Site icon Vistara News

HAL Helicopter Factory : ಇಲ್ಲಿ ರೆಡಿಯಾಗಿದೆ, 20,000 ಅಡಿ ಎತ್ತರದಲ್ಲಿ ಹಾರಬಲ್ಲ, ನೀರಲ್ಲೂ ಇಳಿಯಬಲ್ಲ ಎಲ್‌ಯುಎಚ್‌ ಹೆಲಿಕಾಪ್ಟರ್‌

HAL LUH

#image_title

ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ರಾಜ್ಯ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್‌ನಲ್ಲಿ ನಿರ್ಮಿಸಲಾಗಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನ (ಎಚ್ಎಎಲ್) ನೂತನ ಹೆಲಿಕಾಪ್ಟರ್ ಉತ್ಪಾದನಾ ಘಟಕವನ್ನು (HAL Helicopter Factory) ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಲೋಕಾರ್ಪಣೆ ಮಾಡಿದರು. ಇದು ಏಷ್ಯಾದ ಅತಿದೊಡ್ಡ ಹೆಲಿಕಾಪ್ಟರ್‌ ಉತ್ಪಾದನಾ ಘಟಕ ಎಂಬ ಹೆಗ್ಗಳಿಕೆಯನ್ನು ಹೊಂದಿದೆ.

615 ಎಕರೆ ಭೂಪ್ರದೇಶದಲ್ಲಿ ವಿಸ್ತಾರವಾಗಿ ಹರಡಿರುವ ಈ ಘಟಕದ ಸ್ಥಾಪನೆಗೆ ಪ್ರಧಾನಿ ಮೋದಿ ಅವರು 2016ರಲ್ಲಿ ಶಂಕುಸ್ಥಾಪನೆ ನಡೆಸಿದ್ದರು. ಈ ಹೆಲಿಕಾಪ್ಟರ್ ಉತ್ಪಾದನಾ ಘಟಕದಲ್ಲಿ ಉತ್ಪಾದನೆ, ಪರೀಕ್ಷೆಗಳಿಗೆ ಬೇಕಾದ ವ್ಯವಸ್ಥೆಗಳು ಇವೆ. 3 ಟನ್‌ನಿಂದ 12 ಟನ್ ತೂಕದ ತನಕ ವಿವಿಧ ಶ್ರೇಣಿಗಳ ಹೆಲಿಕಾಪ್ಟರ್ ನಿರ್ಮಾಣ ಸಾಮರ್ಥ್ಯ ಈ ಸ್ಥಾವರಕ್ಕಿದೆ.

೨೦೧೬ರಲ್ಲಿ ಸ್ಥಾವರಕ್ಕೆ ಅಡಿಗಲ್ಲು ಹಾಕುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಾತನಾಡಿದಾಗ..

ಎಲ್‌ಯುಎಚ್‌ ಹೊಸ ತಲೆಮಾರಿನ ಹೆಲಿಕಾಪ್ಟರ್

ಇಲ್ಲಿ ಉತ್ಪಾದನೆಗೊಳ್ಳಲಿರುವ ಲೈಟ್ ಯುಟಿಲಿಟಿ ಹೆಲಿಕಾಪ್ಟರ್‌ (Light Utility Helicopter-LHU) ಒಂದು 3 ಟನ್ ವರ್ಗದ ಹೊಸ ತಲೆಮಾರಿನ ಹೆಲಿಕಾಪ್ಟರ್ ಆಗಿದ್ದು, ಎಚ್ಎಎಲ್ ಇದನ್ನು ಮಿಲಿಟರಿ ಮತ್ತು ನಾಗರಿಕ ಎರಡೂ ಅಗತ್ಯತೆಗಳನ್ನು ಪೂರೈಸಲು ನಿರ್ಮಿಸಿದೆ.

ಎಲ್‌ಯುಎಚ್ ಎನ್ನುವುದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ನಿರ್ಮಿಸಿರುವ ಇತ್ತೀಚಿನ ಹೆಲಿಕಾಪ್ಟರ್ ಆಗಿದ್ದು, ಸಮುದ್ರ ಮಟ್ಟದಿಂದ 20,000 ಅಡಿ ಎತ್ತರದಲ್ಲಿ ಕಾರ್ಯಾಚರಣೆ ನಡೆಸಬಲ್ಲ ಸಾಮರ್ಥ್ಯ ಹೊಂದಿದೆ. ಈ ಆಧುನಿಕ ಹೆಲಿಕಾಪ್ಟರ್ ಗಾಜಿನ ಕಾಕ್‌ಪಿಟ್, ಡ್ಯುವಲ್ ಕಂಟ್ರೋಲ್ ಮತ್ತು ಒಂದು ಸಫ್ರಾನ್ ಅರ್ಡಿಡೆನ್ 1ಯು1 ಟರ್ಬೋಶಾಫ್ಟ್ ಇಂಜಿನ್ ಹೊಂದಿದೆ. ಈ ಹೆಲಿಕಾಪ್ಟರ್ ಅತ್ಯಂತ ಯಶಸ್ವಿಯಾಗಿದ್ದು, ಜಾಗತಿಕ ಗುಣಮಟ್ಟಗಳಿಗೆ ಅನುಗುಣವಾಗಿ ನಿರ್ಮಿಸಲಾಗಿದೆ. ಈ ಯಶಸ್ಸಿನ ಬಳಿಕ ಹೆಲಿಕಾಪ್ಟರ್ ಅನ್ನು ನಾಗರಿಕ ಬಳಕೆಗೆ ಬೇಕಾದಂತೆ ತಯಾರಿಸುವ ಪ್ರಯತ್ನಗಳೂ ಆರಂಭಗೊಂಡಿವೆ.

ಭಾರತೀಯ ಸೇನಾಪಡೆಗಳಿಗೆ 20,000 ಅಡಿಗಳಿಗಿಂತ ಹೆಚ್ಚು ಎತ್ತರದಲ್ಲಿ ಕಾರ್ಯಾಚರಣೆ ನಡೆಸಬಲ್ಲ ಹೆಲಿಕಾಪ್ಟರ್ ಅಗತ್ಯವಿದೆ. ಈ ಅಗತ್ಯತೆ ಹೆಲಿಕಾಪ್ಟರ್‌ಗೆ ವಿನೂತನ ಸವಾಲನ್ನು ತಂದೊಡ್ಡಿದೆ. ಇಂತಹ ಎತ್ತರದ ಪ್ರದೇಶದಲ್ಲಿ ಪ್ರಚಲಿತ ಗಾಳಿಯ ಸಾಂದ್ರತೆ ಅತ್ಯಂತ ಕಡಿಮೆಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕೆಲವೇ ಕೆಲವು ಹೆಲಿಕಾಪ್ಟರ್‌ಗಳು ಮಾತ್ರ ಕಾರ್ಯಾಚರಿಸುವ ಸಾಮರ್ಥ್ಯ ಹೊಂದಿವೆ. ಅಂತಹಾ ಹೆಲಿಕಾಪ್ಟರ್‌ಗಳಲ್ಲಿ ಎಲ್‌ಯುಎಚ್ ಸಹ ಒಂದಾಗಿದೆ.

ಏನೇನು ವಿಶೇಷ ವ್ಯವಸ್ಥೆಗಳಿವೆ?
-ಇದು ಅತ್ಯಾಧುನಿಕ ತಂತ್ರಜ್ಞಾನಗಳಾದ ಗಾಜಿನ ಕಾಕ್‌ಪಿಟ್ ಹಾಗೂ ಬಹು ಕಾರ್ಯಗಳ ಡಿಸ್‌ಪ್ಲೇ ವ್ಯವಸ್ಥೆಗಳನ್ನು ಹೊಂದಿದೆ.

– ಎಲ್‌ಯುಎಚ್ 127 ನಾಟ್ಸ್ (ಪ್ರತಿ ಗಂಟೆಗೆ 230 ಕಿಲೋಮೀಟರ್ ಅಥವಾ 146 ಮೈಲಿ) ವೇಗದಲ್ಲಿ ಚಲಿಸಬಲ್ಲದಾಗಿದ್ದು, 350 ಕಿಲೋಮೀಟರ್ (217 ಮೈಲಿ) ಗರಿಷ್ಠ ವ್ಯಾಪ್ತಿ ಹೊಂದಿದೆ.

-ಇದು 500 ಕೆಜಿ (1,102) ಪೌಂಡ್‌ಗಳಷ್ಟು ಗರಿಷ್ಠ ಭಾರ ಹೊತ್ತು ಚಲಿಸಬಲ್ಲದು.

ತುಮಕೂರಿನ ಹೆಲಿಕಾಪ್ಟರ್‌ ನಿರ್ಮಾಣ ಸ್ಥಾವರದ ದೃಶ್ಯ

೩೯೪ ಲೈಟ್‌ ಹೆಲಿಕಾಪ್ಟರ್‌ಗಳು ಬೇಕು
ಎಲ್‌ಯುಎಚ್ ಭಾರತೀಯ ಸೇನೆ ಮತ್ತು ವಾಯುಪಡೆಗಳಿಗೆ ಅತ್ಯಂತ ಅಗತ್ಯವಾಗಿದ್ದ 394 ಲೈಟ್ ಹೆಲಿಕಾಪ್ಟರ್‌ಗಳ ಅವಶ್ಯಕತೆಯನ್ನು ಪೂರೈಸಲಿದ್ದು, ಆ ಮೂಲಕ ಹಳೆಯದಾಗುತ್ತಿರುವ ಚೀತಾ (ಲಾಮಾ) ಹಾಗೂ ಚೇತಕ್ (ಅಲೌಟ್ಟೆ III) ಹೆಲಿಕಾಪ್ಟರ್‌ಗಳ ಬದಲಿಗೆ ಕಾರ್ಯನಿರ್ವಹಿಸಲಿವೆ. ಭೂಸೇನೆಗೆ 126 ಹೆಲಿಕಾಪ್ಟರ್‌ಗಳ ಅಗತ್ಯವಿದ್ದರೆ, ವಾಯು ಸೇನೆಗೆ 61 ಹೆಲಿಕಾಪ್ಟರ್‌ಗಳ ಅವಶ್ಯಕತೆಯಿದೆ.

ಮುಂದಿನ ದಿನಗಳಲ್ಲಿ ನಾಗರಿಕ ಬಳಕೆಗೂ ಲಭ್ಯ

ಮಿಲಿಟರಿ ಅವಶ್ಯಕತೆಗಳನ್ನು ಪೂರೈಸುವ ಈ ಹೆಲಿಕಾಪ್ಟರ್‌ಗಳು ನಾಗರಿಕ ಬಳಕೆಗೂ ಲಭ್ಯವಾಗಲಿವೆ. ಮೂಲಗಳ ಮಾಹಿತಿಯ ಪ್ರಕಾರ, ಎಚ್ಎಎಲ್ 600ಕ್ಕೂ ಹೆಚ್ಚು ಎಲ್‌ಯುಎಚ್‌ಗಳನ್ನು ನಾಗರಿಕ ಬಳಕೆಗೆ ಪೂರೈಸಲಿದೆ. ಆರಂಭದಲ್ಲಿ ಈ ಬಳಕೆದಾರರು ಭಾರತೀಯರೇ ಆಗಿರಲಿದ್ದು, ಪ್ರವಾಸೋದ್ಯಮ, ವಾಯು ಆಂಬ್ಯುಲೆನ್ಸ್, ಇತ್ಯಾದಿ ಕ್ಷೇತ್ರಗಳಲ್ಲಿ ಬಳಕೆಯಾಗಲಿವೆ. 6-7 ಆಸನಗಳ ಸಾಮರ್ಥ್ಯ ಹೊಂದಿರುವ ಈ ಹೆಲಿಕಾಪ್ಟರ್‌ಗಳನ್ನು ನಾಲ್ಕು ಆಸನಗಳ ವಿಐಪಿ ಹೆಲಿಕಾಪ್ಟರ್ ಆಗಿಯೂ ಬಳಸಬಹುದಾಗಿದೆ.

ಎಲ್‌ಯುಎಚ್ ಹೆಲಿಕಾಪ್ಟರ್‌ಗಳನ್ನು 200-250 ಗಂಟೆಗಳ ಹಾರಾಟ ನಡೆಸಿ, ಸರ್ವಿಸ್ ನಡೆಸಿದ ಬಳಿಕ ಅದರ ಪ್ರಮುಖ ಮೂರು ಘಟಕಗಳಾದ ಗೇರ್‌ಬಾಕ್ಸ್, ಇಂಜಿನ್ ಹಾಗೂ ರೋಟಾರ್‌ಗಳು ಅತ್ಯುತ್ತಮ ಸ್ಥಿತಿಯಲ್ಲಿದ್ದವು.

ಏಳೇ ನಿಮಿಷದಲ್ಲಿ ರೆಕ್ಕೆ ಮಡಚಿ ಇಡಬಹುದು!

ಎಲ್‌ಯುಎಚ್‌ನ ರೋಟರ್ ವ್ಯವಸ್ಥೆಯಲ್ಲಿ ಇದೇ ಮೊದಲ ಬಾರಿಗೆ ‘ಟೂ ಸೆಗ್ಮೆಂಟ್ ಬ್ಲೇಡ್’ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಇದು ಕಾಂಪ್ಯಾಕ್ಟ್ ಫೋಲ್ಡಿಂಗ್ ಆಯಾಮ ಒದಗಿಸುತ್ತದೆ. ಅಂದರೆ, ಏಳು ನಿಮಿಷಗಳ ಒಳಗೆ ಹೆಲಿಕಾಪ್ಟರ್ ರೆಕ್ಕೆಗಳನ್ನು ಮಡಚಬಹುದಾಗಿದ್ದು, ವಿಮಾನ ವಾಹಕ ನೌಕೆಗಳಲ್ಲಿ ಬಳಸಬಹುದಾಗಿದೆ.

ಎಲ್‌ಯುಎಚ್ ನಲ್ಲಿ ಎಮರ್ಜೆನ್ಸಿ ಫ್ಲೋಟಿಂಗ್ ಗೇರ್ (ಇಎಫ್‌ಜಿ) ಅಳವಡಿಸಲಾಗಿದ್ದು, ಇದು ತುರ್ತು ಪರಿಸ್ಥಿತಿಯಲ್ಲಿ ನೀರಿನ ಮೇಲೆ ಭೂಸ್ಪರ್ಶ ಮಾಡಲು ಅನುಕೂಲಕರವಾಗಿದೆ. ಅದರೊಡನೆ, ಇದು ಹೆಲಿಕಾಪ್ಟರ್ ನೀರಿನ ಮೇಲೆ ಕಾರ್ಯಾಚರಣೆ ನಡೆಸಲು ಪೂರಕವಾಗಿದೆ. ಇಎಫ್‌ಜಿ ಉದ್ದೇಶಪೂರ್ವಕವಾಗಿ ನೀರಿನ ಮೇಲೆ ಭೂಸ್ಪರ್ಶ ನಡೆಸುವ ‘ಫ್ಲೋಟ್ ಲ್ಯಾಂಡಿಂಗ್ ಗೇರ್’ ನಿಂದ ವಿಭಿನ್ನವಾಗಿದೆ.

ಇದರ ಹಿಂದಿರುವುದು ಯೋಧರ ಪತ್ನಿಯರ ಮನವಿ

ಭಾರತೀಯ ಸೇನಾ ಯೋಧರ ಪತ್ನಿಯರ ಸಂಘದ ಸದಸ್ಯೆಯರು ಪ್ರಧಾನಿ ನರೇಂದ್ರ ಮೋದಿಯವರ ಬಳಿ ಹಳೆಯದಾಗಿರುವ ಚೀತಾ ಮತ್ತು ಚೇತಕ್ ಹೆಲಿಕಾಪ್ಟರ್‌ಗಳ ಬಳಕೆಯ ಮೂಲಕ ಸೇನೆ ತನ್ನ ಯೋಧರನ್ನು ಬಲಿ ಕೊಡುತ್ತಿದೆ ಎಂದಿದ್ದರು.

ತಾವು ಬರೆದ ಪತ್ರದಲ್ಲಿ ಇಂಡಿಯನ್ ಆರ್ಮಿ ವೈವ್ಸ್ ಅಜಿಟೇಷನ್ ಗ್ರೂಪ್ ಸದಸ್ಯೆಯರು 31 ಮಿಲಿಟರಿ ಪೈಲಟ್‌ಗಳು 2017ರ ಬಳಿಕ ಪ್ರಾಣಾರ್ಪಣೆ ಮಾಡಿದ್ದಾರೆ. ದುರದೃಷ್ಟವಶಾತ್ ಇವರು ಯಾರೂ ಶತ್ರುಗಳ ದಾಳಿಯಿಂದ ಬಲಿಯಾಗಿಲ್ಲ. ಬದಲಿಗೆ ಚೀತಾ ಮತ್ತು ಚೇತಕ್ ಹೆಲಿಕಾಪ್ಟರ್‌ಗಳ ಬಳಕೆಯ ವೇಳೆ ನಡೆದ ಅಪಘಾತದಲ್ಲಿ ಬಲಿಯಾಗಿದ್ದಾರೆ ಎಂದಿದ್ದಾರೆ.

ಚೀತಾ ಮತ್ತು ಚೇತಕ್ ಹೆಲಿಕಾಪ್ಟರ್‌ಗಳು 1960ರ ಕಾಲದ ವಿನ್ಯಾಸ ಹೊಂದಿದ್ದು, ಅದೇ ವಿನ್ಯಾಸದ ಆಧಾರದಲ್ಲಿ ನಿರ್ಮಾಣಗೊಳ್ಳುತ್ತಿವೆ. ಇಂದಿನ ಪರಿಸ್ಥಿತಿಗೆ ಹಳತಾಗಿರುವ ಈ ಮಾದರಿಯ 400 ಹೆಲಿಕಾಪ್ಟರ್‌ಗಳು ಭಾರತದಲ್ಲಿ ಕಾರ್ಯಾಚರಿಸುತ್ತಿವೆ. ಅವುಗಳ ಬದಲಿಗೆ ಸೇನೆ ನೂತನ ಎಲ್‌ಯುಎಚ್ ಗಳನ್ನು ಪಡೆದುಕೊಳ್ಳಲಿದೆ.

ಹೆಚ್ಚಲಿದೆ ಉದ್ಯೋಗಾವಕಾಶಗಳು

ತುಮಕೂರು ಜಿಲ್ಲೆಯಲ್ಲಿ 7 ಇಂಜಿನಿಯರಿಂಗ್ ಕಾಲೇಜುಗಳು, 60 ಐಟಿಐಗಳು, ಹಾಗೂ 16 ಪಾಲಿಟೆಕ್ನಿಕ್ ಕಾಲೇಜುಗಳಿವೆ. ಎಚ್ಎಎಲ್‌ನಲ್ಲಿ ಉದ್ಯೋಗಾವಕಾಶಗಳನ್ನು ಪಡೆಯಲು ಪದವಿ ಪ್ರಮಾಣ ಪತ್ರಕ್ಕಿಂತಲೂ ಕೌಶಲ್ಯ ಹೆಚ್ಚು ಮುಖ್ಯವಾಗುತ್ತದೆ. ಆದ್ದರಿಂದ ಇಂಜಿನಿಯರಿಂಗ್ ಪದವಿ ಪಡೆದಿರುವ ವಿದ್ಯಾರ್ಥಿಗಳಿಗೆ ಅಪ್ರೆಂಟಿಸ್ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಈ ತರಬೇತಿ ಪಡೆದ ಬಳಿಕ, ರಾಷ್ಟ್ರ ಮಟ್ಟದಲ್ಲಿ ಪರೀಕ್ಷೆಯನ್ನು ಎದುರಿಸಿ, ಅವರು ಎಚ್ಎಎಲ್‌ನಲ್ಲಿ ಉದ್ಯೋಗ ಪಡೆಯಬಹುದು.

ಪಾಲಿಟೆಕ್ನಿಕ್ ವಿದ್ಯಾರ್ಥಿಗಳೂ ಇದೇ ಮಾದರಿಯನ್ನು ಅನುಸರಿಸಿ ಉದ್ಯೋಗ ಪಡೆಯಬೇಕಾಗುತ್ತದೆ. ಅದೇ ರೀತಿ ಐಟಿಐ ವಿದ್ಯಾರ್ಥಿಗಳಿಗೂ ಅವಕಾಶ ಸೃಷ್ಟಿಸಲಾಗುತ್ತಿದೆ. ಒಟ್ಟಿನಲ್ಲಿ ಈ ತರಬೇತಿ ಪಡೆದವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರಸ್ತುತ ಟಾಟಾ ಟೆಕ್ನಾಲಜಿ ಸಂಸ್ಥೆ ಏಳು ಐಟಿಐಗಳೊಡನೆ ಸಹಯೋಗ ಹೊಂದಿ, ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ.

ಎಚ್ಎಎಲ್‌ ಚಳ್ಳಕೆರೆಯಲ್ಲಿ ಈಗಾಗಲೇ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಜೊತೆಗೂಡಿ, 75,000 ಚದರ ಅಡಿಗಳ ಕಟ್ಟಡ ನಿರ್ಮಾಣಗೊಳಿಸಿ, 250 ಜನರಿಗೆ ಏರೋಸ್ಪೇಸ್ ಮತ್ತು ಅಲೈಡ್ ಸೇವೆಗಳ ತರಬೇತಿ ಒದಗಿಸುತ್ತಿದೆ. ಈ ತರಬೇತಿಯೂ ಉದ್ಯೋಗಾವಕಾಶಗಳನ್ನು ಪಡೆಯಲು ಅನುಕೂಲಕರವಾಗಿದೆ.

ಗುಬ್ಬಿಯಲ್ಲಿ ೪೦೦೦ ಜನರಿಗೆ ಉದ್ಯೋಗ

ಗುಬ್ಬಿಯ ಹೆಲಿಕಾಪ್ಟರ್ ಘಟಕದಿಂದ ನೇರವಾಗಿ 4,000 ಜನರಿಗೆ ಉದ್ಯೋಗ ಲಭ್ಯವಾಗಲಿದೆ ಎನ್ನಲಾಗುತ್ತಿದೆ. ಗಮನಿಸಬೇಕಾದ ಅಂಶವೆಂದರೆ, 4,000 ಅತಿಸಣ್ಣ ಉದ್ಯಮಗಳು, 700 ಸಣ್ಣ ಉದ್ಯಮಗಳು ಹಾಗೂ 7 ಮಧ್ಯಮ ಗಾತ್ರದ ಉದ್ಯಮಗಳಿವೆ. ಈ ಉದ್ಯಮಗಳಲ್ಲಿ ಎಚ್ಎಎಲ್‌ಗೆ ಅಗತ್ಯವಿರುವ ಉತ್ಪಾದನೆ ನಡೆಸುವ ಸಂಸ್ಥೆಗಳು ಹೆಚ್ಚಿನ ಉತ್ಪಾದನೆ ಆರಂಭಿಸುತ್ತವೆ. ಆ ಮೂಲಕವೂ ಪರೋಕ್ಷವಾಗಿ ಉದ್ಯೋಗ ಸೃಷ್ಟಿಯಾಗುತ್ತದೆ. ಜೊತೆಗೆ ವಸಂತ ನರಸಾಪುರದಲ್ಲಿ ನಾಲ್ಕನೇ ಹಂತದ ಅಭಿವೃದ್ಧಿಯಾಗುತ್ತಿದ್ದು, ಅಲ್ಲೂ ಎಚ್ಎಎಲ್‌ನ್ನು ಗಮನದಲ್ಲಿಟ್ಟುಕೊಂಡು 3-4,000 ಉದ್ಯಮಗಳು ಬರಲಿದ್ದು, ಉದ್ಯೋಗ ಸೃಷ್ಟಿಯಾಗಲಿದೆ.

ಹೀಗೆ ಉದ್ಯೋಗ ಸೃಷ್ಟಿ ಹೆಚ್ಚಾದಾಗ, ಆ ಹೆಚ್ಚಿನ ಜನರಿಗೆ ಪೂರಕ ಸೇವೆಗಳಾದ ಟ್ಯಾಕ್ಸಿ, ಹೋಟೆಲ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮಗಳೂ ಬೆಳೆಯುತ್ತವೆ. ಆ ಮೂಲಕ ತುಮಕೂರು ಮತ್ತು ಗುಬ್ಬಿ ಸುತ್ತಮುತ್ತಲಿನ ಪ್ರದೇಶಗಳು ಅಭಿವೃದ್ಧಿಯಾಗುತ್ತವೆ.

ಇದನ್ನೂ ಓದಿ : India energy week 2023: ಪರಿಸರಕ್ಕೆ ಹಾನಿ ಮಾಡುವ ಪ್ಲಾಸ್ಟಿಕ್ ಬಾಟಲಿಗಳಿಂದ ಬಟ್ಟೆ! ಹೇಗೆ ತಯಾರಿಸುತ್ತಾರೆ?

Exit mobile version