ಸೊರಬ: ರೈತ ವಿರೋಧಿ ಕೃಷಿ ಕಾಯಿದೆಗಳನ್ನು ಹಿಂಪಡೆಯಬೇಕು. ಅಡಕೆ ಮರಗಳಿಗೆ ಎಲೆ ಚುಕ್ಕಿ ರೋಗ ಹರಡದಂತೆ ಕ್ರಮ ಕೈಗೊಳ್ಳಬೇಕು ಸೇರಿದಂತೆ ವಿವಿಧ ಬೇಡಿಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಪಟ್ಟಣದ ತಾಲೂಕು ಕಚೇರಿ ಮುಂಭಾಗ ಸೋಮವಾರ (ಡಿ.೧೨) ಧರಣಿ ನಡೆಸಲಾಯಿತು.
ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಎನ್.ಕೆ. ಮಂಜುನಾಥ ಗೌಡ ನಿಸರಾಣಿ ಮಾತನಾಡಿ, ಭತ್ತ, ಜೋಳಕ್ಕೆ ಸ್ವಾಮಿನಾಥನ್ ವರದಿ ಆಧರಿಸಿ ಬೆಂಬಲ ಬೆಲೆ ಘೋಷಣೆ ಮಾಡಿ, ಬೆಂಬಲ ಬೆಲೆಯಲ್ಲಿ ಖರೀದಿ ಕೇಂದ್ರ ಹೋಬಳಿವಾರು ಪ್ರಾರಂಭಿಸಬೇಕು. ವೈಜ್ಞಾನಿಕ ಬೆಳೆ ವಿಮೆಯನ್ನು ಜಾರಿಗೆ ತರಬೇಕು. ಹಾಲಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವ ಜತೆಗೆ ಕೆಎಂಎಫ್ ಪಶು ಆಹಾರಗಳ ಬೆಲೆ ಇಳಿಕೆ ಮಾಡಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗಮನಹರಿಸಿ ರೈತರ ಹಿತ ಕಾಯಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ರಾಜ್ಯ ಸಂಚಾಲಕ ಉಮೇಶ್ ಪಾಟೀಲ್ ಮಾತನಾಡಿ, ಅರಣ್ಯ ಭೂಮಿ ಸಾಗುವಳಿಗೆ ಮರು ಸೇರ್ಪಡೆ ಅವಕಾಶ ನೀಡಿ ಹಕ್ಕುಪತ್ರ ನೀಡಬೇಕು. ಅರಣ್ಯ ಇಲಾಖೆ ಸಾಗುವಳಿದಾರರ ಮೇಲೆ ಹಾಕಿದ ಕೇಸ್ ವಾಪಸ್ ಪಡೆಯಬೇಕು. ರೈತರ ವಿದ್ಯುತ್ ಪಂಪ್ ಸೆಟ್‍ಗೆ ಮೀಟರ್ ಅಳವಡಿಸುವುದನ್ನು ಕೈ ಬಿಡಬೇಕು ಹಾಗೂ ತ್ರೀ ಫೇಸ್ ವಿದ್ಯುತ್ 12 ಗಂಟೆ ಹಗಲು ವೇಳೆಯಲ್ಲಿ ನೀಡಬೇಕು. ಜಾನುವಾರುಗಳಿಗೆ ಚರ್ಮಗಂಟು ರೋಗ ಬಂದಿದೆ. ಈ ಹಿನ್ನೆಲೆಯಲ್ಲಿ ಪಶು ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ರೈತರ ವಿದ್ಯುತ್‍ನ ಹಳೆ ಬಾಕಿಯನ್ನು ಮನ್ನಾ ಮಾಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ನಂತರ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿದ ರೈತ ಮುಖಂಡರು ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಧರಣಿಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಈಶ್ವರಪ್ಪ ಕೊಡಕಣಿ, ಜಿಲ್ಲಾಧ್ಯಕ್ಷ ಸೈಯದ್ ಶಫೀವುಲ್ಲಾ, ಮೇಘರಾಜ್, ಶಿವಪ್ಪ ಹುಣಸವಳ್ಳಿ ಇದ್ದರು.
ಇದನ್ನೂ ಓದಿ | Kannada Sahitya Parishat | ಡಿ.30ರಿಂದ ಕನ್ನಡ ಸಾಹಿತ್ಯ ಪರಿಷತ್ ಸಾಹಿತ್ಯ ಪರೀಕ್ಷೆ