ಸೊರಬ: “ನಮೋ ವೇದಿಕೆ (NaMo platform) ಎಂಬುದು ಕಾಂಗ್ರೆಸ್ ‘ಬಿ’ ಟೀಮ್ ನಂತೆ ಕಾರ್ಯ ನಿರ್ವಹಿಸುತ್ತಿದ್ದು, ಕ್ಷೇತ್ರದಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸುವ ಹಗಲು ಕನಸು ಕಾಣುತ್ತಿದ್ದಾರೆ” ಎಂದು ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಸದಸ್ಯ ಎಂ.ಡಿ. ಉಮೇಶ್ ಆರೋಪಿಸಿದರು.
ತಾಲೂಕಿನ ಆನವಟ್ಟಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ (ಮಾ.23) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನರೇಂದ್ರ ಮೋದಿಯವರ ಹೆಸರನ್ನು ಬಳಸಿಕೊಂಡು ಆರೇಳು ಮಂದಿಯ ಗುಂಪೊಂದು ಕಾಂಗ್ರೆಸ್‌ನಿಂದ ಆರ್ಥಿಕ ಸಹಾಯ ಪಡೆದು, ಬಿಜೆಪಿಯ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಇದು ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎನ್ನುವ ನಿಟ್ಟಿನಲ್ಲಿ ಕಾಂಗ್ರೆಸ್ ಮಾಡಿದ ಷಡ್ಯಂತ್ರವಾಗಿದೆ” ಎಂದರು.
ಇದನ್ನೂ ಓದಿ: Panchamasali reservation : 2ಡಿಯಲ್ಲೇ 2ಎನ ಎಲ್ಲ ಸವಲತ್ತು ಸಿಗುವ ವಿಶ್ವಾಸ ಎಂದ ಜಯಮೃತ್ಯುಂಜಯ ಶ್ರೀ
ಕ್ಷೇತ್ರದಲ್ಲಿ ಶಾಸಕ ಎಸ್. ಕುಮಾರ್ ಬಂಗಾರಪ್ಪ ಅವರನ್ನು ವಿರೋಧಿಸುವುದು ಒಂದೇ, ಪಕ್ಷವನ್ನು ವಿರೋಧಿಸುವುದು ಒಂದೇ ಆಗಿದೆ. ಮಾ.25 ರಂದು ದಾವಣಗೆರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸುತ್ತಿದ್ದಾರೆ. ಅಂದೇ ನಮೋ ವೇದಿಕೆಯವರು ಆನವಟ್ಟಿಯಲ್ಲಿ ಬೈಕ್ ರಾಲಿ ಹಮ್ಮಿಕೊಂಡಿದ್ದಾರೆ. ಈ ರ‍್ಯಾಲಿಗೆ ಕಾಂಗ್ರೆಸ್‌ನಿಂದ ದೊಡ್ಡಮಟ್ಟದ ಆರ್ಥಿಕ ನೆರವು ಬಂದಿರುವ ಅನುಮಾನ ಮೂಡುತ್ತದೆ. ನಮೋ ವೇದಿಕೆಯವರಿಗೆ ಧೈರ್ಯವಿದ್ದರೆ ಮೋದಿ ಅವರ ಹೆಸರನ್ನು ಹೊರತುಪಡಿಸಿ ಸಂಘಟನೆ ಮಾಡಲಿ ಹಾಗೂ ಕಾರ್ಯಕ್ರಮವನ್ನು ಆಯೋಜಿಸಲಿ” ಎಂದು ಸವಾಲು ಹಾಕಿದರು.
ಬಗರ್ ಹುಕುಂ ಸಮಿತಿಯ ಸದಸ್ಯ ಕೃಷ್ಣಮೂರ್ತಿ ಮಾತನಾಡಿ, “ಸರ್ಕಾರಿ ಆಸ್ತಿಯನ್ನು ಕಬಳಿಕೆ ಮಾಡಿರುವ ಆನವಟ್ಟಿ ಭಾಗದ ಮುಖಂಡರೊಬ್ಬರು ಶಾಸಕರ ವಿರುದ್ಧ ಇಲ್ಲಸಲ್ಲದ ಆರೋಪದಲ್ಲಿ ತೊಡಗಿದ್ದಾರೆ. ಸರ್ಕಾರಿ ಆಸ್ತಿ ಒತ್ತುವರಿ ತೆರವಾಗುವ ಆತಂಕದಲ್ಲಿ ನಮೋ ವೇದಿಕೆಯಲ್ಲಿ ಗುರುತಿಸಿಕೊಂಡು ಮೂಲ ಬಿಜೆಪಿಗರು ಎನ್ನುತ್ತಿದ್ದಾರೆ. ಆದರೆ ಇವರು ಈ ಹಿಂದೆ ಜೆಡಿಎಸ್ ಗೆ ಬೆಂಬಲ ನೀಡಿದ್ದ ವಿಷಯ ಗುಟ್ಟಾಗಿ ಉಳಿದಿಲ್ಲ. ನಮೋ ವೇದಿಕೆ ಎಂದು ಹೇಳಿಕೊಳ್ಳುತ್ತಿರುವ ಕೆಲ ಮುಖಂಡರು ಹರತಾಳು ಹಾಲಪ್ಪ ಅವರು ಶಾಸಕರಾಗಿದ್ದ ಸಂದರ್ಭದಲ್ಲಿಯೂ ಇದೇ ರೀತಿಯ ಕಿರುಕುಳ ನೀಡಿದ್ದರು” ಎಂದರು.
ಇದನ್ನೂ ಓದಿ: World Cup 2023: ಕೇಂದ್ರದಿಂದ ತೆರಿಗೆ ವಿನಾಯಿತಿ ಸಿಗದೆ ಬಿಸಿಸಿಐಗೆ 963 ಕೋಟಿ ರೂ. ಹೊರೆ
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಆನವಟ್ಟಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ವಿ. ಚನ್ನಬಸಪ್ಪ ಗೌಡ, ರೈತ ಮೋರ್ಚಾ ತಾಲೂಕು ಅಧ್ಯಕ್ಷ ಪ್ರಕಾಶ್, ಪ್ರಮುಖರಾದ ಶಿವನಗೌಡ ದ್ವಾರಹಳ್ಳಿ, ಕೊಟ್ರೇಶಪ್ಪ, ಚಂದ್ರಶೇಖರ ಗೌಡ, ಹನುಮಂತಪ್ಪ, ಶಿವಾನಂದಪ್ಪ, ಕೆರಿಯಪ್ಪ, ಮಂಜಪ್ಪ, ರಾಜು ಆನವಟ್ಟಿ, ಚಾಂದ್ ಸಾಬ್, ಮಂಜುನಾಥ, ಕುಮಾರ ಹಿರೇಮಾಗಡಿ, ಬಸವರಾಜಪ್ಪ ಸೇರಿದಂತೆ ಇತರರಿದ್ದರು.