Site icon Vistara News

ಇತಿಹಾಸ ವಸ್ತುನಿಷ್ಠವಾಗಿರಬೇಕು, ನಿಸ್ವಾರ್ಥದಿಂದ ಬರೆಯುವವರನ್ನು ಗೌರವಿಸಬೇಕು: ಹರಿಪ್ರಕಾಶ್‌ ಕೋಣೆಮನೆ

Hariprakash Konemane lecture at a brainstorming session on pluralism and Hindutva Jayanagar Manthan programme

ಬೆಂಗಳೂರು: ಇತಿಹಾಸ ವಸ್ತುನಿಷ್ಠವಾಗಿರಬೇಕೇ ಹೊರತು ಕಪೋಲಕಲ್ಪಿತವಾಗಿರಬಾರದು ಎಂದು ವಿಸ್ತಾರ ನ್ಯೂಸ್‌ ಸಿಇಒ, ಪ್ರಧಾನ ಸಂಪಾದಕ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಹೇಳಿದರು.

ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಂಸ್ಥೆಯ ವಾಡಿಯಾ ಸಭಾಂಗಣದಲ್ಲಿ ಭಾನುವಾರ (ಮಾ. 19) ಏರ್ಪಡಿಸಲಾಗಿದ್ದ “ನಿಜ ಇತಿಹಾಸದೊಂದಿಗೆ ಮುಖಾಮುಖಿ” ಅಂಕಣ ಸಂಕಲನ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈಲ್ವೆ ಅಭಿವೃದ್ಧಿ ಆಗಲು ಬ್ರಿಟಿಷ್ ಸಂಸ್ಥಾನ ಕಾರಣ ಎಂಬುದು ನಿಜ. ಆದರೆ, ಅವರು ಅರಣ್ಯದ ಸಂಪತ್ತನ್ನು ದೋಚಲು ಇದನ್ನು ಬಳಕೆ ಮಾಡಿಕೊಂಡಿದ್ದರು ಎಂಬ ಸತ್ಯವನ್ನು ಬಹಳಷ್ಟು ಮಂದಿ ಬರೆಯವುದಿಲ್ಲ. ಟಿಪ್ಪು ರೇಷ್ಮೆ ಬೆಳೆಯನ್ನು ತಂದ, ಬಾಬಾ ಬುಡನ್‌ ಕಾಫಿ ಬೀಜವನ್ನು ತಂದ ಎಂಬ ಸುಳ್ಳು ಇತಿಹಾಸವನ್ನು ಬರೆಯಲಾಗಿದೆ. ಆದರೆ, ಟಿಪ್ಪು ಹಿಂದುಗಳ ಮೇಲೆ ಹೆಚ್ಚಿನ ತೆರಿಗೆಯನ್ನು ವಿಧಿಸುತ್ತಿದ್ದ ಎಂಬ ವಿಷಯ ಬಹಳಷ್ಟು ಜನರಿಗೆ ಗೊತ್ತಿಲ್ಲ. ಆದ್ದರಿಂದ ಸತ್ಯ ಎಲ್ಲರಿಗೂ ತಿಳಿಯಬೇಕು. ಈ ಕೆಲಸವು ಬರಹಗಾರರಿಂದ ಆಗಬೇಕು ಎಂದು ಹರಿಪ್ರಕಾಶ್‌ ಕೋಣೆಮನೆ ಹೇಳಿದರು.

ಕೆಟ್ಟ ಸಂಪ್ರದಾಯದ ಬಗ್ಗೆ ಇರಲಿ ಎಚ್ಚರ

ಯಾವುದೇ ವಿಷಯವನ್ನು ಕ್ಷಣಿಕ ಕಾರಣಕ್ಕಾಗಿ ಯಾರಾದರೂ ಪ್ರಸ್ತಾಪ ಮಾಡುತ್ತಾರೆಂದರೆ ಭವಿಷ್ಯದಲ್ಲಿ ನಾವು ಬಹಳ ದೊಡ್ಡ ಅಪಚಾರ ಮಾಡಿದಂತಾಗುತ್ತದೆ. ಅನೇಕರು ವ್ಯಾಪಾರಕ್ಕೋಸ್ಕರ, ಸ್ವಂತಕ್ಕೋಸ್ಕರ, ಪ್ರಚಾರಕ್ಕೋಸ್ಕರ ಹೆಸರುಗಳನ್ನು, ಇತಿಹಾಸಗಳನ್ನು ಬಳಸುವ ಅಪಾಯವಿದೆ. ಇಂಥ ಒಂದು ಕೆಟ್ಟ ಸಂಪ್ರದಾಯವನ್ನು ನಾವು ಹಾಕಿಕೊಟ್ಟಂತೆ ಆಗುತ್ತದೆ. ಹೀಗಾಗಿ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಟಿಪ್ಪು, ಉರಿಗೌಡ, ನಂಜೇಗೌಡರ ಬಗ್ಗೆ ಇಂದು ಕೇವಲ ರಾಜಕೀಯ ಚರ್ಚೆಗಳಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಸತ್ಯ ಹೇಳುವವರನ್ನು ಗೌರವಿಸೋಣ

ಕಾ.ವೆಂ. ನಾಗರಾಜ್‌ ಅವರು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ವೀರ ಸೇನಾನಿ ದೋಂಡಿಯಾ ವಾಘ್ ಬಗ್ಗೆ ಆಳವಾದ ಅಧ್ಯಯನ ಮಾಡುತ್ತಿದ್ದಾರೆ. ದೋಂಡಿಯಾ ವಾಘ್ ಬಗ್ಗೆ ಎಷ್ಟು ಜನಕ್ಕೆ ಇಂದು ಗೊತ್ತಿದೆ? ಏಕೆ ಸ್ಮರಿಸಿಕೊಳ್ಳಬೇಕು ಎಂಬುದು ಎಲ್ಲರಿಗೂ ಗೊತ್ತಾಗಬೇಕಿದೆ. ಇಂಥ ಕೆಲಸವನ್ನು ಇವರು ಇಂದು ಮಾಡುತ್ತಿದ್ದಾರೆ. ನಾವು ಇಂಥವರನ್ನು ಗೌರವಿಸುವ ಕೆಲಸ ಆಗಬೇಕು. ಸ್ವಾರ್ಥದ ಲವಲೇಶವೂ ಇಲ್ಲದೆ ಕೆಲಸ ಮಾಡುವವರ ಮೇಲೆ ನಾವು ಹೃದಯದಲ್ಲಿ ಗೌರವವನ್ನು ಇಟ್ಟುಕೊಳ್ಳಬೇಕು. ಸಾಹಿತಿ ಚಿದಾನಂದ ಮೂರ್ತಿಯವರು ಸತ್ಯ ಹೇಳಿದರು ಎನ್ನುವ ಕಾರಣಕ್ಕೆ ಅವರನ್ನು ಎಂದೂ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಲಿಲ್ಲ. ಸ್ವಾರ್ಥ, ಹಿತಾಸಕ್ತಿ ಇಲ್ಲದೆ ಕೆಲಸ ಮಾಡುವವರ ಕುರಿತು ಗೌರವವನ್ನು ಬೆಳೆಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ಇತಿಹಾಸ, ಸಂಸ್ಕೃತಿ, ಗುಲಾಮಗಿರಿ ಬಗ್ಗೆ ಸಾಕಷ್ಟು ಬರಹಗಾರರು ಸತ್ಯ ಬರೆಯಲು ಹಿಂಜರಿಯುತ್ತಾರೆ. ಆದರೆ, ಸಾಹಿತಿ ಮಂಜುನಾಥ್ ಅಜ್ಜಂಪುರ ಅವರು ಅಕ್ಷರದ ಮೂಲಕ ಈ ಬಗ್ಗೆ ಸತ್ಯವನ್ನು ಬಿಚ್ಚಿಡುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ ಎಂದು ಹೇಳಿದರು.

“ನಿಜ ಇತಿಹಾಸದೊಂದಿಗೆ ಮುಖಾಮುಖಿ” ಅಂಕಣ ಸಂಕಲನವನ್ನು ಬಿಡುಗಡೆ ಮಾಡಲಾಯಿತು.

ಲೇಖನಗಳು ಶಾಶ್ವತವಾಗಿ ಉಳಿಯುತ್ತವೆ. ಮಂಜುನಾಥ್ ಅಜ್ಜಂಪುರ ಅವರು ವಾಯ್ಸ್ ಆಫ್ ಇಂಡಿಯಾದಲ್ಲಿ ಪರಿಚಯವಾಗಿದ್ದರು. ಅವರಲ್ಲಿ ಲೇಖನಗಳನ್ನು ಬರೆಸಲಾರಂಭಿಸಿದೆ. ಇದಕ್ಕೆ ನಾಡಿನ ಓದುಗರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಯಿತು. ಮಂಜುನಾಥ್‌ ಅವರ ಎದೆಗಾರಿಕೆಯ ಲೇಖನಗಳಿಗೆ ಸಾಕಷ್ಟು ಬೆದರಿಕೆ ಕರೆಗಳು ಬಂದಿದ್ದವು. ಆದರೆ, ಅದನ್ನೆಲ್ಲ ಎದುರಿಸಿದ ಅವರು ಬರವಣಿಗೆಯನ್ನು ನಿಲ್ಲಿಸಲಿಲ್ಲ. ಈಗ ಈ ಪುಸ್ತಕವನ್ನು ಇಂದು ಹೊರತರಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ವಿಸ್ತಾರ Money Guide | PAN-Aadhaar link: ಆಧಾರ್‌ ಜತೆ ಮಾ. 31ರೊಳಗೆ ಲಿಂಕ್ ಮಾಡದಿದ್ದರೆ ಪ್ಯಾನ್‌ ನಿಷ್ಕ್ರಿಯ

ಅನಿಸಿಕೆ ಹಂಚಿಕೊಂಡ ಲೇಖಕ ಮಂಜುನಾಥ್ ಅಜ್ಜಂಪುರ

ತಪ್ಪುಗಳನ್ನು ಸರಿಪಡಿಸೋಣ

ಲೇಖಕ ಮಂಜುನಾಥ್ ಅಜ್ಜಂಪುರ ಮಾತನಾಡಿ, ಇದೊಂದು ಅಪರೂಪದ ಕಾರ್ಯಕ್ರಮವಾಗಿದೆ. ನನ್ನ ಮೊದಲ ಅಂಕಣ ಸಂಕಲನವನ್ನು ಇಂದು ಲೋಕಾರ್ಪಣೆಗೊಳಿಸಲಾಗಿದೆ. ಇದರಿಂದ ಸಾಕಷ್ಟು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲು ಸಾಧ್ಯವಾಗಿದೆ. ಪ್ರಮುಖ ವಿಚಾರವೆಂದರೆ ಗಂಭೀರ ವಿಚಾರಗಳನ್ನು ತಲುಪಿಸುವ ಕೆಲಸವು ಅತ್ಯಂತ ಕಷ್ಟಕರವಾಗಿದೆ. ಶಾಲಾ ಪುಸ್ತಕಗಳಲ್ಲಿ ಸಾಕಷ್ಟು ತಪ್ಪಾದ ಮಾಹಿತಿಗಳಿವೆ. ಸಂಸದೀಯ ವ್ಯವಸ್ಥೆ, ಕೈಗಾರಿಕಾ ಕ್ರಾಂತಿಯಂತಹ ಎಷ್ಟೋ ವಿಷಯಗಲೂ ನಮಗೆ ಪಾಶ್ಚಾತ್ಯರಿಂದ ಬಂದಿದೆ ಎಂಬ ಮಾಹಿತಿಗಳನ್ನು ಬಿತ್ತರಿಸಲಾಗಿದೆ. ಆದರೆ, ಇದು ತಪ್ಪು ಕಲ್ಪನೆಯಾಗಿದೆ. ಈ ರೀತಿಯ ತಪ್ಪುಗಳನ್ನು ಸರಿಪಡಿಸಬೇಕಾಗಿದೆ ಎಂದರು.

ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಮಲ್ಲೇಪುರಂ ಜಿ. ವೆಂಕಟೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇದೊಂದು ಮಹತ್ವದ ಪುಸ್ತಕವಾಗಿದೆ. ರಾಷ್ಟ್ರೋತ್ಥಾನದ ಮುದ್ರಣವು ಅಚ್ಚುಕಟ್ಟಾಗಿ ಮೂಡಿ ಬಂದಿದೆ. ಸುಳ್ಳಿನ ಮೇಲೆ ಸಾಕಷ್ಟು ನಡೆದಿದ್ದೇವೆ. ಸುಳ್ಳನ್ನು ಸತ್ಯ ಎಂದು ನಂಬಿದ್ದೇವೆ. ಸಾಹಿತ್ಯ ಪಠ್ಯ ಪುಸ್ತಕಗಳಲ್ಲಿ ಸಾಕಷ್ಟು ತಪ್ಪುಗಳಿವೆ. ದಾರಿ ತಪ್ಪಿಸುವಂತಿವೆ. ನಾವೆಲ್ಲ ತಲೆಯಲ್ಲಿ ಬ್ರಿಟಿಷ್ ಶಿಕ್ಷಣವನ್ನು ತುಂಬಿಕೊಂಡಿದ್ದೇವೆ. ಈ ಸುಳ್ಳುಗಳನ್ನು ಈ ಪುಸ್ತಕದಲ್ಲಿ ತೊಡೆದು ಹಾಕಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: WTC 2023 Final: ಓವಲ್‌ ಕದನಕ್ಕೆ ಕಾಯುತ್ತಿದ್ದೇವೆ; ಫೈನಲ್​ಗೂ ಮುನ್ನವೇ ರೋಹಿತ್​ ಪಡೆಗೆ ಎಚ್ಚರಿಕೆ ನೀಡಿದ ಸ್ಮಿತ್​

ಮಂಜುನಾಥ್ ಅಜ್ಜಂಪುರ ವಿರಚಿತ ಕೃತಿ | Nija Ithihasadondige Mukhamukhi Book Release | Vistara News

ಈ ಪುಸ್ತಕದಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ಹೊರತರಲಾಗಿದೆ. ಪಂಚಭೂತಗಳ ಆರಾಧನೆಯನ್ನು ಹೇಳಲಾಗಿದೆ. ಬಲಿಷ್ಠ ರಾಷ್ಟ್ರ ಕಟ್ಟುವ ಲೇಖನಗಳನ್ನು ಬರೆಯಲಾಗಿದೆ. ಬ್ರಿಟಿಷ್ ಗುಲಾಮಗಿರಿಯಿಂದ ಇನ್ನೂ ನಾವು ಹೊರ ಬಂದಿಲ್ಲ. ಬೌದ್ಧಿಕ ದಾಸ್ಯ ನಮ್ಮಲ್ಲಿ ಉಳಿದು ಹೋಗಿದೆ. ಮಕ್ಕಳಿಗೆ ನೈತಿಕ ಶಿಕ್ಷಣ ದೊರೆಯುತ್ತಿಲ್ಲ. ಪೋಷಕರು ಸಹ ಮಕ್ಕಳಿಗೆ ತಿಳಿ ಹೇಳುತ್ತಿಲ್ಲ, ಇದು ದೌರ್ಭಾಗ್ಯದ ಪರಿಸ್ಥಿತಿ. ಮನೆಯಲ್ಲಿ ಮೊದಲು ಉತ್ತಮ ವಾತಾವರಣ ನಿರ್ಮಾಣವಾಗಬೇಕು. ಶಾಲೆಯಿಂದಲೇ ಸಂಸ್ಕೃತಿ ಬಿತ್ತುವ ಕೆಲಸ ಆಗಬೇಕು ಎಂದು ಅಭಿಪ್ರಾಯಪಟ್ಟರು.

ಟಿಪ್ಪುವಿನ ಬಗ್ಗೆ ಹರಿಪ್ರಕೋಶ್‌ ಕೋಣೆಮನೆ ಹೇಳಿದ ಮಾತು…

ಚಿಂತಕ, ಇತಿಹಾಸಕಾರ ಜಿ.ಬಿ. ಹರೀಶ್ ಮಾತನಾಡಿ, ಹಿಂದುತ್ವ ಇರಲು ಬಂದಿರುವ ಧರ್ಮವೇ ಹೊರತು ಹೋಗಲು ಬಂದಿರುವ ಧರ್ಮವಲ್ಲ ಎಂಬ ಬಗ್ಗೆ ಈ ಪುಸ್ತಕದಲ್ಲಿ ಹೇಳಲಾಗಿದೆ. ಸ್ವಾತಂತ್ರ್ಯ ಪೂರ್ವ ಮತ್ತು ನಂತರದಲ್ಲಿ ಸಾಕಷ್ಟು ಗುಲಾಮಗಿರಿಯನ್ನು ಅನುಭವಿಸಿದೆವು. ಬ್ರಿಟಿಷರು ನಮ್ಮನ್ನು ಆಳಿದ್ದು ಕೇವಲ 90 ವರ್ಷ. ಚಂದ್ರಶೇಖರ ಆಜಾದ್, ಸುಖದೇವ್ ತರಹದ ಅನೇಕ ಮಹನೀಯರು ಬ್ರಿಟಿಷರ ಆಳ್ವಿಕೆಯಲ್ಲಿ ಸಾಕಷ್ಟು ಕಾಡಿದರು. ಈ ಬಗ್ಗೆ ಇತಿಹಾಸದಲ್ಲೇ ಉಲ್ಲೇಖಿಸಲಾಗಿದೆ. ಈ ಎಲ್ಲ ಅಂಶಗಳನ್ನೂ ಪುಸ್ತಕದಲ್ಲಿ ವಿವರಿಸಲಾಗಿದೆ ಎಂದರು.

ಆಗಿನ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ತಂದವರು ಎನ್ನುವುದು ಸತ್ಯ. ಅದಕ್ಕೆ ಅಡಿಪಾಯ ಹಾಕಿದವರು ನೆಹರು ಎನ್ನುವುದೂ ಸತ್ಯ. ಇನ್ನು ಎಡ್ವಿನಾ ಬ್ರಿಟಿಷರ ಗೂಢಚಾರಿಯಾಗಿ ನೆಹರುವನ್ನು ತನ್ನ ತೆಕ್ಕೆಗೆ ಹೇಗೆ ಹಾಕಿಕೊಂಡಳು ಎನ್ನುವ ನಿಜವನ್ನು ಎಲ್ಲಿಯೂ ಹೇಳಲಾಗಿಲ್ಲ. ವಿಯೆಟ್ನಾಂ ನಿಜವಾದ ಸ್ವಾತಂತ್ರ್ಯ ಪಡೆದ ರೀತಿ ನಾವು ಸಹ ಎಂದೋ ಪಡೆಯುತ್ತಿದ್ದೆವು. ಆದರೆ, ನಮ್ಮಲ್ಲಿನ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅದನ್ನು ಕೈಗೂಡಲು ಬಿಡಲಿಲ್ಲ ಎನ್ನುವುದು ದುರಂತ ಎಂದು ಹರೀಶ್‌ ಹೇಳಿದರು.

ಓದುವ ಧೈರ್ಯವಿದ್ದವರಿಗೆ ಮಾತ್ರ ಈ ಪುಸ್ತಕ

ಈ ಪುಸ್ತಕ ಓದುವ ಧೈರ್ಯವಿದ್ದವರಿಗೆ ಮಾತ್ರ. ಇದರಲ್ಲಿ ಪೂರ್ತಿ ಸತ್ಯವನ್ನು ಹೇಳಲಾಗಿದೆ. ಗಾಂಧೀಜಿಯವರ ಬಗ್ಗೆ ಪೂರ್ತಿಯಾಗಿ ಸತ್ಯ ಹೇಳಲಾಗಿದೆ. ಇಷ್ಟು ದಿನ ಕೇವಲ ಅರ್ಧ ಸತ್ಯ ಹೇಳಲಾಗಿತ್ತು. ನಮ್ಮ ಇತಿಹಾಸದಲ್ಲಿ ನಳಂದದ ಬಗ್ಗೆ ಸಾಕಷ್ಟು ಸುಳ್ಳು ಇದೆ. ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಬೇಕು ಎಂದಾಗ ರಾಜೇಂದ್ರ ಪ್ರಸಾದ್ ತಡೆದಿದ್ದರು. ಪೊಲೀಸ್, ಮಿಲಿಟರಿಯನ್ನು ಹೆಚ್ಚಿಸದಿರಲು ಪಟೇಲ್ ಕಾರಣವಾಗಿದ್ದರು. ನಾನು ಎನ್ನುವ ಪರಿಧಿಯನ್ನು ಕುಟುಂಬಕ್ಕೆ ಸೀಮಿತ ಮಾಡಿಕೊಂಡಿರುವುದು ಇಷ್ಟು ದಿನದ ಎಲ್ಲ ಅವಾಂತರಕ್ಕೆ ಕಾರಣವಾಗಿದೆ. ಬ್ರಿಟಿಷರು ಇತಿಹಾಸವನ್ನು ಮೊಘಲರಿಂದ ತೆಗೆದುಕೊಂಡರು. ವಕ್ಫ್ ಮಂಡಳಿ ಯವುದೇ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಎಂದು ಹಲವರಿಗೆ ತಿಳಿದಿಲ್ಲ. ಇದು ದೊಡ್ಡ ದುರಂತವಾಗಿದೆ ಎಂದು ಹರೀಶ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ನಿಜ ಇತಿಹಾಸದೊಂದಿಗೆ ಮುಖಾಮುಖಿ ಕೃತಿ ಬಿಡುಗಡೆ ಸಮಾರಂಭದ ವಿಡಿಯೊ ಇಲ್ಲಿದೆ

ಇದನ್ನೂ ಓದಿ: World’s Greatest Places: ಟೈಮ್ಸ್​ನ ವಿಶ್ವ ಶ್ರೇಷ್ಠ ಸ್ಥಳಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ 2 ಪ್ರದೇಶಗಳು; ಯಾವವು? ಯಾಕೆ?

ಪಂಪ ಪ್ರಶಸ್ತಿ ಪುರಸ್ಕೃತ ಡಾ ಎಸ್. ಆರ್. ರಾಮಸ್ವಾಮಿ ಮಾತನಾಡಿ, ಇಂದು ಲೋಕಾರ್ಪಣೆಯಾದ ಪುಸ್ತಕ ಒಂದು ಒಳ್ಳೆಯ ಕೃತಿಯಾಗಿದೆ. ವಿಷಯ ಶ್ರೀಮಂತಿಕೆಯಿಂದ ಕೂಡಿದ ಪುಸ್ತಕ ಇದಾಗಿದೆ. ಇದು ಕೇವಲ ಅಂಕಣ ಬರಹದ ಪುಸ್ತಕ ಅಲ್ಲವೇ ಇಲ್ಲ. ಗಂಭೀರವಾದ, ಚಿರಕಾಲದ ಬರಹಕ್ಕೆ 40 ವರ್ಷದ ತಪಸ್ಸು ಇದೆ. ವಿಷಯದ ಹದ, ನೇರವಾದ ಮಾತನ್ನು ಇದರಲ್ಲಿ ಕಾಣಬಹುದು ಎಂದು ತಿಳಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯೆ ಎಸ್. ಆರ್. ಲೀಲಾ ಮತ್ತಿತರ ಗಣ್ಯರು ಹಾಜರಿದ್ದರು.

Exit mobile version