ಶಿವಮೊಗ್ಗ: ಕೂಡಲಿ ಶೃಂಗೇರಿ ಮಹಾ ಸಂಸ್ಥಾನದ 72ನೇ ಪೀಠಾಧಿಪತಿ ಶ್ರೀ ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮಿಗಳು (Sri Abhinava Shankara Bharathi Swamiji) ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಭೇಟಿ ನೀಡುತ್ತಿದ್ದು, ಡಿಸೆಂಬರ್ 20ರಿಂದ 31ರವರೆಗೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ಕೂಡಲಿ ಮಠದ ಅನುಯಾಯಿಗಳ ಮನೆಗಳಿಗೆ ಶ್ರೀಗಳು ಭೇಟಿ ನೀಡಲಿದ್ದಾರೆ.
ಸುಮಾರು ಎರಡೂವರೆ ಸಾವಿರ ವರ್ಷಗಳ ಹಿಂದೆ ಆದಿ ಶಂಕರಾಚಾರ್ಯರರಿಂದ ಆರಂಭವಾದ ಪೀಠ ಪರಂಪರೆ ಹೊಂದಿರುವ ಕೂಡಲಿ ಶೃಂಗೇರಿ ಮಹಾ ಸಂಸ್ಥಾನದ 72ನೇ ಪೀಠಾಧಿಪತಿಗಳಾದ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ ಅವರು ಮೇ ತಿಂಗಳಿನಲ್ಲಿ ಸನ್ಯಾಸ ಸ್ವೀಕಾರ ಮಾಡಿದ್ದರು. ಸ್ವಾಮಿಗಳ ಈ ಪ್ರವಾಸವು ಐತಿಹಾಸಿಕ ಮಹತ್ವವನ್ನು ಹೊಂದಿದೆ.
ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಹಾಗೂ ಹಾಗೂ ತೆಲಂಗಾಣದಿಂದ ಬೆಂಗಳೂರಿಗೆ ವಲಸೆ ಬಂದು ನೆಲೆಸಿರುವ ಕೂಡಲಿ ಮಠದ ಅನುಯಾಯಿ ಕುಟುಂಬಗಳು ದಶಕಗಳಿಂದ ಕೂಡಲಿ ಸ್ವಾಮಿಗಳ ಬೆಂಗಳೂರು ಭೇಟಿಗಾಗಿ ಮಾಡಿದ ನಿರೀಕ್ಷೆ ಈಗ ಫಲ ಕೊಟ್ಟಿದೆ.
ಡಿಸೆಂಬರ್ 19 ರಂದು ಸಂಜೆ ರಾಗಿ ಗುಡ್ಡದ ಆಂಜನೇಯ ದೇವಸ್ಥಾನದ ಬಳಿ ಪುರಪ್ರವೇಶದ ಅಂಗವಾಗಿ ಪೂರ್ಣಕುಂಭ ಸ್ವಾಗತ ಹಾಗೂ ಧೂಳಿ ಪಾದ ಪೂಜೆ ನೆರವೇರಲಿದೆ. ಡಿ. 20 ರಂದು ರಾಗಿಗುಡ್ಡದ ಹನುಮಜ್ಜಯಂತಿ ಉತ್ಸವ ಹಾಗೂ ಸಹಸ್ರ ಕುಂಭಾಭಿಷೇಕ ಕಾರ್ಯಕ್ರಮವನ್ನು ಸ್ವಾಮಿಗಳು ಉದ್ಘಾಟಿಸಿ, ಅನೇಕ ವಿದ್ವಾಂಸರನ್ನು ಸನ್ಮಾನಿಸಲಿದ್ದಾರೆ.
ಡಿ. 22 ರಂದು ಗೀತಾ ಜಯಂತಿ ಪ್ರಯುಕ್ತ ಎನ್ ಆರ್ ಕಾಲೋನಿ ರಾಮಮಂದಿರದಲ್ಲಿ ಸಾಮೂಹಿಕ ಭಗವದ್ಗೀತಾ ಪಾರಾಯಣ ಯಜ್ಞವನ್ನು ವಿಶ್ವ ಹಿಂದೂ ಪರಿಷತ್ ಸಹಯೋಗದಲ್ಲಿ ಆಯೋಜಿಸಲಾಗಿದೆ. ಡಿ. 24 ರಂದು ಮುಂಜಾನೆ ಮಿಥಿಕ್ ಸೋಸೈಟಿಯಲ್ಲಿ ಸ್ವಾಮಿಗಳ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿತವಾಗಿದೆ. ಡಿ. 25 ಮುಂಜಾನೆ ಎಜಿಎಸ್ ಲೇಔಟ್ ನಲ್ಲಿರುವ ಸಿದ್ಧೇಶ್ವಾರಿ ರಾಜ ರಾಜೇಶ್ವರಿ ದೇವಸ್ಥಾನದಲ್ಲಿ ಸಂಸ್ಥಾನದ ಪೂಜೆ ನಡೆಯಲಿದೆ.
ಇದನ್ನೂ ಓದಿ | ತಾತಯ್ಯ ತತ್ವಾಮೃತಂ: ಉತ್ತಮ ಗುರುಬೋಧೆಯ ಫಲ
ಮೇ ತಿಂಗಳಿನಲ್ಲಿ ನಡೆದ ಶ್ರೀಗಳ ಸನ್ಯಾಸ ಸ್ವೀಕಾರ ಹಾಗೂ ಕಳೆದ ಆರೇಳು ತಿಂಗಳಿನಲ್ಲಿ ಮಠದ ವತಿಯಿಂದ ಹೊಸ ಗುರುಕುಲದ ಸ್ಥಾಪನೆ, ಅದ್ಧೂರಿ ದಸರಾ ಆಚರಣೆ ಮೊದಲಾದ ಚಟುವಟಿಕೆಗಳಿಂದ ಕೂಡಲಿ ಮಠದ ಭಕ್ತರಲ್ಲಿ ಹೊಸ ಉತ್ಸಾಹ ಮೂಡಿದೆ. ಕರ್ನಾಟಕ ಇತಿಹಾಸದಲ್ಲಿ ಮಹತ್ವಪೂರ್ಣ ಪಾತ್ರ ವಹಿಸಿರುವ ಕೂಡಲೀ ಸಂಸ್ಥಾನದ ನೂತನ ಯತಿಗಳು ರಾಜಧಾನಿಗೆ ಬರುವುದು ಕೂಡ ಐತಿಹಾಸಿಕ ಘಟನೆಯೇ ಆಗಿದೆ.
ಸ್ವಾಮಿಗಳ ವಾಸ್ತವ್ಯದ ವಿಳಾಸ: 690ಡಿ, 14ನೇ ಮೇನ್, ಜೆಪಿ ನಗರ, 2ನೇ ಫೇಸ್. ವಿವರಗಳಿಗೆ ವಾಟ್ಸ್‌ಆ್ಯಪ್ ಮೂಲಕ ಮಠದ ಕಾರ್ಯಾಲಯದ ಮೊ. 9731731154 ಸಂಪರ್ಕಿಸಬಹುದು.