ಶಿವಮೊಗ್ಗ: ನನ್ನ ಮಗನಿಗೆ ರೀಲ್ಸ್ ಮಾಡುವ ಹುಚ್ಚು ಇರಲಿಲ್ಲ. ಅವನು ಅಷ್ಟು ದೂರ ನಡೆಯುವವನೂ ಅಲ್ಲ. ಜತೆಗೆ ಹೋದ ಗೆಳೆಯ ಈ ಹಿಂದೆ ಆ ಜಾಗ ನೋಡಿರಬೇಕು. ಹೀಗಾಗಿ ಆತ ನನ್ನ ಮಗನನ್ನು ಕರೆದೊಯ್ದಿರಬೇಕು ಎಂದು ಅರಶಿನಿಗುಂಡಿ ಫಾಲ್ಸ್‌ನಲ್ಲಿ ಬಿದ್ದು ಮೃತಪಟ್ಟ ಭದ್ರಾವತಿಯ (Bhadravathi News) ಯುವಕ ಶರತ್ ತಂದೆ ಮುನಿಸ್ವಾಮಿ ಹೇಳಿದ್ದಾರೆ.
ಭದ್ರಾವತಿಯಲ್ಲಿ ಮಾತನಾಡಿರುವ ಮುನಿಸ್ವಾಮಿ ಅವರು, ಆ ಸ್ಥಳ ನೋಡಿದರೆ ಭಯವಾಗುತ್ತದೆ. ಅಂತಹ ಸ್ಥಳಕ್ಕೆ ನನ್ನ ಮಗ ಹೋಗಿದ್ದಾನೆ. ಅಂತಹ ಜಾಗಕ್ಕೆ ಯಾರೂ ಹೋಗದಂತೆ ಸರ್ಕಾರ ಬಂದೋಬಸ್ತ್ ಮಾಡಬೇಕು. ಪಾಲಕರು ತಮ್ಮ ಮಕ್ಕಳನ್ನು ಅಂತಹ ಜಾಗಕ್ಕೆ ಕಳುಹಿಸಬಾರದು. ಮಕ್ಕಳೇನಾದರೂ ಹಠ ಮಾಡಿದರೆ ಅವರನ್ನು ಹೊಡೆದು ಕೂರಿಸಬೇಕು. ಅಪಾಯದ ಸ್ಥಳಕ್ಕೆ ಯಾರೂ ಹೋಗಬೇಡಿ, ಫೋಟೊ ತೆಗೆಯಬೇಡಿ ಎಂದು ಮನವಿ ಮಾಡಿದ್ದಾರೆ.
ಅಪಯಾಕಾರಿ ಜಾಗದ ಹತ್ತಿರಕ್ಕೆ ಹೋಗಬಾರದು. ದೂರದಿಂದಲೇ ನೋಡಬೇಕು ಎಂದು ಭಾವುಕರಾದ ಶರತ್ ತಂದೆ, ಬೆಂಗಳೂರಿನಿಂದ ಬಂದ ಗೆಳೆಯ ಇಲ್ಲೇ ಸುತ್ತಾಡಿ ಬರೋಣ ಎಂದು ಮಗನನ್ನು ಕರೆದಿದ್ದ. ಹೀಗಾಗಿ ಶರತ್ ಹೊರಗೆ ಹೋಗಿದ್ದ. ಮಗನ ಸ್ನೇಹಿತನನ್ನು ಈವರೆಗೆ ಕಂಡಿಲ್ಲ, ಯಾರೋ ಗುರು ಅಂತೆ. ಗೆಳೆಯ ಗುರು ಜತೆ ಸುತ್ತಾಡಲು ಹೋಗುತ್ತಿದ್ದೇನೆ ಎಂದು ಇನ್ನಾರಿಗೂ ಶರತ್ ಮೆಸೇಜ್ ಮಾಡಿದ್ದನಂತೆ. ಅವರು ಯಾರು ಎಂದು ಕೇಳಿದಾಗ ಗೆಳೆಯನ ಜತೆ ಫೋಟೊ ತೆಗೆದು ಅವರಿಗೆ ಕಳುಹಿಸಿದ್ದ ಎಂದು ತಿಳಿಸಿದರು.
ಗೆಳೆಯನ ಜತೆ ಕೊಲ್ಲೂರಿಗೆ ಹೋಗುತ್ತಿದ್ದೇನೆ ಎಂದು ಮತ್ತೊಬ್ಬ ಗೆಳೆಯನಿಗೆ ಶರತ್ ಹೇಳಿದ್ದಾನೆ. ಮಗ ದೇವಸ್ಥಾನಕ್ಕೆ ಹೋಗುತ್ತಿದ್ದಾನೆ ಎಂದು ಆಗಲೇ ನಮಗೆ ಗೊತ್ತಾಗಿದ್ದು. ನಮಗೆ ದೇವಸ್ಥಾನಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿರಲಿಲ್ಲ, ಎಂದಿನಂತೆ ಸ್ನಾನ ಮಾಡಿ ತಯಾರಾಗಿ ಮನೆಯಿಂದ ಹೊರಟಿದ್ದವನು ಮತ್ತೆ ಬರಲೇ ಇಲ್ಲ ಎಂದು ಶರತ್ ತಂದೆ ಮುನಿಸ್ವಾಮಿ ಹೇಳಿದ್ದಾರೆ.
ಇದನ್ನೂ ಓದಿ | Contaminated Water : ಚಿತ್ರದುರ್ಗದ ಕಲುಷಿತ ನೀರ ಹನಿ ಹಿಂದಿದ್ಯಾ ಲವ್ ಕಹಾನಿ?; ಬಲಿಯಾಯ್ತು 2ನೇ ಜೀವ