ಸೊರಬ: ಅಸಮರ್ಪಕ ವಿದ್ಯುತ್ ಪೂರೈಕೆ ವಿರುದ್ಧ ಕಾಂಗ್ರೆಸ್ ಪಕ್ಷದ ವತಿಯಿಂದ (Protest by Congress) ಮಂಗಳವಾರ (ಫೆ.೨೧) ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲಾಯಿತು.
ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಬಿ. ಅಣ್ಣಪ್ಪ ಹಾಲಘಟ್ಟ ಮಾತನಾಡಿ, “ಎಸ್. ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ರೈತರ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ನೀಡಿದರು. ಆದರೆ, ಪ್ರಸ್ತುತ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಲೋಡ್ ಶೆಡ್ಡಿಂಗ್ ಮೂಲಕ ರೈತರ ಬದುಕಿನ ಜೊತೆಗೆ ಚೆಲ್ಲಾಟವಾಡುತ್ತಿದೆ. ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ತೋಟ, ಗದ್ದೆಗಳಲ್ಲಿ ಬೆಳೆದ ಬೆಳೆಗಳಿಗೆ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ಬಿಸಿಲ ಪ್ರಮಾಣ ಹೆಚ್ಚಾಗಿರುವುದರಿಂದ ಬೆಳೆಗಳು ಒಣಗುತ್ತಿವೆ” ಎಂದು ಆರೋಪಿಸಿದರು.
ಇದನ್ನೂ ಓದಿ: Adani group: ಅದಾನಿ ಕಂಪನಿಗಳ ಸಾಲದ ರೇಟಿಂಗ್ ಮಾಹಿತಿ ಕೇಳಿದ ಸೆಬಿ
ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಜಿಪಂ ಮಾಜಿ ಸದಸ್ಯ ತಬಲಿ ಬಂಗಾರಪ್ಪ ಮಾತನಾಡಿ, “ಸರ್ಕಾರ ಕುಂಭಕರ್ಣ ನಿದ್ರೆಯಲ್ಲಿದ್ದು, ನಿರಂತರ ಜ್ಯೋತಿ ಯೋಜನೆಯಡಿ ಕೋಟ್ಯಂತರ ರೂ., ಖರ್ಚು ಮಾಡಿದ್ದರೂ ಮನೆ ಬಳಕೆಗೆ ವಿದ್ಯುತ್ ಪೂರೈಕೆ ಮರೀಚಿಕೆಯಾಗಿದೆ. ಪರೀಕ್ಷೆ ಸಮಯವಾಗಿರುವುದರಿಂದ ವಿದ್ಯಾರ್ಥಿಗಳು ಸಹ ಪರಿತಪಿಸುವಂತಾಗಿದೆ. ಈ ಬಗ್ಗೆ ಸರ್ಕಾರ ಕಿಂಚಿತ್ತೂ ಗಮನ ನೀಡುತ್ತಿಲ್ಲ. ಅಧಿಕಾರಕ್ಕೆ ಬರುವ ಮುನ್ನ ಬಿಜೆಪಿ ನೀಡಿದ ಭರವಸೆಗಳೆಲ್ಲೆವೂ ಹುಸಿಯಾಗಿದೆ. ಅಸಮರ್ಪಕ ವಿದ್ಯುತ್ ಲೋಡ್ ಶೆಡ್ಡಿಂಗ್ ಅನ್ನು ಕೂಡಲೇ ಕೈ ಬಿಡಬೇಕು. ಕೃಷಿ ಪಂಪ್ ಸೆಟ್ ಗಳಿಗೆ ನಿರಂತರ 10 ತಾಸು ಸಮರ್ಪಕವಾಗಿ ಹಗಲು ವೇಳೆ ತ್ರೀ ಫೇಸ್ ವಿದ್ಯುತ್ ನೀಡಬೇಕು. ಸಕಾಲಕ್ಕೆ ರೈತರಿಗೆ ಟ್ರಾನ್ಸ್ ಫಾರಂ ಒದಗಿಸಬೇಕು” ಎಂದು ಆಗ್ರಹಿಸಿದರು.
ಇದನ್ನೂ ಓದಿ: Subi Suresh: ಮಲಯಾಳಂ ನಟಿ, ನಿರೂಪಕಿ ಸುಬಿ ಸುರೇಶ್ ನಿಧನ
ಇದಕ್ಕೂ ಮೊದಲು ಪಟ್ಟಣದ ಶ್ರೀ ರಂಗನಾಥ ದೇವಸ್ಥಾನದ ಮುಂಭಾಗದಿಂದ ಮುಖ್ಯರಸ್ತೆ ಮಾರ್ಗವಾಗಿ ಮೆಸ್ಕಾಂ ಉಪ ವಿಭಾಗೀಯ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ಮೆಸ್ಕಾಂ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಬ್ಲಾಕ್ ಅಧ್ಯಕ್ಷರಾದ ಸದಾನಂದ ಗೌಡ ಬಿಳಗಲಿ, ಶಿವಮೂರ್ತಿ ಮಂಡಗಳಲೆ, ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಜೋತಾಡಿ, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಕೆ.ಪಿ. ಪ್ರವೀಣ್ ಕುಮಾರ್, ಜಿಪಂ ಮಾಜಿ ಸದಸ್ಯ ಶಿವಲಿಂಗೇಗೌಡ, ಪ್ರಮುಖರಾದ ಎಚ್. ಗಣಪತಿ, ಎಂ.ಡಿ. ಶೇಖರ್, ಕಲ್ಲಪ್ಪ ಚಿತ್ರಟ್ಟೆಹಳ್ಳಿ, ಕೆ. ಮಂಜುನಾಥ್ ಹಳೇಸೊರಬ, ರವಿ ಬರಗಿ, ಅಶೋಕ್ ಬರದವಳ್ಳಿ, ಸಂಜೀವ ನೇರಲಗಿ, ಪರಮೇಶ್ ನೆಗವಾಡಿ, ನೆಹರು ಕೊಡಕಣಿ, ಸಂಜಯ್, ಸುರೇಶ್ ಬಿಳುವಾಣಿ, ನಾಗಪ್ಪ ಮಾಸ್ತರ್, ಶ್ರೀಕಾಂತ ಚಿಕ್ಕಶಕುನ, ರತ್ನಮ್ಮ, ಪ್ರಭು ಶಿಗ್ಗಾ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಇದನ್ನೂ ಓದಿ: Tejashwi Yadav: ನಟಿ ಜತೆ ಬ್ಯಾಡ್ಮಿಂಟನ್ ಆಡಿ ಕ್ರೀಡೆಯ ಮಹತ್ವ ಸಾರಿದ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್