ಸೊರಬ: ಗಣಿ ಧೂಳು, ಕಲ್ಲುಗಳ ಸಿಡಿತ ಮತ್ತು ಶಬ್ದ ಮಾಲಿನ್ಯದಿಂದ ಬದುಕೇ ದುಸ್ತರವಾಗಿದೆ. ಚುನಾವಣಾ ಕಾಲದಲ್ಲಿ ಮಾತ್ರ ರಾಜಕಾರಣಿಗಳಿಗೆ ಜನರು ನೆನಪಿಗೆ ಬರುತ್ತಾರೆ. ಮನವಿ ನೀಡಿದರೂ ಗ್ರಾಮಸ್ಥರ ಯೋಗಕ್ಷೇಮ ವಿಚಾರಿಸದ ತಾವು ಈಗೇಕೆ ಗ್ರಾಮದೊಳಗೆ ಕಾಲಿಟ್ಟಿದ್ದೀರಿ ಎಂದು ತಾಲೂಕಿನ ಬಸ್ತಿಕೊಪ್ಪ ಗ್ರಾಮದ ಮಹಿಳೆಯರು ಶಾಸಕ ಕುಮಾರ ಬಂಗಾರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಬಸ್ತಿಕೊಪ್ಪ ಗ್ರಾಮದಲ್ಲಿ ಸುಮಾರು ೭೫ ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲು ಗ್ರಾಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಗ್ರಾಮಸ್ಥರು ಮತ್ತು ಮಹಿಳೆಯರು ಕುಮಾರ ಬಂಗಾರಪ್ಪ ಅವರ ಎದುರು ಗ್ರಾಮದಲ್ಲಿ ನಡೆಯುತ್ತಿರುವ ಗಣಿಗಾರಿಕೆಯ ವಿರುದ್ಧ ಮುಗಿಬಿದ್ದರು.
ಪ್ರತಿನಿತ್ಯ ಬಂಡೆ ಸಿಡಿಸಲು ಬಳಸುವ ಸ್ಫೋಟಕ ಮತ್ತು ರಾಸಾಯನಿಕಗಳ ಹೊಗೆ ಮಕ್ಕಳ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರಿದೆ. ಕಲ್ಲು ಪುಡಿ ಧೂಳಿನಿಂದ ಗ್ರಾಮಸ್ಥರು ಕೆಮ್ಮು-ಅಸ್ತಮಾದಂತಹ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಸ್ರೀಯರಲ್ಲಿ ಗರ್ಭಪಾತ ಕಂಡು ಬಂದಿದೆ. ಸ್ಫೋಟಕದ ಸದ್ದಿಗೆ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಭಯಭೀತರಾಗಿರುವ ಗ್ರಾಮಸ್ಥರು ಮನೆಯಿಂದ ಹೊರಗೆ ಬಂದು ಜೀವನ ಸಾಗಿಸುವಂತಾಗಿದೆ, ಗಣಿ ಧೂಳಿನಿಂದ ಕೃಷಿಗೆ ಹಿನ್ನೆಡೆಯಾಗಿದೆ. ಅಲ್ಲದೇ ಶುದ್ಧ ಕುಡಿಯುವ ನೀರಿಗೂ ಹಾಹಾಕಾರ ಪಡುವಂತಾಗಿದೆ, ವಿಷಪೂರಿತ ಹಾವುಗಳು ಊರಿಗೆ ಬರುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ | Modi In Karnataka : 1994ರ ಚುನಾವಣೆಯಲ್ಲಿ ಕರ್ನಾಟಕ ಪ್ರವಾಸವನ್ನು ಸ್ಮರಿಸಿದ ಮೋದಿ; ಬಂಜಾರ ಮಹಿಳೆಗೆ ತಲೆಬಾಗಿದ ಪ್ರಧಾನಿ
ಪ್ರತಿನಿತ್ಯ ಸುಮಾರು ೨೦೦ ಲಾರಿಗಳು ಗಣಿಗಾರಿಕೆಗಾಗಿ ಗ್ರಾಮದ ಮಧ್ಯೆ ಸಂಚರಿಸುವುದರಿಂದ ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ರಸ್ತೆಗಳು ಹಾಳಾಗಿ ಗುಂಡಿಗಳು ಬೀಳುತ್ತಿವೆ. ಮಳೆಗಾಲದಲ್ಲಿ ನಡೆದಾಡುವುದೇ ದುಸ್ತರವಾಗುತ್ತದೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಯಾವುದೇ ರೀತಿ ಸ್ಪಂದಿಸದೇ ಗಣಿಗಾರಿಕೆಯ ವಿರುದ್ಧ ಕ್ರಮ ತೆಗೆದುಕೊಳ್ಳದ ಶಾಸಕರು ಮೊದಲು ಗ್ರಾಮದಲ್ಲಿ ಗಣಿಗಾರಿಕೆಯಿಂದ ಸಂಭವಿಸಿರುವ ದುರಂತಗಳಿಗೆ ಮೊದಲು ಉತ್ತರಿಸಿ ಎಂದು ಮಹಿಳೆಯರು ಪಟ್ಟುಹಿಡಿದರು.
ಕಳೆದ ಒಂದು ವರ್ಷದಿಂದ ಹಲವಾರು ಬಾರಿ ಶಾಸಕರ ಮನೆಗೆ ತೆರಳಿ ಗಣಿಗಾರಿಕೆಯಿಂದ ಗ್ರಾಮಕ್ಕೆ ಮತ್ತು ಗ್ರಾಮಸ್ಥರಿಗಾಗುತ್ತಿರುವ ತೊಂದರೆಯನ್ನು ಗಮನಹರಿಸಬೇಕು ಮತ್ತು ಗಣಿಗಾರಿಕೆಯನ್ನು ಸ್ಥಗಿತಗೊಳಿಸುವಂತೆ ಮನವಿ ಸಲ್ಲಿಸಿದ್ದೇವೆ. ಆದರೆ, ಯಾವುದೇ ರೀತಿಯ ಕ್ರಮ ತೆಗೆದುಕೊಂಡಿಲ್ಲ. ಅಲ್ಲದೆ, ಗ್ರಾಮಸ್ಥರ ಮನವಿಗೆ ಕಿಂಚಿತ್ತೂ ಬೆಲೆ ನೀಡಿಲ್ಲ. ಈಗ ಗ್ರಾಮಕ್ಕೆ ಬಂದು ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎಂದು ಬಸ್ತಿಕೊಪ್ಪ ಗ್ರಾಮಸ್ಥ ಮಂಜುನಾಥ ಬಡಿಗೇರ್ ಆರೋಪಿಸಿದ್ದಾರೆ.
ಬಡ ಜನರ ಜೀವಕ್ಕಿಂತ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಗಣಿಗಾರಿಕೆ ಮುಖ್ಯವಾಗಿದೆ. ಚುನಾವಣೆ ಸಮಯ ಹತ್ತಿರಾಗುತ್ತಿದ್ದಂತೆ ಮತ ಪಡೆಯಲು ಗ್ರಾಮಕ್ಕೆ ಬಂದಿದ್ದಾರೆ. ಪ್ರತಿನಿತ್ಯ ಗಣಿ ಧೂಳು ಮತ್ತು ಕಲ್ಲು ಸಿಡಿತದಿಂದ ಸಾವು ಬದುಕಿನ ನಡುವೆ ಬದುಕುತ್ತಿದ್ದೇವೆ ಎಂದು ಸ್ಥಳೀಯ ಜಯಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಉಮೇಶ, ರಘುಪತಿ, ಕಮಲಾಕರ, ರಮೇಶ, ಶಶಿಧರ, ಚಿದಾನಂದ, ಲಕ್ಷ್ಮೀ, ಸವಿತಾ, ಕಲಾವತಿ ಇದ್ದರು.
ಇದನ್ನೂ ಓದಿ | Shubman Gill | ದ್ವಿಶತಕದ ಸಂಭ್ರಮವನ್ನು ಕೇಕ್ ಕತ್ತರಿಸಿ ಸಂಭ್ರಮಿಸಿದ ಗಿಲ್, ಸಹ ಆಟಗಾರರು ಏನಂದರು?