ಬೆಂಗಳೂರು: ಸಾಮಾನ್ಯವಾಗಿ ಎಲ್ಲರೂ ಸಂತೋಷದ ದಾಂಪತ್ಯ ಜೀವನ ಬಯಸುತ್ತಾರೆ. ಆದರೂ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉಂಟಾಗುತ್ತಲೇ ಇರುತ್ತವೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗಿ ವಿಚ್ಛೇದನಕ್ಕೆ ಕಾರಣವಾಗುತ್ತವೆ. ಹೀಗಾಗಿ ವೈವಾಹಿಕ ಬಾಂಧವ್ಯವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಲಹೆಗಳನ್ನು ನೀಡಲು ನಗರದಲ್ಲಿ ಸಂಹತಿ ಫೌಂಡೇಶನ್ (Samhati Foundation) ವತಿಯಿಂದ ಜೂನ್ 3ರಂದು ʼಆನಂದಮಯ ವೈವಾಹಿಕ ಜೀವನಕ್ಕಾಗಿ ಸುಭದ್ರ ಅಡಿಪಾಯʼ ಎಂಬ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಆದರೆ, ಮದುವೆಯಾಗಿ ಮೂರು ವರ್ಷದೊಳಗಿನ ದಂಪತಿಗೆ ಇಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ.
ಜಯನಗರ 4ನೇ ಬ್ಲಾಕ್‌ನ ಯುವಪಥ ಸಭಾಂಗಣದಲ್ಲಿ ಜೂನ್ 3 ರಂದು ಬೆಳಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ಕಾರ್ಯಾಗಾರ ನಡೆಯಲಿದೆ. ಅಕಾಡಮಿ ಫಾರ್ ಕ್ರಿಯೇಟಿವ್ ಟೀಚಿಂಗ್ ಚೇರ್ಮನ್ ಡಾ.ಗುರುರಾಜ ಕರಜಗಿ, ಕುಟುಂಬ ಪ್ರಬೋಧನ ಸಂಸ್ಥೆಯ ಪೂರ್ವ ಸಂಯೋಜಕ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಮನಃಶಾಸ್ತ್ರಜ್ಞರಾದ ಡಾ. ಪದ್ಮಶ್ರೀ ರಾವ್, ನ್ಯಾಯವಾದಿ ಕ್ಷಮಾ ನರಗುಂದ್ ಅವರು ಕಾರ್ಯಾಗಾರ ನಡೆಸಿಕೊಡಲಿದ್ದು, ಆನಂದಮಯ ವೈವಾಹಿಕ ಜೀವನಕ್ಕಾಗಿ ನವದಂಪತಿಗೆ ಸಲಹೆಗಳನ್ನು ನೀಡಲಿದ್ದಾರೆ.
ಇದನ್ನೂ ಓದಿ | ವಿಸ್ತಾರ ಯುಗಾದಿ ಕಥಾಸ್ಪರ್ಧೆ: ತೀರ್ಪುಗಾರರ ಟಿಪ್ಪಣಿ: ಸಾಮಾಜಿಕ ಪ್ರಸ್ತುತತೆಯೇ ಜೀವಾಳವಾಗಿರುವ ಕತೆಗಳು
ದೀರ್ಘಾವಧಿಯ ಸುಖವಾದ ದಾಂಪತ್ಯದ ರಹಸ್ಯವೇನು?, ವೈವಾಹಿಕ ಜೀವನದ ಏಳುಬೀಳುಗಳನ್ನು ಸುಲಭವಾಗಿ ನಿಭಾಯಿಸಲು ಸೂತ್ರಗಳೇನು?, ವೈವಾಹಿಕ ಜೀವನದ ಯಶಸ್ಸಿಗೆ ಸಹಕಾರಿಯಾಗುವ ಅಂಶಗಳು ಭಾರತೀಯ ಚಿಂತನೆಯಲ್ಲಿ ಸಿಗಬಹುದೇ?, ನಿಮ್ಮ ಸಂಗಾತಿಯೊಂದಿಗೆ ಆನಂದಮಯ ಜೀವನವನ್ನು ಕಟ್ಟಿಕೊಳ್ಳುವ ಬಗೆ ಹೇಗೆ? ಎಂಬ ವಿಷಯಗಳ ಬಗ್ಗೆ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಸಂವಾದ ನಡೆಸಲಿದ್ದಾರೆ.
ಕಾರ್ಯಾಗಾರದಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು ಮೊಬೈಲ್ ಸಂಖ್ಯೆ 9900013295, 9945690300 ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬಹುದು ಅಥವಾ ಈ ಕೆಳಗಿನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹೆಸರು ನೋಂದಣಿ ಮಾಡಿಕೊಳ್ಳಬಹುದು.