Vishwadarshana School) ಮಂಗಳವಾರ ಏರ್ಪಡಿಸಿದ್ದ ಕಾರ್ಗಿಲ್ ವಿಜಯ್ ದಿವಸದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸೈನಿಕರದ್ದು ವಿಶ್ರಾಂತಿ ಬಯಸುವ ಜೀವನವಲ್ಲ. ನಾನು ಸೇನೆಗೆ ಸೇರಿದ್ದಾಗ ಉಲ್ಫಾ ಭಯೋತ್ಪಾದನಾ ಚಟುವಟಿಕೆ ತೀವ್ರವಾಗಿತ್ತು. ಆಗಿನ ಅನುಭವ ಮರೆಯಲಾರದ್ದು. ವಿದ್ಯಾರ್ಥಿಗಳು ಭಾವಿ ಸೈನಿಕರಾಗಿದ್ದು, ದೇಶಾಭಿಮಾನ ಬೆಳೆಸಿಕೊಂಡು ದೇಶಕ್ಕೆ ಕೊಡುಗೆ ನೀಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು, ಸೈನಿಕರ ತ್ಯಾಗ ಹೊಟ್ಟೆಪಾಡಿಗಾಗಿ ಅಲ್ಲ, ದೇಶಕ್ಕಾಗಿ ಎಂದರು.
ಇದನ್ನೂ ಓದಿ | Kargil Vijay Diwas 2022 | ಕಾರ್ಗಿಲ್ ಯುದ್ಧ ಗೆದ್ದ ಹೆಮ್ಮೆಯ ದಿನ; ಯೋಧರ ತ್ಯಾಗ, ಶೌರ್ಯಕ್ಕೆ ಗೌರವ
ಕಾರ್ಗಿಲ್ ಘರ್ಷಣೆ ಎಂಬುದು ನಾನು ಸೇವೆ ಸಲ್ಲಿಸುತ್ತಿರುವ ಅವಧಿಯಲ್ಲಿ ನಡೆದ ಒಂದು ಘಟನೆ. ಪಾಕ್ ಆಕ್ರಮಣದ ವಿರುದ್ಧ ದೇಶವನ್ನು ರಕ್ಷಿಸಿದ ಹಲವಾರು ಸಂದರ್ಭಗಳಿವೆ. ಅಂತಹ ಸಂದರ್ಭಗಳಲ್ಲಿ ಒಂದು ಕಾರ್ಗಿಲ್ ಘರ್ಷಣೆ. ಆಪರೇಷನ್ ವಿಜಯ್ ಎಂಬ ಹೆಸರಿನಲ್ಲಿ ನಡೆದ ಈ ಹೋರಾಟದಲ್ಲಿ ಭಾರತೀಯ ಸೇನೆ ಸ್ಪಷ್ಟವಾಗಿ ಪಾಕಿಸ್ತಾನದ ಸೇನೆಯ ವಿರುದ್ಧ ಜಯವನ್ನು ಸಾಧಿಸಿತ್ತು ಎಂದರು.
ಪ್ರೌಢಶಾಲೆ ಮುಖ್ಯ ಶಿಕ್ಷಕ ಪ್ರಸನ್ನ ಜಿ. ಹೆಗಡೆ ಮಾತನಾಡಿ, ದೇಶದ ಗಡಿಯಲ್ಲಿ ಪ್ರತಿಕ್ಷಣ ಹೋರಾಟ ಇದ್ದೇ ಇದೆ. ಅಲ್ಲಿ ಗಡಿಯ ರಕ್ಷಣೆಯೇ ಒಂದು ಹೋರಾಟವಾಗಿದೆ. ದೇಶವನ್ನು ರಕ್ಷಿಸುತ್ತಿರುವ ಸೈನಿಕರು ಪ್ರಾತಃ ಸ್ಮರಣೀಯರು ಮತ್ತು ನಿತ್ಯಸ್ಮರಣೀಯರು, ಅವರನ್ನು ನಾವು ಪ್ರತಿದಿನ ನೆನಪಿಸಿಕೊಳ್ಳಬೇಕಿದ್ದು, ವಿದ್ಯಾರ್ಥಿಗಳಿಗೆ ಸೈನಿಕರು ಆದರ್ಶವಾಗಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ವಾಗೀಶ ಭಟ್ಟ, ಸನತ್ ಕುಮಾರ ಹೆಗಡೆ, ರಾಜೀವ್ ಗಾಂವ್ಕರ್, ಮಾನಸಾ ಶೇಟ್, ನಯನಾ ಸಿದ್ದಿ, ಸಹನಾ ಗಾಂವ್ಕರ್, ಪೃಥ್ವಿ ಗಾಂವ್ಕರ್, ರಮ್ಯಾ ಮಡಿವಾಳ, ಋತ್ವಿಕ್ ಹೆಬ್ಬಾರ್, ಸೌಂದರ್ಯ ಶೇಟ್, ಗೋಪಾಲಕೃಷ್ಣ ದೇಶಭಕ್ತಿ ಗೀತೆಗಳ ಗಾಯನ ಮಾಡಿದರು. ವಿಶ್ವದರ್ಶನ ಪಿಯು ಕಾಲೇಜಿನ ಪ್ರಾಂಶುಪಾಲ ಡಾ.ದತ್ತಾತ್ರೇಯ ಕೆ. ಗಾಂವ್ಕಾರ್, ಶಿಕ್ಷಕರು ಹಾಗೂ ಸಿಬ್ಬಂದಿ ಇದ್ದರು.
ಇದನ್ನೂ ಓದಿ | ಇವರು ನಮ್ಮ ಹೆಮ್ಮೆಯ ಕಾರ್ಗಿಲ್ ಕದನ ಕಲಿಗಳು