Site icon Vistara News

Soraba News: ಬ್ರಾಹ್ಮಣರು ಸಂಘಟನಾತ್ಮಕವಾಗಿ ಒಂದಾಗಬೇಕು: ಅಶೋಕ್ ಹಾರನಹಳ್ಳಿ

Ashok Haranahalli soraba

#image_title

ಸೊರಬ: “ಬ್ರಾಹ್ಮಣರಾದ ನಾವು ಸ್ವಭಾವದಲ್ಲಿ ಸಾತ್ವಿಕ ಗುಣವನ್ನು ಹೊಂದಿದವರಾಗಿದ್ದು, ಯಾರಿಗೂ ತೊಂದರೆ ಕೊಡದೆ ನಮಗೆ ಯಾರಾದರೂ ತೊಂದರೆ ಕೊಟ್ಟಲ್ಲಿ ಭಗವಂತ ನೋಡಿಕೊಳ್ಳುತ್ತಾನೆ ಎಂಬ ಮನೋಭಾವ ಹೊಂದಿದವರಾಗಿದ್ದೇವೆ” ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜದ (Brahmin Society) ಅಧ್ಯಕ್ಷ ಅಶೋಕ್ ಹಾರನಹಳ್ಳಿ ತಿಳಿಸಿದರು.

ಪಟ್ಟಣದ ಶ್ರೀ ಗಿರಿಜಾ ಶಂಕರ ಸಭಾ ಭವನದಲ್ಲಿ ತಾಲೂಕು ಬ್ರಾಹ್ಮಣ ಸಮಾಜವು ಭಾನುವಾರ (ಫೆ.೨೬) ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಬ್ರಾಹ್ಮಣ ಸಮಾವೇಶ ಉದ್ಘಾಟಿಸಿ ಮಾತನಾಡಿ, “ನಮ್ಮಲ್ಲಿಯೂ ಇಂದಿನ ದಿನಗಳಲ್ಲಿ ಎಚ್ಚರಿಕೆಯ ಗಾಳಿ ಬೀಸುತ್ತಿದ್ದು, ಸಂಘಟನಾತ್ಮಕವಾಗಿ ಒಂದಾಗುವ ಪ್ರಯತ್ನದಲ್ಲಿದ್ದೇವೆ” ಎಂದರು.

ಇದನ್ನೂ ಓದಿ: Kabzaa Movie: ʻಕಬ್ಜʼ ಚಿತ್ರದ ಧ್ವನಿ ಸುರುಳಿ ಅದ್ಧೂರಿ ಬಿಡುಗಡೆ: ಸದ್ದು ಮಾಡುತ್ತಿದೆ ‘ಚುಂ ಚುಂ ಚಳಿʼ ಸಾಂಗ್‌!

“ಇಂದು ಎಲ್ಲ ಸಮುದಾಯಗಳ ಸಮಸ್ಯೆಗೂ ಬ್ರಾಹ್ಮಣರೇ ಜವಾಬ್ದಾರರು ಎಂಬ ಹಣೆಪಟ್ಟಿ ಕಟ್ಟುವ ಕಾರ್ಯ ನಡೆಯುತ್ತಿದೆ. ಇವೆಲ್ಲದಕ್ಕೂ ಕೊನೆಯಾಗಬೇಕಾಗಿದೆ. ಸಂವಿಧಾನಾತ್ಮಕವಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ನೀಡಬೇಕೆಂದು ಇದ್ದರೂ ಅದನ್ನು ರಾಜ್ಯ ಸರ್ಕಾರ ಕೊಡುವಲ್ಲಿ ಇಂದಿಗೂ ಯಶಸ್ವಿಯಾಗಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ವಿಫಲವಾಗಿದ್ದು, ನ್ಯಾಯಾಲಯದ ಮೊರೆ ಹೊಗುವುದೊಂದೇ ಇದಕ್ಕೆ ಪರಿಹಾರವಾಗಿದೆ” ಎಂದು ಹೇಳಿದರು.

ನಿರ್ಣಾಯಕ ಸ್ಥಾನಗಳಲ್ಲಿ ಬ್ರಾಹ್ಮಣರಿಗೆ ಟಿಕೆಟ್ ಕೊಡಿ

“ರಾಜ್ಯವ್ಯಾಪಿ ಜನಸಂಖ್ಯೆಯನ್ನು ಹೊಂದಿರುವ ಬ್ರಾಹ್ಮಣರು ಅನೇಕ ಭಾಗಗಳಲ್ಲಿ ನಿರ್ಣಾಯಕರಾಗಿದ್ದೇವೆ. ಅವುಗಳಲ್ಲಿ ವಿಶೇಷವಾಗಿ ಶಿವಮೊಗ್ಗ, ಶಿರಸಿ, ಬೆಂಗಳೂರಿನ ಮಲ್ಲೇಶ್ವರ, ಜಯನಗರ, ಬಸವನಗುಡಿ ಸೇರಿದಂತೆ ಹಲವು ಭಾಗಗಳಲ್ಲಿ ನಮ್ಮ ಮತ ನಿರ್ಣಾಯಕ. ಬ್ರಾಹ್ಮಣರು ಯಾವತ್ತೂ ಹಿಂದುತ್ವದ ಪರವಾಗಿರುತ್ತಾರೆ. ಜಾತಿ ಭೇದವನ್ನು ಪರಿಗಣಿಸದೆ ಮತ ಚಲಾಯಿಸುತ್ತಾರೆಂಬ ಕಾರಣದಿಂದ ನಾವು ಟಿಕೆಟ್‌ನಿಂದ ವಂಚಿತರಾಗಿದ್ದು, ನಿರ್ಣಾಯಕವಾದ ಕ್ಷೇತ್ರಗಳಲ್ಲಿಯೂ ನಮಗೆ ನೀಡಬೇಕೆಂದು ಈಗಾಗಲೇ ನಾನು ಒತ್ತಾಯಿಸಿದ್ದು, ನಿಮ್ಮ ತಾಲೂಕು ಮತ್ತು ಹಾವೇರಿ ಜಿಲ್ಲಾ ಬ್ರಾಹ್ಮಣರ ಒತ್ತಯವೂ ಇದಾಗಿದೆ” ಎಂದರು.

ಇದನ್ನೂ ಓದಿ: Shivamogga Airport: ಮಲೆನಾಡಿಗೆ ಪ್ರದೇಶಕ್ಕೆ ಯಡಿಯೂರಪ್ಪ ಒಂದು ಕಾಣಿಕೆ: ಸಿಎಂ ಬಸವರಾಜ ಬೊಮ್ಮಾಯಿ

“ಬ್ರಾಹ್ಮಣರು ಎಲ್ಲರಿಗೂ ಒಳ್ಳೆಯದಾಗಲಿ ಎಂದು ಬಯಸುತ್ತಾರೆ. ಆದರೆ ಇಂದು ಎಲ್ಲರೂ ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ. ನಮ್ಮ ಸಮಸ್ಯೆಗಳ ಪರಿಹಾರಕ್ಕೆ ಇಂತಹ ಸಮ್ಮೇಳನಗಳು ಅಗತ್ಯವಾಗಿದೆ. ನಮ್ಮ ಮುಂದಿನ ಸಮಾಜ ಬ್ರಾಹ್ಮಣ ವೈದಿಕ ಸಂಪ್ರದಾಯವನ್ನು ಉಳಿಸಿ, ಹಿಂದುತ್ವವನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು” ಎಂದು ಕರೆ ನೀಡಿದರು.

“ಭಾರತೀಯ ಸನಾತನ ಶಿಕ್ಷಣಕ್ಕೆ ಒತ್ತು ಕೊಟ್ಟು ವೇದ ಶಿಕ್ಷಣದೊಂದಿಗೆ ಲೌಕಿಕ ಶಿಕ್ಷಣಕ್ಕೂ ನಾವು ಪ್ರಾಮುಖ್ಯತೆ ಕೊಡಬೇಕು. ಇಂದು ಸರ್ಕಾರಿ ಸೇವೆಯಲ್ಲಿ ನಮಗೆ ಹೆಚ್ಚಿನ ಅನುಕೂಲತೆಗಳು ಇಲ್ಲವಾಗಿದೆ. ಇತ್ತೀಚೆಗೆ ನಾವು ಎಸ್.ಎಸ್.ಎಲ್.ಸಿ.ಯಲ್ಲಿ ಶೇ. 98ಕ್ಕಿಂತಲೂ ಹೆಚ್ಚಿನ ಅಂಕವನ್ನು ಹೊಂದಿದವರಿಗೆ ಪ್ರತಿಭಾ ಪುರಸ್ಕಾರ ನೀಡಿದ್ದು, ಅವರು 800ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ” ಎಂದರು.

ಇದನ್ನೂ ಓದಿ: Manish Sisodia Arrested: ದಿಲ್ಲಿ ಡಿಸಿಎಂ ಬಂಧನ ಬೆನ್ನಲ್ಲೇ ಆಪ್‌ನಿಂದ ಬೃಹತ್ ಪ್ರತಿಭಟನೆಗೆ ಪ್ಲ್ಯಾನ್, ದಿಲ್ಲಿಯಲ್ಲಿ ಭಾರಿ ಬಂದೋಬಸ್ತ್

ಸಮಾಜ ಸಂಘಟನೆಯ ಉದ್ದೇಶಗಳನ್ನು, ಸಂಘಟನೆಯ ಔಚಿತ್ಯತೆಯ ಕುರಿತು ಪತ್ರಕರ್ತೆ ಶ್ರೀಲಕ್ಷ್ಮೀ ರಾಜಕುಮಾರ್ ದಿಕ್ಸೂಚಿ ಭಾಷಣ ಮಾಡಿದರು. ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ನಟರಾಜ್ ಭಾಗವತ್, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಐ.ಎಸ್.ರಾಘವೇಂದ್ರ ಭಟ್, ಶಶಿಭೂಷಣ ಹೆಗಡೆ ಮಾತನಾಡಿದರು.

ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ದಿವಾಕರ ಭಟ್ ಭಾವೆ ಅಧ್ಯಕ್ಷತೆ ವಹಿಸಿದ್ದರು. ಸಮಾಜದ ಸಾಧಕರನ್ನು ಮತ್ತು ಪ್ರತಿಭಾನ್ವಿತರನ್ನು ಸನ್ಮಾನಿಸಲಾಯಿತು. ಸಮಾಜ ಪ್ರಮುಖರಾದ ಎಚ್.ಎಸ್.ಮಂಜಪ್ಪ, ಕಟ್ಟಿನಕೆರೆ ಸೀತಾರಾಮಯ್ಯ, ಪ್ರಭಾ ಹೊಂಕಣ, ಸುರೇಶ್ ನಾಡಿಗೇರ್, ವಾಮನ ಭಟ್ ಭಾವೆ, ಮಹೇಶ ಗೋಖಲೆ, ಎಚ್.ಎಂ. ಪ್ರಶಾಂತ್, ಕಾಶಿನಾಥ ರಾವ್ ಮತ್ತಿತರರಿದ್ದರು.

ಇದನ್ನೂ ಓದಿ: DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಅರ್ಜಿ ಸಲ್ಲಿಸಲು ನಾಳೆ ಕೊನೆಯ ದಿನ

Exit mobile version