Site icon Vistara News

ಯೋಗ್ಯತೆಯ ಅರಿವಿರುವವರು ಜೀವನದಲ್ಲಿ ಎಡವಿ ಬೀಳುವುದಿಲ್ಲ: ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ

Mangalore famous doctor Dr Venugopal D couple donated one lakh rupees to Sri Vishnugupta Vishwavidyapeeth

ಗೋಕರ್ಣ: ಯೋಗ್ಯತೆ ಸಾಧನೆಯಿಂದ ಬರುವಂಥದ್ದು, ಯೋಗ್ಯತೆ ಸಂಪಾದಿಸಬೇಕಾದರೆ ಸತತ ಪರಿಶ್ರಮ ಬೇಕು. ಕೇವಲ ಯೋಗ್ಯತೆ ಇದ್ದರೆ ಸಾಲದು, ಇದರ ಜತೆಗೆ ಯೋಗ (Yoga) ಕೂಡಿಬರಲು ಕಾಲವನ್ನು ಕಾಯಬೇಕು. ಆ ತಾಳ್ಮೆ,(Patience) ಸಂಯಮ, ವಿವೇಕ, ವ್ಯಕ್ತಿಯನ್ನು ಉನ್ನತಿಗೆ ಏರಿಸುತ್ತದೆ ಎಂದು ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ನುಡಿದರು.

ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಶನಿವಾರ ಶ್ರೀಸಂದೇಶ ನೀಡಿದ ಸ್ವಾಮೀಜಿ, “ಯೋಗ- ಯೋಗ್ಯತೆ ಎರಡೂ ಭಿನ್ನ. ಯೋಗ್ಯತೆ ಇಲ್ಲದೆ ಲಭಿಸುವ ಯೋಗ ವಿನಾಶಕ್ಕೆ ಕಾರಣವಾದೀತು. ಯೋಗ್ಯತೆಯ ಅರಿವು ಇರುವವರು ಜೀವನದಲ್ಲಿ ಎಂದಿಗೂ ಎಡವಿ ಬೀಳುವುದಿಲ್ಲ. ಪ್ರತಿಯೊಬ್ಬರ ಯೋಗ್ಯತೆಯೂ ಬೇರೆ ಬೇರೆ ಕ್ಷೇತ್ರದಲ್ಲಿ ಇರುತ್ತದೆ. ಅವರವರ ಯೋಗ್ಯತೆಯನ್ನು ಅವರೇ ಗುರುತಿಸಿಕೊಳ್ಳುವ ವಿವೇಕ ಇರಬೇಕು” ಎಂದು ವಿಶ್ಲೇಷಿಸಿದರು.

ಇದನ್ನೂ ಓದಿ: RSS Baithak 2023 : 2025ರ ಶತಾಬ್ದಿ ನಿಮಿತ್ತ ದೇಶಾದ್ಯಂತ ಕಾರ್ಯವಿಸ್ತಾರಕ್ಕೆ ವೇಗ

ಯೋಗ್ಯತೆ ಇಲ್ಲದೇ ಒತ್ತಾಯಪೂರ್ವಕವಾಗಿ ಪಡೆಯುವ ಪ್ರಯತ್ನ ಮಾಡಿದರೆ ವಿನಾಶಕ್ಕೆ ದಾರಿಯಾಗುತ್ತದೆ ಎನ್ನುವುದಕ್ಕೆ ರಾವಣನೇ ನಿದರ್ಶನ. ನಮ್ಮದಲ್ಲ, ಬೇಡ, ಸಾಕು ಎನ್ನುವ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸುಂದರವಾಗುತ್ತದೆ. ಈ ಪಾಠ ರಾಮಾಯಣದಲ್ಲಿ ಹೆಜ್ಜೆ ಹೆಜ್ಜೆಗೂ ಸಿಗುತ್ತದೆ ಎಂದು ಹೇಳಿದರು.

ಚಾತುರ್ಮಾಸ್ಯ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ನೆರವೇರಿಸಲಾಗುತ್ತಿದ್ದು, ಪಿಯುಸಿ ಪರೀಕ್ಷೆ ಮತ್ತು ಬಿಎಸ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ದಕ್ಷಿಣ ಕನ್ನಡ ಜಿಲ್ಲೆ ಕಬಕದ ಕ್ಷಿತಿ ಕಶ್ಯಪ್ ಹಾಗೂ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಎಚ್.ವಿ.ವಿಶಾಲ್ ಅವರನ್ನು ಶ್ರೀಗಳು ಪುರಸ್ಕರಿಸಿದರು.

ಮಂಗಳೂರಿನ ಖ್ಯಾತ ವೈದ್ಯ ಡಾ.ವೇಣುಗೋಪಾಲ ಡಿ ದಂಪತಿ ಇದೇ ಸಂದರ್ಭದಲ್ಲಿ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕೆ ಒಂದು ಲಕ್ಷ ರೂಪಾಯಿಗಳ ದೇಣಿಗೆ ಸಮರ್ಪಿಸಿದರು.

ಯಲ್ಲಾಪುರ ಸಂಕಲ್ಪ ಟ್ರಸ್ಟ್‌ ನ ಪ್ರಮೋದ್ ಹೆಗಡೆ, ಭಾರತ ಪರಿಕ್ರಮ ಪಾದಯಾತ್ರೆ ನಡೆಸಿದ ಸೀತಾರಾಮ ಕೆದಿಲಾಯ ಅವರು ಈ ಸಂದರ್ಭದಲ್ಲಿ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.

ಇದನ್ನೂ ಓದಿ: ವಿಶ್ವಕಪ್ ಹೀರೊ ಈಗ ರಿಯಲ್ ಲೈಫ್ ಹೀರೊ; ಪ್ರವಾಹ ಸಂತ್ರಸ್ತರ ನೆರವಿಗೆ ನಿಂತ ಜೋಗಿಂದರ್ ಶರ್ಮಾ

ಈ ಸಂದರ್ಭದಲ್ಲಿ ಶ್ರೀಮಠದ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಚಾತುರ್ಮಾಸ್ಯ ಸಮಿತಿ ಕಾರ್ಯದರ್ಶಿ ಶ್ರೀಕಾಂತ ಪಂಡಿತ್ ಮತ್ತಿತರರು ಉಪಸ್ಥಿತರಿದ್ದರು.

Exit mobile version