ಬೆಂಗಳೂರು: ಕರ್ನಾಟಕಕ್ಕೆ ನೈಋತ್ಯ ಮುಂಗಾರು ಪ್ರವೇಶವಾಗಿದ್ದು, ಇಂದಿನಿಂದ ನಾಲ್ಕು ದಿನಗಳ ಕಾಲ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅದರಲ್ಲೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗುವ ಸಾಧ್ಯತೆ ಇದ್ದು ಹಳದಿ ಅಲರ್ಟ್ ಘೋಷಣೆ ಮಾಡಲಾಗಿದೆ. ಹಾಗೇ, ಹಾಸನ, ಶಿವಮೊಗ್ಗ, ರಾಮನಗರ, ಕೊಡಗು, ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು-ಮಂಡ್ಯ ಜಿಲ್ಲೆಗಳಲ್ಲೂ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಶುಕ್ರವಾರ ಮತ್ತು ಶನಿವಾರ ಗುಡುಗು-ಮಿಂಚು ಸಹಿತ ಮಳೆಯಾಗಲಿದ್ದು, ಈಗಾಗಲೇ ಹಳದಿ ಅಲರ್ಟ್ ಘೋಷಣೆಯಾಗಿದೆ.
ಹುಬ್ಬಳ್ಳಿಯಲ್ಲಿ ವಿಪರೀತ ಮಳೆ
ಹುಬ್ಬಳ್ಳಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ, ನಿನ್ನೆಯಿಂದಲೇ ಭಾರಿ ಮಳೆಯಾಗುತ್ತಿದೆ. ಇಂದೂ ಕೂಡ ಮಳೆ ಮುಂದುವರಿಯಲಿದ್ದು ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ. ನಿನ್ನೆ ಬಿದ್ದ ಮಳೆಗೆ ಹುಬ್ಬಳ್ಳಿ ಜನರು ಪರದಾಡುವಂತಾಯಿತು. ಎರಡು ಮನೆಗಳು ಕುಸಿದುಬಿದ್ದಿವೆ. ಎರಡು ಕಾರುಗಳು, ಎರಡು ಬೈಕ್‌ಗಳಿಗೂ ಹಾನಿಯಾಗಿದೆ. ಹುಬ್ಬಳ್ಳಿ-ಧಾರವಾಡ ರಸ್ತೆಯಲ್ಲಿ ನೀರು ತುಂಬಿ, ವಾಹನ ಮತ್ತು ಜನಸಂಚಾರಕ್ಕೆ ತೊಡಕಾಗಿತ್ತು.
ಈ ಬಾರಿ ಮಾನ್ಸೂನ್ ಎಂದಿಗಿಂತಲೂ ಬೇಗ ಅಂದರೆ ನೇ 29ರಂದು ಕೇರಳವನ್ನು ಪ್ರವೇಶಿಸಿತ್ತು. ಕೇರಳ, ಮಾಹೆ ಮತ್ತು ಲಕ್ಷದ್ವೀಪ ಭಾಗಗಳಲ್ಲೂ ಇಂದಿನಿಂದ ಸಾಧಾರಣ ಮಳೆಯಾಗಲಿದೆ. ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕಾರೈಕಲ್‌ಗಳಲ್ಲಿ ಜೂ.6ರವರೆಗೆ ತುಂತುರು ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: Monsoon 2022: ಜೂ.2ಕ್ಕೆ ಕರ್ನಾಟಕಕ್ಕೆ ಮುಂಗಾರು ಪ್ರವೇಶ; 7ರಿಂದ ರಾಜ್ಯಾದ್ಯಂತ ಮಳೆ ಸಾಧ್ಯತೆ