ಬೆಂಗಳೂರು: ವಿಜ್ಞಾನ ಮತ್ತು ತಂತ್ರಜ್ಞಾನದ ನಾಗಾಲೋಟದಲ್ಲಿ ಮನುಷ್ಯತ್ವ ಮರೆಯಬಾರದು. ಇಲ್ಲದಿದ್ದರೆ ಮಾನವನ ಅಸ್ತಿತ್ವಕ್ಕೆ ಧಕ್ಕೆಯಾಗುವ ಪರಿಸ್ಥಿತಿ ನಿರ್ಮಾಣವಾಗಬಹುದು. ಹೀಗಾಗಿ ಜನರಲ್ಲಿ ಮೌಲ್ಯಗಳನ್ನು ಬಿತ್ತುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ ವಿಸ್ತಾರ ನ್ಯೂಸ್ ಚಾನೆಲ್ ಲೋಕಾರ್ಪಣೆ ಹಾಗೂ ವಿಸ್ತಾರ ಕಾಯಕ ಯೋಗಿ ಪುರಸ್ಕಾರ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು.
ಇದನ್ನೂ ಓದಿ | Vistara News Launch | ಖ್ಯಾತ ವರ್ಣಚಿತ್ರ ಕಲಾವಿದ ಡಾ.ಬಿ.ಕೆ.ಎಸ್. ವರ್ಮರಿಗೆ ಕಾಯಕ ಯೋಗಿ ಪುರಸ್ಕಾರ
ಆಧುನಿಕತೆ, ಕಂಪ್ಯೂಟರೀಕರಣಕ್ಕೆ ತೆರೆದುಕೊಳ್ಳುತ್ತಿದ್ದ ನನ್ನ ಬಾಲ್ಯದ ಕಾಲಘಟ್ಟದಲ್ಲಿ ಒಬ್ಬ ವ್ಯಂಗ್ಯ ಚಿತ್ರಕಾರ ಒಂದು ವ್ಯಂಗ್ಯಚಿತ್ರವನ್ನು ಬರೆದಿದ್ದ. ಅದರಲ್ಲಿ ಒಂದು ರೋಬೋಟ್ ಟೀಚರ್, ರೋಬೋಟ್ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಾ, ಇತಿಹಾಸ ಹೇಳುತ್ತದೆ, 500 ವರ್ಷಗಳ ಹಿಂದೆ ಭೂಮಿಯ ಮೇಲೆ ಮನುಷ್ಯರು ವಾಸವಾಗಿದ್ದರಂತೆ. ಇದು ನಂಬಲು ಸಾಧ್ಯವೇ ಎಂದು ಪ್ರಶ್ನೆ ಮಾಡಿತ್ತು. ಇವತ್ತು ರೋಬೋಟ್‌ಗಳೇ ಎಲ್ಲ ಕಡೆ ತುಂಬಿರುವ ಸಂದರ್ಭದಲ್ಲಿ ಅಂದು ರೋಬೋಟ್ ಟೀಚರ್ ಹೇಳಿದಂತೆ, ಈಗಿನ ವಿಜ್ಞಾನ ಮತ್ತು ತಂತ್ರಜ್ಞಾನದ ಕಾಲದಲ್ಲಿ ಒಳಗಿನ ಮನುಷ್ಯತ್ವ ಮರೆತಿದ್ದೇ ಆದರೆ ಯಾವ ಸ್ಥಿತಿಗೆ ತಲುಪಬಹುದು? ಕೃತಕ ಬುದ್ಧಿ, ಮಷಿನ್ ಲರ್ನಿಂಗ್, ಬಿಗ್ ಡಾಟಾ ಮತ್ತಿತರ ಅಂಶಗಳೊಂದಿಗೆ ಮನುಷ್ಯರನ್ನು ಹೋಲಿಕೆ ಮಾಡಿ ನೋಡಿದರೆ ಅಂದು ದಿನಪತ್ರಿಕೆಯಲ್ಲಿ ಪ್ರಕಟವಾದ ವ್ಯಂಗ್ಯ ಚಿತ್ರ ನಿಜವಾಗಬಹುದಾ ಎಂಬ ಭಯ ಕಾಡುತ್ತದೆ ಎಂದು ಹೇಳಿದರು.
ಅಂತಹ ಭಯ, ಆತಂಕಗಳು ಸುಳ್ಳಾಗಬೇಕೆಂದರೆ ಮನುಷ್ಯರಲ್ಲಿ ಮೌಲ್ಯಗಳನ್ನು ತುಂಬುವ ಕೆಲಸ ಮಾಧ್ಯಮಗಳ ಮೂಲಕ ಆಗಬೇಕು. ಹೀಗಾದಲ್ಲಿ ಹ್ಯೂಮನ್ ಎಂಬ ಹೆಸರಿನಿಂದ ವ್ಯುತ್ಪತ್ತಿಯಾಗಿರುವ ಹ್ಯೂಮನ್ ಬೀಯಿಂಗ್ ಪದಕ್ಕೆ ಅರ್ಥ ಬರುತ್ತದೆ. ನಾವಿರುವ ಜಾಗಕ್ಕೆ ಸುದ್ದಿಗಳು ಬರುತ್ತಿರುವ ಸಂದರ್ಭದಲ್ಲಿ, ದೃಶ್ಯ ಮಾಧ್ಯಮಗಳು ಬಹಳ ಜತನವಾಗಿ, ಜಾಗ್ರತೆಯಿಂದ ಸುದ್ದಿಗಳನ್ನು ತಲುಪಿಸಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ | Vistara News Launch | ಅಗರಬತ್ತಿಗೆ ಹೊಸ ರೂಪ ನೀಡಿದ ಅರ್ಜುನ; ಕಾಯಕ ಯೋಗಿ ಪ್ರಶಸ್ತಿ ಪ್ರದಾನ