Site icon Vistara News

Soraba News: ಮಡಿವಾಳ ಸಮಾಜದ ಶೈಕ್ಷಣಿಕ, ಆರ್ಥಿಕ ಪ್ರಗತಿಗಾಗಿ ಅಸ್ತಿತ್ವಕ್ಕೆ ಬಂದ ಮಾಚಿದೇವ ಯುವ ವೇದಿಕೆ

Madiwala Machideva yuva vedike soraba

ಸೊರಬ: ಮಡಿವಾಳ ಸಮಾಜದ ಶೈಕ್ಷಣಿಕ, ಆರ್ಥಿಕ ಪ್ರಗತಿಗೆ ಯುವಕರನ್ನು ಒಳಗೊಂಡ ಮಡಿವಾಳ ಮಾಚಿದೇವ ಯುವ ವೇದಿಕೆ ಅಸ್ತಿತ್ವಕ್ಕೆ ಬಂದಿದೆ ಎಂದು ಮಡಿವಾಳ ಮಾಚಿದೇವ ಯುವ ವೇದಿಕೆಯ ಅಧ್ಯಕ್ಷ ಗಣೇಶ್ ಹೊಳೆಕಟ್ಟೆ ಹೇಳಿದರು.

ಪಟ್ಟಣದ ಸಮೀಪ ಕರಡಿಗೇರಿಯಲ್ಲಿರುವ ಮಡಿವಾಳ ಸಮುದಾಯ ಭವನದಲ್ಲಿ ನೂತನವಾಗಿ ಆರಂಭವಾದ ಮಡಿವಾಳ ಮಾಚಿದೇವ ಯುವ ವೇದಿಕೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾಜದ ಹಿತಾಸಕ್ತಿಗಾಗಿ ಯುವ ವೇದಿಕೆಯು ಅಸ್ತಿತ್ವಕ್ಕೆ ಬಂದಿದ್ದು, ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಕುಟುಂಬಗಳನ್ನು ಗುರುತಿಸುವ ಜತೆಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಹಾಗೂ ಸಂಘಟನೆಯಿಂದ ಕೈಲಾದ ಸಹಾಯ ನೀಡುವ ಉದ್ದೇಶ ಹೊಂದಲಾಗಿದೆ. ಸಮಾಜದಲ್ಲಿ ಅನೇಕರು ಪ್ರತಿಭಾನ್ವಿತ ವಿದ್ಯಾರ್ಥಿಗಳಿದ್ದು, ಅವರಿಗೆ ಸೂಕ್ತ ಪ್ರೋತ್ಸಾಹ ನೀಡಲಾಗುವುದು. ಯುವ ವೇದಿಕೆಯಲ್ಲಿ ಯಾವುದೇ ರಾಜಕೀಯ ಹಸ್ತಕ್ಷೇಪವಾಗದಂತೆ ಸಮಾಜದ ಏಳಿಗೆಗಾಗಿ ಶ್ರಮಿಸುವುದಾಗಿ ತಿಳಿಸಿದರು.

ವೇದಿಕೆಯ ಕಾನೂನು ಸಲಹೆಗಾರ ಉಮೇಶ್ ವಕೀಲ ಮಾತನಾಡಿ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರ್ಕಾರ ಆಡಳಿತ ನಡೆಸಲು ಸಂವಿಧಾನ ಎಷ್ಟು ಮಹತ್ವವನ್ನು ಪಡೆದಿದೆಯೋ, ಅಂತೆಯೇ ಸಂಘಗಳ ಕಾರ್ಯಚಟುವಟಿಕೆಗೆ ಸಂಘದ ಬೈಲಾ ಸಂವಿಧಾನವಿದ್ದಂತೆ. ಬೈಲಾದಲ್ಲಿ ತಿಳಿಸಿದಂತೆ ಸಮಾಜದ ಸತ್ಕಾರ್ಯಗಳಲ್ಲಿ ಸಂಘಟನಾತ್ಮಕವಾಗಿ ತೊಡಗಿಕೊಳ್ಳಬೇಕು. ಯಾವುದೇ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದಂತೆ ಸಮಾಜದ ಏಳಿಗೆಗೆ ಶ್ರಮಿಸಬೇಕು. ತಾಲೂಕಿನಲ್ಲಿ ಮಡಿವಾಳ ಸಮಾಜದ ಅನೇಕ ಯುವಕರಿದ್ದು, ಮುಂದಿನ ದಿನಗಳಲ್ಲಿ ಅವರನ್ನು ವೇದಿಕೆಯಡಿ ಕರೆತರುವಂತೆ ಕಾರ್ಯೋನ್ಮುಖರಾಗಬೇಕು ಎಂದರು.

ಇದನ್ನೂ ಓದಿ | Basavaraj Bommai Birthday Special : ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಾತ್ಮದ ಮಾತು ಅದ್ಭುತ: ಇಲ್ಲಿವೆ ಒಂದಷ್ಟು ಉದಾಹರಣೆ

ಮಡಿವಾಳ ಸಮುದಾಯ ಭವನದ ನಿವೇಶನ ನೀಡಿರುವ ದಾನಿ ತುಳಜಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಮುಖರಾದ ಈಶ್ವರಪ್ಪ ಚನ್ನಪಟ್ಟಣ, ಗಂಗಾಧರ ಮಾಕೊಪ್ಪ, ಸೋಮಪ್ಪ ತಳೆಬೈಲು, ಯುವ ವೇದಿಕೆಯ ತಾಲೂಕು ಉಪಾಧ್ಯಕ್ಷ ಎಂ.ಪಿ. ಗಿರೀಶ್ ಚಿಕ್ಕಬ್ಬೂರು, ಪ್ರಧಾನ ಕಾರ್ಯದರ್ಶಿ ಪ್ರಶಾಂತ ಬೆಟ್ಟದಕೂರ್ಲಿ, ಖಜಾಂಚಿ ನೆಮ್ಮದಿ ಸುಬ್ಬು, ಶಶಿಕುಮಾರ್ ತಾಳಗುಪ್ಪ, ಟೋಕೇಶ್ ನಿಟ್ಟಕ್ಕಿ, ಶ್ರೀಕಾಂತ ನಿಟ್ಟಕ್ಕಿ, ಸತೀಶ್, ಪರಮೇಶ್ ಮಳಲಗದ್ದೆ, ವಿನಯ್ ಸೊರಬ, ಸೇರಿದಂತೆ ಮತ್ತಿತರರಿದ್ದರು.

Exit mobile version