Site icon Vistara News

Soraba News | ಸಾಗುವಳಿ ಜಮೀನಿನಲ್ಲಿ ಶ್ರೀ ನಾರಾಯಣ ಗುರು ವಸತಿ ಶಾಲೆಗೆ ಭೂ ಮಂಜೂರಾತಿ: ಗ್ರಾಮಸ್ಥರ ಪ್ರತಿಭಟನೆ

Hireshakuna Village Sree Narayana Guru Residential School

ಸೊರಬ: ರೈತರ ಸಾಗುವಳಿ ಭೂ ಮಂಜೂರಾತಿ ನೀಡಿದ ಜಮೀನಿನಲ್ಲಿ ಶ್ರೀ ನಾರಾಯಣ ಗುರು ವಸತಿ ಶಾಲೆಗೆ ನಕ್ಷೆ ತಯಾರಿಸಿ ಭೂ ಮಂಜೂರಾತಿ ನೀಡಿರುವುದನ್ನು ವಿರೋಧಿಸಿ ಪಟ್ಟಣದ (Soraba News) ತಾಲೂಕು ಕಚೇರಿ ಮುಂಭಾಗ ಹಿರೇಶಕುನ ಗ್ರಾಮಸ್ಥರು ಬುಧವಾರ (ಡಿ.೨೮) ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಹಿರೇಶಕುನ ಸರ್ವೇ ನಂ. 113ರಲ್ಲಿ ಕಳೆದ 40 ವರ್ಷಗಳಿಂದ ಭೂ ಹಿಡುವಳಿ ಮಾಡುತ್ತಾ ಬರುತ್ತಿದ್ದೇವೆ. ಹಿಡುವಳಿ ಭೂಮಿಗೆ ಫಾರಂ ಸಂಖ್ಯೆ 50 ಮತ್ತು 53ರಲ್ಲಿ ಅರ್ಜಿ ಸಲ್ಲಿಸಲಾಗಿದೆ. ಅರ್ಜಿ ಅನುಸರಿಸಿ 37 ರೈತರಿಗೆ ಒಟ್ಟು 58.16 ಎಕರೆ ಭೂ ಮಂಜೂರಾತಿ ಆಗಿದೆ. ಸಾಗುವಳಿ ಚೀಟಿ ಹಾಗೂ ಖಾತೆ ಪಹಣಿ ಸಹ ನೀಡಿದ್ದರು. ಆದರೆ, ಸಾಗರ ಉಪ ವಿಭಾಗಾಧಿಕಾರಿಗಳು ಆದೇಶವನ್ನು ರದ್ದುಪಡಿಸಿದ್ದರು. ಜಿಲ್ಲಾಧಿಕಾರಿಗಳಿಗೆ ಪುನಃ ಮೇಲ್ಮನವಿ ಸಲ್ಲಿಸಿದ್ದು, ಅದು ಸಹ ತಿರಸ್ಕರಿತವಾಗಿತ್ತು. ಹೈಕೋರ್ಟ್‌ನಲ್ಲಿ ಪ್ರಸ್ತುತ ವಿಚಾರಣೆ ನಡೆಯುತ್ತಿದ್ದು, ವಿಚಾರಣೆ ಪೂರ್ಣಗೊಳ್ಳುವ ಮುನ್ನವೇ ವಸತಿ ಶಾಲೆಗೆ 20 ಎಕರೆ ಮಂಜೂರು ಮಾಡಲಾಗಿದೆ. ಇದರ ವಿರುದ್ಧವೂ ಅರ್ಜಿ ಸಲ್ಲಿಸಲಾಗಿದೆ. ವಿಚಾರಣೆ ಪೂರ್ಣವಾಗುವವರೆಗೂ ವಸತಿ ಶಾಲೆಗೆ ಸರ್ವೇ ಮಾಡಲು ಅವಕಾಶ ನೀಡುವುದಿಲ್ಲವೆಂದು ಪ್ರತಿಭಟನಾನಿರತ ರೈತರು ತಿಳಿಸಿದರು.

ಇದನ್ನೂ ಓದಿ Drunken teacher | ಡ್ಯೂಟಿ ಟೈಮಲ್ಲೇ ಮತ್ತೇರಿದ ಮಾಸ್ಟರ್; ಶಾಲೆ ಜಗುಲಿಯಲ್ಲೇ ಮಲಗಿ ಹೊರಳಾಟ; ಇದು ಅಲಂಗಾರು ಶಾಲೆಯ ಗೋಳಾಟ

ಪ್ರಸ್ತುತ ಸರ್ವೇ ನಂ. 113ರ 58 ಎಕರೆ ಪ್ರದೇಶದಲ್ಲಿ ಅಡಕೆ, ಜೋಳ, ಶುಂಠಿ, ಬಾಳೆ, ಭತ್ತ, ಪಪ್ಪಾಯಿ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿದ್ದೇವೆ. ಆದರೆ, ಕಂದಾಯ ಅಧಿಕಾರಿಗಳು ಡಿ. 27ರಂದು ಸಾಗುವಳಿ ಜಮೀನಿಗೆ ಆಗಮಿಸಿ ನಾರಾಯಣ ಗುರು ವಸತಿ ಶಾಲೆಗೆ ಜಾಗವನ್ನು ಗಡಿ ಗುರುತು ಮಾಡಿರುವುದು ಕಂಡು ಬಂದಿದ್ದು, ರೈತರು ಸ್ಥಳಕ್ಕೆ ಆಗಮಿಸಿ ಸರ್ವೇ ಕಾರ್ಯವನ್ನು ಸ್ಥಗಿತಗೊಳಿಸಿದರು. ಜಮೀನಿಗೆ ಸಂಬಂಧಿಸಿದಂತೆ ಪ್ರಕರಣದ ಅಂತಿಮ ತೀರ್ಪು ಬರುವವರೆಗೂ ಭೂ ಸಾಗುವಳಿ ಮಂಜೂರಾತಿ ಜಮೀನನ್ನು ಇತರೆ ಉದ್ದೇಶಗಳಿಗೆ ನೀಡದಂತೆ ಮನವಿಯಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಹಿರೇಶಕುನ ರೈತರಾದ ಟೋಕಪ್ಪ ಮಂಚಿ, ಟೋಕಪ್ಪ ಮೇಸ್ತ್ರಿ, ಜೆ. ಅಣ್ಣಪ್ಪ, ಟಿ.ಬಿ. ಮಂಜಪ್ಪ, ನಿರಂಜನಮೂರ್ತಿ ಪಾಣಿ, ತಿಮ್ಮೇಶಿ, ಕೃಷ್ಣಪ್ಪ, ನಾಗರಾಜ ಕುಂಬಾರ್, ಟಿ.ಬಿ. ತೋಪಪ್ಪ, ಎನ್.ಬಿ. ಬಸವರಾಜ, ಹಿರಿಯಪ್ಪ ಕುಂಬಾರ್, ಕೆ.ಎಚ್. ಸಂತೋಷ್ ಕೊಂಟಿಗಾರ್, ಚಂದ್ರಪ್ಪ, ವಿ. ರಾಜೇಶ, ನಾಗರಾಜ್ ಸೇರಿದಂತೆ ಇತರರಿದ್ದರು.

ಇದನ್ನೂ ಓದಿ | Elephant trapped | ಕೊಡಗಿನ ಕರಡಿಗೋಡು ಭಾಗದಲ್ಲಿ ಜನರ ನಿದ್ದೆಗೆಡಿಸಿದ್ದ ಕಾಡಾನೆ ಸೆರೆ, ಗಾತ್ರ ಸಣ್ಣದು, ಪುಂಡಾಟ ದೊಡ್ಡದು!

Exit mobile version