ಸೊರಬ: ತಾಲೂಕಿನ ಬಸ್ತಿಕೊಪ್ಪ ಗ್ರಾಮದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸಬೇಕು. ಇಲ್ಲವಾದಲ್ಲಿ ಮುಂಬರುವ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಗ್ರಾಮದ ಮುಖಂಡ ನಾಗರಾಜ ನಾಯ್ಕ್ ಹೇಳಿದರು.
ಬಸ್ತಿಕೊಪ್ಪ ಗ್ರಾಮದ ಕಲ್ಲು ಗಣಿಗಾರಿಕೆ ಸ್ಥಗಿತಕ್ಕೆ ಆಗ್ರಹಿಸಿ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಮಂಗಳವಾರ (ಡಿ.13) ಪ್ರತಿಭಟನೆ ನಡೆಸಿ, ನಂತರ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಕಲ್ಲು ಗಣಿಗಾರಿಕೆಯಿಂದಾಗಿ ಗ್ರಾಮಸ್ಥರು ಅಕ್ಷರಶಃ ನಲುಗಿ ಹೋಗಿದ್ದಾರೆ. ನಿತ್ಯ ನೂರಾರು ಲಾರಿಗಳು ಸಂಚರಿಸುತ್ತಿದ್ದು, ರಸ್ತೆಗಳು ಹಾಳಾಗಿವೆ. ಕಲ್ಲು ಗಣಿಗಾರಿಕೆ ಸ್ಫೋಟದ ಸದ್ದಿಗೆ ಭೂಮಿ ಕಂಪಿಸುತ್ತಿದೆ. ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಗ್ರಾಮಸ್ಥರು ಜೀವ ಭಯದಲ್ಲಿ ಜೀವನ ಸಾಗಿಸುವಂತಾಗಿದೆ. ಅರಣ್ಯ ಭೂಮಿಯು ನಾಶವಾಗುತ್ತಿದ್ದು, ಕಾಡು ಪ್ರಾಣಿಗಳು ಗ್ರಾಮದತ್ತ ವಲಸೆ ಬರುತ್ತಿವೆ. ಕೂಡಲೇ ಕಲ್ಲು ಗಣಿಗಾರಿಕೆಯನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.
ಗ್ರಾಮಸ್ಥರಾದ ನೂರ್ ಆಹ್ಮದ್ ಮಾತನಾಡಿ, ಕಲ್ಲು ಗಣಿಗಾರಿಕೆಯಿಂದ ರಸ್ತೆಗಳು ಹಾಳಾಗಿದ್ದು, ತುರ್ತು ಸ್ಥಿತಿಯಲ್ಲಿ ಆಂಬ್ಯುಲೆನ್ಸ್ ವಾಹನ ಸಹ ಗ್ರಾಮಕ್ಕೆ ಬರದಂತಾಗಿದೆ. ಕಲ್ಲು ಗಣಿಗಾರಿಕೆ ನಿಲ್ಲಿಸುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೃಷಿ ಭೂಮಿ ನಾಶವಾಗುತ್ತಿದೆ. ಧೂಳಿನಿಂದ ಕುಡಿಯುವ ನೀರು ಕಲುಷಿತವಾಗುತ್ತಿದೆ. ಸ್ಫೋಟದ ತೀವ್ರತೆಗೆ ಶಾಲಾ ಕೊಠಡಿಗಳು ಬಿರುಕುಬಿಟ್ಟಿವೆ. ಮಕ್ಕಳು ಭಯದಲ್ಲಿಯೇ ಶಾಲೆಗೆ ತೆರಳುವಂತಾಗಿದೆ. ಕೂಡಲೇ ಕಲ್ಲು ಗಣಿಗಾರಿಕೆ ಸ್ಥಗಿತಗೊಳಿಸದಿದ್ದಲ್ಲಿ ವಿವಿಧ ಹಂತದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಇದನ್ನೂ ಓದಿ | Leaf Spot Disease | ಅಡಿಕೆ ಎಲೆ ಚುಕ್ಕಿ ರೋಗದ ಕುರಿತು ಇಸ್ರೇಲ್ ವಿಜ್ಞಾನಿಗಳ ಜತೆ ಚರ್ಚಿಸಲಿರುವ ಸಚಿವ ಮುನಿರತ್ನ
ಗ್ರಾಮಸ್ಥರಾದ ಡಿ. ಮಂಜಪ್ಪ ಮಾತನಾಡಿ, ಗ್ರಾಮದಲ್ಲಿ ತೆರೆದ ಬಾವಿಗಳು ಧೂಳಿನಿಂದ ಕಲುಷಿತವಾಗಿದ್ದು, ಜನ-ಜಾನುವಾರಿಗೆ ಕುಡಿಯಲು ಸಹ ನೀರಿನ ಸಮಸ್ಯೆ ಎದುರಾಗಿದೆ. ಜತೆಗೆ ಮಹಿಳೆಯರು, ಮಕ್ಕಳು ಹಾಗೂ ವೃದ್ಧರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಗಣಿಗಾರಿಕೆಯಿಂದ ತ್ಯಾಜ್ಯ ನೀರನ್ನು ನೇರವಾಗಿ ಕೃಷಿ ಜಮೀನುಗಳಿಗೆ ಹರಿಸುತ್ತಿರುವುದರಿಂದ ಜಮೀನುಗಳು ಹಾಳಾಗುತ್ತಿವೆ. ಗ್ರಾಮಸ್ಥರು ಮನವಿ ಸಲ್ಲಿಸಿದ ಸಂದರ್ಭದಲ್ಲಿ ನೆಪ ಮಾತ್ರಕ್ಕೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡುತ್ತಿದ್ದಾರೆ. ಆದರೆ, ಯಾವುದೇ ಪರಿಹಾರ ದೊರಕಿಸಿಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಸ್ತಿಕೊಪ್ಪದಲ್ಲಿ ಗ್ರಾಮಸ್ಥರ ವಿರೋಧದ ನಡುವೆಯೂ ಪುನಃ ಹೊಸದಾಗಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ಗ್ರಾಮವನ್ನೇ ನಾಶ ಮಾಡುವುದು ಸರಿಯಲ್ಲ. ಗಣಿಗಾರಿಕೆ ಸ್ಥಗಿತವಾಗದಿದ್ದಲ್ಲಿ ತಾಲೂಕು ಕಚೇರಿ ಮತ್ತು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅನಿರ್ಧಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರತಿಭಟನೆಯಲ್ಲಿ ರಾಜ್ಯ ಜೀವ ವೈವಿಧ್ಯ ಮಂಡಳಿಯ ತಜ್ಞ ಸಮಿತಿಯ ಸದಸ್ಯ ಶ್ರೀಪಾದ ಬಿಚ್ಚುಗತ್ತಿ, ಗ್ರಾಮಸ್ಥರಾದ ಪರಶುರಾಮ್, ಜಿ. ಶಶಿಧರ್, ಲೋಕೇಶ್, ಮಂಜಪ್ಪ, ದೇವೇಂದ್ರ, ಪರಮೇಶ, ಕಮಲಾಕರ, ರಘುಪತಿ, ಭರ್ಮಪ್ಪ, ಗಣಪತಿ, ನಾರಾಯಣ, ರಾಜೇಂದ್ರ ಇದ್ದರು.
ಇದನ್ನೂ ಓದಿ | IND VS SL | ವರ್ಷಾರಂಭದ ಭಾರತ ಮತ್ತು ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದ ಟಿಕೆಟ್ ದರ ಏರಿಕೆ?