Site icon Vistara News

karnataka budget 2023 : ಉಪನಗರ ರೈಲಿಗೆ ವೇಗ, ನಗರದ ಸಾರಿಗೆ ಸಮಸ್ಯೆಗೆ ವೈಜ್ಞಾನಿಕ ಪರಿಹಾರ

Bangalore

#image_title

ಬೆಂಗಳೂರು : ಬೆಂಗಳೂರು ನಿವಾಸಿಗಳ ಬಹುದಿನಗಳ ಬೇಡಿಕೆಯಾದ ಬೆಂಗಳೂರು ಉಪನಗರ ರೈಲ್ವೆ ಯೋಜನೆಗೆ (BSRP) ರಾಜ್ಯ ಬಜೆಟ್​ನಲ್ಲಿ (karnataka budget 2023) ಪುಷ್ಟಿ ನೀಡಲಾಗಿದೆ. ರಾಜ್ಯ ಸರ್ಕಾರ ಮತ್ತು ರೈಲ್ವೆ ಮಂತ್ರಾಲಯವು 15,767 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಹಸಿರು ನಿಶಾನೆ ನೀಡಿವೆ.

ಯೋಜನೆಯ ಮೊದಲನೇ ಹಂತದ ಕಾಮಗಾರಿಗಳು ಪ್ರಗತಿಯಲ್ಲಿದ್ದು, 2024-25ನೇ ವರ್ಷದಲ್ಲಿ ಮೊದಲ ಹಂತ ಪೂರ್ಣಗೊಳ್ಳಲಿದೆ. ಈ ವರ್ಷದಲ್ಲಿ ಕೇಂದ್ರ ಸರ್ಕಾರದಿಂದ 1,350 ಕೋಟಿ ರೂಪಾಯಿ ಹಾಗೂ ರಾಜ್ಯ ಸರ್ಕಾರದಿಂದ 1,000 ಕೋಟಿ ರೂಪಾಯಿ ಅನುದಾನ ದೊರೆಯಲಿದೆ.

ಬೆಂಗಳೂರು ಉಪನಗರ ರೈಲು ಯೋಜನೆಯ ಚಿಕ್ಕಬಾಣಾವರ ಮತ್ತು ಬೈಯಪ್ಪನಹಳ್ಳಿ ನಡುವಿನ ಕಾರಿಡಾರ್-2ರ ವಯಾ-ಡಕ್ಟ್‌ ಕಾಮಗಾರಿಗಳಿಗೆ 860 ಕೋಟಿ ರೂ. ಮೊತ್ತಕ್ಕೆ ಕಾರ್ಯಾದೇಶ ನೀಡಲಾಗಿದೆ ಎಂದ ಬಜೆಟ್​ನಲ್ಲಿ ಘೋಷಿಸಲಾಯಿತು. ಅದೇ ರೀತಿ ದೇಶದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ಮಹಾನಗರದ ಸಾರಿಗೆ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಲು ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ರಚಿಸಲಾಗಿದೆ.

ಕೆರೆಗಳಿಗೆ Sluice Gate

ಬೆಂಗಳೂರಿನಲ್ಲಿ ಉಂಟಾಗುವ ಪ್ರವಾಹ ಪರಿಸ್ಥಿತಿ ನಿಯಂತ್ರಿಸಲು 3,000 ಕೋಟಿ ರೂಪಾಯಿಗಳ ಯೋಜನೆ ರೂಪಿಸಲಾಗಿದೆ ಈ ಯೋಜನೆಯಡಿಯಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಿಸಲು ಎಲ್ಲಾ ಕೆರೆಗಳಿಗೆ
Sluice Gateಗಳನ್ನು ಅಳವಡಿಸಲಾಗುವುದು. ನೀರಿನ ಹರಿವಿನ ವೇಗ ಮತ್ತು ಪ್ರಮಾಣ ನಿಯಂತ್ರಿಸಲು ಅನುಕೂಲವಾಗುವುದು ಎಂದು ಬಜೆಟ್​ನಲ್ಲಿ ಸಿಎಂ ಬೊಮ್ಮಾಯಿ ಹೇಳಿದರು.

ಕಾವೇರಿ ನೀರು ಸರಬರಾಜು ಯೋಜನೆಯ 5ನೇ ಹಂತದ ಕಾಮಗಾರಿಗಳನ್ನು 5,550 ಕೋಟಿ ರೂ. ಅಂದಾಜು ವೆಚ್ಚದಲ್ಲಿ ತೆಗೆದುಕೊಳ್ಳಲಾಗಿದ್ದು, 2023-24ನೇ ಸಾಲಿನಲ್ಲಿ ಕಾಮಗಾರಿ ಪೂರ್ಣಗೊಳ್ಳಿದೆ. 775 ಎಂ.ಎಲ್‌.ಡಿ ಸಾಮರ್ಥ್ಯ ಹೊಂದಿರುವ ಈ ಯೋಜನೆ ಪೂರ್ಣಗೊಳಿಸುವುದರಿಂದ ನಗರದ 50 ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರು ದೊರೆಯಲಿದೆ.

ಬಿಬಿಎಂಪಿ ವ್ಯಾಪ್ತಿಯ 110 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುವ ಯೋಜನೆಯ ಎರಡನೇ ಹಂತವನ್ನು ಅನುಷ್ಠಾನಗೊಳಿಸಲು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ರಾಜ್ಯ ಸರ್ಕಾರದ ವತಿಯಿಂದ 200 ಕೋಟಿ ರೂ. ಆರ್ಥಿಕ ನೆರವು ದೊರೆಯಲಿದೆ.

ತ್ಯಾಜ್ಯ ನೀರು ಸಂಸ್ಕರಣೆ

ಬೆಂಗಳೂರು ನಗರದಲ್ಲಿ 1,850 ಎಂ.ಎಲ್.ಡಿ. ತ್ಯಾಜ್ಯ ನೀರು ಉತ್ಪತ್ತಿಯಾಗುತ್ತಿದ್ದು, ಇದರಲ್ಲಿ 1,500 ಎಂಎಲ್​ಡಿ. ತ್ಯಾಜ್ಯ ನೀರಿನ ಸಂಸ್ಕರಣಾ ಸಾಮರ್ಥ್ಯ ಸೃಜಿಸಲಾಗಿದೆ. ಹೆಚ್ಚುವರಿಯಾಗಿ 350 ಎಂಎಲ್.ಡಿ. ಸಾಮರ್ಥ್ಯವನ್ನು ಒದಗಿಸುವುದರೊಂದಿಗೆ ಸಂಪೂರ್ಣ ತ್ಯಾಜ್ಯ ನೀರನ್ನು ಸಂಸ್ಕರಿಸಲು ಯೋಜನೆ ರೂಪಿಸಲಾಗಿದೆ.

ಬೆಂಗಳೂರು ನಗರದಲ್ಲಿ ಉತ್ಪಾದನೆಯಾಗುವ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಒಂದೇ ವಾಹನದಲ್ಲಿ ಹಸಿ ಕಸ ಹಾಗೂ ಒಣ ಕಸ ಸಂಗ್ರಹಿಸುವ ವಿನ್ಯಾಸದ ಆಟೋ ಟಿಪ್ಪರುಗಳು ಹಾಗೂ ಕಾಂಪಾಕ್ಟರುಗಳು ಕಾರ್ಯಾಚರಣೆ ಮಾಡಲಿವೆ. ಆಯಾ ವಾರ್ಡ್‌ಗಳಲ್ಲಿಯೇ ತ್ಯಾಜ್ಯ ಸಂಸ್ಕರಣೆ ಮಾಡಲು ಪ್ರತಿ ವಾರ್ಡ್‌ಗೆ ಒಂದರಂತೆ ಆಧುನಿಕ ತಂತ್ರಜ್ಞಾನ ಆಧಾರಿತ ವಾಸನೆರಹಿತ ತ್ಯಾಜ್ಯ ಸಂಸ್ಕರಣಾ ಕೇಂದ್ರಗಳು ಸ್ಥಾಪನೆಯಾಗಲಿವೆ.

ಇದನ್ನೂ ಓದಿ : karnataka budget 2023 : ಬೆಂಗಳೂರು ಸಮಗ್ರ ಅಭಿವೃದ್ಧಿಗೆ ಬಜೆಟ್​ನಲ್ಲಿ ಹಲವು ಯೋಜನೆ

ಬೆಂಗಳೂರಿನಲ್ಲಿ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆಗಳನ್ನು ದೊರಕಿಸುವುದು ಸರ್ಕಾರದ ಆದ್ಯತೆಯಾಗಿದೆ. ಈ ಉದ್ದೇಶಕ್ಕಾಗಿ 2022-23 ನೇ ಸಾಲಿನಲ್ಲಿ 243 ವಾರ್ಡ್‌ಗಳಲ್ಲಿ ನಮ್ಮ ಕ್ಲಿನಿಕ್‌ ಮತ್ತು 27 ಸ್ಮಾರ್ಟ್‌ ವರ್ಚುಯಲ್ ಕ್ಲಿನಿಕ್‌ (Smart Virtual Clinic) ಗಳಿಗೆ ಅನುಮೋದನೆ ನೀಡಲಾಗಿದೆ.

Exit mobile version