Site icon Vistara News

Soraba News: ಪುರಸಭೆ ಸುಪರ್ದಿಯಲ್ಲಿದ್ದ ಹಳೇ ನಾಟಗಳ ಅಕ್ರಮ ಸಾಗಾಟಕ್ಕೆ ಯತ್ನ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ

old natas municipality soraba police station

#image_title

ಸೊರಬ: ಪುರಸಭೆಯ ಐಡಿಎಸ್‍ಎಂಟಿ ವಾಣಿಜ್ಯ ಮಳಿಗೆ ಸೆಲ್ಲಾರ್‌ನಲ್ಲಿ ಸಂಗ್ರಹಿಸಿದ್ದ ಹಳೇ ನಾಟ ಅಕ್ರಮ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪುರಸಭೆ ಮತ್ತು ಕಂದಾಯ ಇಲಾಖೆಯ ವಾಕ್‌ ಸಮರಕ್ಕೆ ಕಾರಣವಾಗಿದ್ದು, ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಪುರಸಭೆಯ ವಶದಲ್ಲಿದ್ದ ಹಳೇ ನಾಟಗಳನ್ನು ಹಾಡಹಗಲೇ ಅಕ್ರಮವಾಗಿ ಸಾಗಾಟ ಮಾಡಲು ಸಿದ್ಧವಾಗಿದ್ದ ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು ತನಿಖೆಯನ್ನು ಚುರುಕುಗೊಳಿಸಿದ್ದರು.

ಸರಣಿ ಪ್ರತಿಭಟನೆಗಳು

ಹಳೇ ನಾಟಗಳ ಅಕ್ರಮ ಸಾಗಾಟದ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸೋಮವಾರ (ಫೆ.೨೦) ಸರಣಿ ಪ್ರತಿಭಟನೆಗಳು ನಡೆದಿವೆ. ರೈತ ಸಂಘದಿಂದ ತಾಲೂಕು ಕಚೇರಿ ಹಾಗೂ ಅರಣ್ಯಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆದರೆ, ಪರಿಸರ ಸಮೃದ್ಧಿ ಸಂಘಟನೆ ಜಿಲ್ಲಾಧ್ಯಕ್ಷ ಶಿವಯೋಗಿಸ್ವಾಮಿ ಸುತ್ತೂರು ಮಠ ನೇತೃತ್ವದಲ್ಲಿ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆಯನ್ನು ನಡೆಸಲಾಯಿತು.

ಇದನ್ನೂ ಓದಿ: Aliya Bhat: ಆಲಿಯಾ ಭಟ್‌ ಖಾಸಗಿತನಕ್ಕೆ ಧಕ್ಕೆ: ಪೊಲೀಸರಿಗೆ ದೂರು ಸಲ್ಲಿಸಿದ ನಟಿ, ಬಿಟೌನ್‌ ಮಂದಿ ಫುಲ್‌ ಗರಂ!

ಪರಿಸರ ಸಮೃದ್ಧಿ ಸಂಘಟನೆ ವತಿಯಿಂದ ನಡೆದ ಪ್ರತಿಭಟನೆ.

ರೈತ ಸಂಘದ ಮುಖಂಡರು ಪ್ರತಿಭಟನೆಯ ನಂತರ ಪುರಸಭೆಗೆ ತೆರಳಿ ಮುಖ್ಯಾಧಿಕಾರಿ ಅವರನ್ನು ತೀವ್ರ ತರಾಟೆಗೆ ತಗೆದುಕೊಂಡರು. ಸಾರ್ವಜನಿಕ ಸ್ವತ್ತನ್ನು ಕಾಯುವ ಬದಲು ಅಕ್ರಮ ಸಾಗಾಟಕ್ಕೆ ಅವಕಾಶ ಒದಗಿಸಿದ್ದೀರಿ ಎಂದು ಆರೋಪಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ಪುರಸಭೆಯ ಮುಖ್ಯಾಧಿಕಾರಿ, ತಹಸೀಲ್ದಾರ್ ಕಚೇರಿಯ ಆರ್‌ಆರ್‌ಟಿ ಶಿರಸ್ತೇದಾರ್ ನಾಗರಾಜ್ ಅವರ ಸೂಚನೆ ಮೇರೆಗೆ ಮುನ್ನ ಎಂಬುವವರಿಗೆ ವಾಣಿಜ್ಯ ಸಂಕೀರ್ಣದ ಸೆಲ್ಲಾರ್‌ನ ಬೀಗ ನೀಡಲಾಯಿತು. ಈ ಕುರಿತು ತಾಲೂಕು ಕಚೇರಿ ಮತ್ತು ಉಪವಿಭಾಗಾಧಿಕಾರಿಗಳಿಗೆ ವರದಿ ನೀಡಲಾಗಿದೆ. ಜತೆಗೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ತಿಳಿಸಿದರು. ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಟಿ.ಎಸ್. ಗಿರೀಶ್ ಸ್ಥಳೀಯ ಪೊಲೀಸ್ ಠಾಣೆಗೆ ಸಲ್ಲಿಸಿದ ದೂರಿನಲ್ಲಿಯೂ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Shobha Karandlaje: ಸಿದ್ದರಾಮಯ್ಯರನ್ನು ಹೊಡೆದುಹಾಕಿ ಎಂಬ ಅಶ್ವತ್ಥನಾರಾಯಣ ಹೇಳಿಕೆ ನೂರಕ್ಕೆ ನೂರು ತಪ್ಪು: ಶೋಭಾ ಕರಂದ್ಲಾಜೆ

ಅಧಿಕಾರಿಗಳ ಸಭೆ

ಪೊಲೀಸ್ ಠಾಣೆಗೆ ದೂರು ಸಲ್ಲಿಕೆಯಾಗುತ್ತಿದಂತೆ ಪಟ್ಟಣದ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಸಮ್ಮುಖದಲ್ಲಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್, ಪುರಸಭೆ ಮುಖ್ಯಾಧಿಕಾರಿ, ಶಿರಸ್ತೇದಾರ್ ನಡುವೆ ಸೋಮವಾರ (ಫೆ.೨೦) ಸಭೆ ನಡೆದು ವಿಚಾರಣೆಗಳು ನಡೆದಿದೆ ಎಂದು ತಿಳಿದು ಬಂದಿದೆ. ಈ ವೇಳೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಶಿರಸ್ತೇದಾರರು ಹಾರಿಕೆ ಉತ್ತರ ನೀಡುತ್ತಿರುವುದಕ್ಕೆ ಪುರಸಭೆಯ ಮುಖ್ಯಾಧಿಕಾರಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ತಹಸೀಲ್ದಾರ್ ಸಮ್ಮುಖದಲ್ಲಿಯೇ ಅಧಿಕಾರಿಗಳಿಬ್ಬರೂ ಏರುಧ್ವನಿಯಲ್ಲಿ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದಾಗ ಪಿಎಸ್‍ಐ ಮತ್ತು ತಹಸೀಲ್ದಾರ್ ಅವರು ಮಧ್ಯಪ್ರವೇಶಿಸಿ, ಚರ್ಚೆಯನ್ನು ತಿಳಿಗೊಳಿಸಿದರು ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಸಭೆಯಲ್ಲಿ ಯಾವುದೇ ತೀರ್ಮಾನವಾಗದ ಹಿನ್ನೆಲೆಯಲ್ಲಿ ಪುರಸಭೆ ಮುಖ್ಯಾಧಿಕಾರಿಗಳು ನೀಡಿದ ದೂರಿನನ್ವಯ ತನಿಖೆ ನಡೆಯುವ ಸಾಧ್ಯತೆ ಕಂಡು ಬರುತ್ತಿದೆ.

ರೈತ ಸಂಘದಿಂದ ಅರಣ್ಯಾಧಿಕಾರಿ ಕಚೇರಿ ಮುಂಭಾಗದಲ್ಲಿ ನಡೆದ ಪ್ರತಿಭಟನೆ.

ಇದನ್ನೂ ಓದಿ: S Jaishankar: ಕಾರ್ಯದರ್ಶಿ ಸ್ಥಾನದಿಂದ ನನ್ನ ತಂದೆಯನ್ನು ಕಿತ್ತು ಹಾಕಿದ್ದ ಇಂದಿರಾ ಗಾಂಧಿ: ಸಚಿವ ಜೈಶಂಕರ್

ಇದೀಗ ಪ್ರಕರಣವು ಪೊಲೀಸ್ ಠಾಣೆಯ ಹಂತದಲ್ಲಿದ್ದು, ಇಲಾಖೆಯ ಮೇಲೆ ಇಲಾಖೆಗಳು ಆರೋಪವನ್ನು ಹೊರಿಸುತ್ತಿದ್ದು, ಕಂದಾಯ, ಪುರಸಭೆ, ಅರಣ್ಯ ಇಲಾಖೆಯ ನಡುವೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಿವೆ. ಪೊಲೀಸ್ ಇಲಾಖೆಯ ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ. ಹಳೇ ತಾಲೂಕು ಕಚೇರಿ ಮತ್ತು ಹಳೇ ಪೊಲೀಸ್ ವಸತಿ ಗೃಹಗಳ ಹಳೇ ನಾಟಗಳ ಕುರಿತು ಸಹ ಬೆಳಕು ಚೆಲ್ಲಬೇಕಿದೆ ಎಂಬ ಆಗ್ರಹ ಕೇಳಿಬಂದಿದೆ.

Exit mobile version