Site icon Vistara News

Chennai Floods: ಚೆನ್ನೈನಲ್ಲಿ ನೆರೆ ಪೀಡಿತರಿಗೆ ನೆರವು ನೀಡಿದ ಶ್ರೀ ರಾಮಕೃಷ್ಣ ಸೇವಾಶ್ರಮ

Chennai Floods

ಚೆನ್ನೈ: ಮಿಚಾಂಗ್‌ ಚಂಡಮಾರುತದ ಪರಿಣಾಮ ಸುರಿದ ಭಾರಿ ಮಳೆಯಿಂದ ಚೆನ್ನೈ ಸೇರಿ ತಮಿಳುನಾಡಿನ ಹಲವು ಭಾಗಗಳಲ್ಲಿ ಪ್ರವಾಹ ಸೃಷ್ಟಿಯಾಗಿತ್ತು. ಇದರಿಂದ ಲಕ್ಷಾಂತರ ಜನ ಸಂಕಷ್ಟದಲ್ಲಿದ್ದು, ಹಲವು ಸಂಘ-ಸಂಸ್ಥೆಗಳು ನೆರೆ ಪರಿಹಾರ ಕಾರ್ಯ ಕೈಗೊಂಡಿವೆ. ಅದರಂತೆ ತುಮಕೂರು ಜಿಲ್ಲೆ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮವು(Sri Ramakrishna Sevashram), ಬೆಂಗಳೂರಿನ ಇನ್ಫೋಸಿಸ್ ಫೌಂಡೇಶನ್ ಸಹಕಾರದೊಂದಿಗೆ ನೆರೆ ಪೀಡಿತರಿಗೆ ನೆರವು ನೀಡುವ ಕಾರ್ಯದಲ್ಲಿ ನಿರತವಾಗಿದೆ.

ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜೀ ಮಹಾರಾಜ್ (Swami Japanandaji Maharaj) ಅವರ ನೇತೃತ್ವದಲ್ಲಿ ಚೆನ್ನೈ ಮಹಾನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ನೆರೆ ಪರಿಹಾರ ಕಾರ್ಯಕ್ರಮಗಳನ್ನು ಮುಗಿಸಿ, ಇದೀಗ ತಮಿಳುನಾಡಿನ ದಕ್ಷಿಣ ಭಾಗದಲ್ಲಿ ನೆರೆ ಪರಿಹಾರ ಒದಗಿಸುತ್ತಿದೆ. ಈ ನಿಟ್ಟಿನಲ್ಲಿ ಇನ್ಫೋಸಿಸ್ ಫೌಂಡೇಶನ್ ಸಹಕಾರದೊಂದಿಗೆ ಸರಿಸುಮಾರು 5,000 ಕುಟುಂಬಗಳಿಗೆ ತತ್ ಕ್ಷಣದ ಪರಿಹಾರ ಕಾರ್ಯವನ್ನು ಆರಂಭಿಸಲಾಗಿದೆ.

ಭಾರಿ ಮಳೆಯು 2023ರ ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ತಮಿಳುನಾಡಿನ ದಕ್ಷಿಣ ಭಾಗದ ತೂತುಕುಡಿ ಮತ್ತು ತಿರುನೆಲ್ವೇಲಿ ಮುಂತಾದ ಪ್ರದೇಶಗಳಲ್ಲಿ ಪ್ರಳಯ ಸ್ವರೂಪವನ್ನೇ ತಂದೊಡ್ಡಿದೆ. ಶ್ರೀರಾಮಕೃಷ್ಣ ಸೇವಾ ಶ್ರಮಕ್ಕೆ ಯಥಾ ಪ್ರಕಾರ ಅಲ್ಲಿಯ ಸಂಘಗಳು ಹಾಗೂ ಜನರ ಪರವಾಗಿ ಅನೇಕ ಮನವಿ ಪತ್ರಗಳು ಹಾಗೂ ಛಾಯಾಚಿತ್ರಗಳು ಬರತೊಡಗಿದವು. ಇದನ್ನು ಕಂಡ ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜರವರು ಎಂದಿನಂತೆ ತಮಿಳುನಾಡಿನಲ್ಲಿ ನೆರೆ ಪರಿಹಾರ ಕಾರ್ಯದಲ್ಲಿ ತೊಡಗಿ, ಸಂಕಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚಿದ್ದಾರೆ.

ಇದನ್ನೂ ಓದಿ | ವಿಸ್ತಾರ ಅಂಕಣ: ಕೇವಲ ದರೋಡೆಕೋರರಾಗಿದ್ದರೆ ಅಯೋಧ್ಯೆ ಮೇಲೆ ಏಕೆ 76 ಬಾರಿ ದಾಳಿ ಮಾಡುತ್ತಿದ್ದರು?

ಮೊದಲ ಹಂತವಾಗಿ ಪರಿಹಾರ ಸಾಮಗ್ರಿಗಳನ್ನು ಹೊಂದಿರುವ ಟ್ರಕ್ ಇದೀಗ ತೂತುಕುಡಿ ಹಾಗೂ ತಿರುನೆಲ್ವೇಲಿ ಪ್ರದೇಶಗಳಿಗೆ ಸಾಗುತ್ತಿವೆ. ಈ ಯೋಜನೆಗೆ ಸ್ಥಳೀಯ ಮದರ್ ತೆರೇಸಾ ಸ್ವಯಂಸೇವಾ ಸಂಸ್ಥೆ, ಲಯನ್ಸ್ ಕ್ಲಬ್‌ ಹಾಗೂ ಶ್ರೀ ರಾಮಕೃಷ್ಣ ಸೇವಾಶ್ರಮ ಪಾವಗಡದ ಸಂಯೋಜಕರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸ್ವಾಮೀಜಿಯವರು ಕೂಡ ನೆರೆ ಪೀಡಿತ ಸ್ಥಳಗಳಿಗೆ ಭೇಟಿ ನೀಡಿ ಜನರಿಗೆ ಸಾಂತ್ವನ ಹೇಳುತ್ತಿದ್ದಾರೆ.

ಸುಮಾರು 40 ವರ್ಷಗಳಿಂದ ಜನಪರ ಸೇವಾ ಯೋಜನೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಸ್ವಾಮಿ ಜಪಾನಂದಜೀ ಅವರು, ಪ್ರಕೃತಿಯ ವೈಪರೀತ್ಯದ ಸಂದರ್ಭದಲ್ಲಿ ಕಾರ್ಯನಿರ್ವಹಿಸಲು ನೈಪುಣ್ಯತೆಯನ್ನು ಪಡೆದಿದ್ದಾರೆ. ಇನ್ನು ಸಂಪೂರ್ಣ ಶ್ರದ್ಧೆ ಸೇವಾ ತತ್ಪರತೆ ಹಾಗೂ ಮತ್ತೆಲ್ಲದಕ್ಕಿಂತ ಮಿಗಿಲಾಗಿ ತಮಿಳುನಾಡಿನ ಲಯನ್ಸ್ ಕ್ಲಬ್ ಹಾಗೂ ಇನ್ಫೋಸಿಸ್ ಕಂಪನಿ ಮತ್ತು ಆಶ್ರಮದ ಸ್ವಯಂಸೇವಕರು ಸದಾ ಕಾರ್ಯನಿರ್ವಹಿಸಲು ತಮ್ಮನ್ನೇ ತಾವು ಸಮರ್ಪಿಸಿಕೊಂಡು ಸ್ವಾಮೀಜಿಗಳೊಂದಿಗೆ ಕೈಜೋಡಿಸಿದ್ದಾರೆ.

ಈ ನಿಟ್ಟಿನಲ್ಲಿ ಸರಿಸುಮಾರು 10 ಸಾವಿರ ಪರಿಹಾರ ಕಿಟ್‌ಗಳನ್ನು ತಯಾರಿಸಲು ಪಾವಗಡದ ಸದ್ಭಕ್ತರು ಅದರಲ್ಲಿಯೂ ಮಹಿಳಾ ಭಕ್ತರು, ಬ್ರೈಟ್ ಫ್ಯೂಚರ್ ವಿದ್ಯಾರ್ಥಿಗಳು, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಶ್ರೀ ವಾಜಪೇಯಿ ಶಾಲೆಯ ಮುಖ್ಯಸ್ಥರು ಹಾಗೂ ಅಧಿಕಾರಿಗಳು ಮತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಶ್ರೀ ರಾಮಕೃಷ್ಣ ಸೇವಾ ಶ್ರಮಕ್ಕೆ ತಮ್ಮ ಸಹಾಯ ಹಸ್ತವನ್ನು ನೀಡುತ್ತಿರುವುದು ಅತ್ಯಂತ ಪ್ರಶಂಸನೀಯ.

ನಿಜಕ್ಕೂ ಹೇಳಬೇಕಾದರೆ ಸ್ವಾಮಿ ವಿವೇಕಾನಂದರು ಬಯಸಿದ ಯುವ ಜನತೆ ನವ ಭಾರತ ನಿರ್ಮಾಣಕ್ಕೆ ತಮ್ಮ ಸಹಾಯವನ್ನು ಕರ್ತವ್ಯದ ಮನೋಭಾವನೆಯಿಂದ ಸಲ್ಲಿಸುತ್ತಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಲಕ್ಷಾಂತರ ಮಂದಿಗೆ ಸಹಾಯ ಹಸ್ತವನ್ನು ನೀಡಿದ್ದು ಇಲ್ಲಿ ಸ್ಮರಿಸಬಹುದಾಗಿದೆ. ಹಾಗೆಯೇ ಸುಮಾರು ಆರು ರಾಜ್ಯಗಳಲ್ಲಿ ಈ ತರನಾದ ಕಾರ್ಯಕ್ರಮಗಳನ್ನು ಪಾವಗಡದಂತಹ ಗ್ರಾಮಾಂತರ ಪ್ರದೇಶದಿಂದ ನಿರಂತರವಾಗಿ ನಡೆಸುತ್ತಿರುವುದು ನಿಜಕ್ಕೂ ಕರ್ನಾಟಕ ರಾಜ್ಯಕ್ಕೆ, ತುಮಕೂರು ಜಿಲ್ಲೆ ಹಾಗೂ ಪಾವಗಡ ತಾಲೂಕಿಗೆ ಅದ್ಭುತವಾದ ಕೀರ್ತಿಯನ್ನು ತಂದಂತಾಗಿದೆ.

ಈ ಯೋಜನೆಗಳು ಅಷ್ಟು ಸುಲಭವಾದದ್ದಲ್ಲ. ಕಾರಣ ಕೇವಲ ಹಣ ಮುಖ್ಯವಲ್ಲ. ಬದಲಾಗಿ ಕೈಗೊಳ್ಳುವ ಮನಸ್ಸು ಸದ್ಯ ಕಾರ್ಯ ತತ್ಪರತೆ, ಸಮರ್ಪಣಾ ಭಾವ ಹಾಗೂ ಪೂರ್ಣ ಮನಸ್ಸಿನಿಂದ ದೇಶ ಸೇವೆಗಾಗಿ ಮತ್ತು ಜೀವನದಲ್ಲಿ ಶಿವನನ್ನು ಕಾಣುವಂತಹ ಮಹತ್ತರವಾದ ಕಾರ್ಯವನ್ನು ಒಂದು ಬಾರಿ, ಎರಡು ಬಾರಿ ಅಲ್ಲ 40 ವರ್ಷಗಳನ್ನು ಕಂಡಿರುವ ಸ್ವಾಮೀಜಿಯವರ ಕಾರ್ಯ ತತ್ಪರತೆ ನಿಜಕ್ಕೂ ಕನ್ನಡ ನಾಡಿನ ಜನತೆಗೆ ಹೆಮ್ಮೆಯನ್ನು ತರುವಂತಿದೆ.

ಇದನ್ನೂ ಓದಿ | Raja Magra Column : ಮಕ್ಕಳಿಗಾಗಿ ಅಮರ ಕಥಾ ಲೋಕ ಸೃಷ್ಟಿಸಿದ ಅಂಕಲ್‌ ಪೈಗೆ ಮಕ್ಕಳೇ ಇರಲಿಲ್ಲ!

ಸ್ವಾಮೀಜಿಯವರು ಎಲ್ಲಿಯೇ ಸಂಚರಿಸಲಿ, ಅಲ್ಲಿಯ ಜನರು ಅದರಲ್ಲಿಯೂ ಗ್ರಾಮಾಂತರದ ಜನರು ಅವರನ್ನು ಪೂಜ್ಯ ದೃಷ್ಟಿಯಿಂದ ಕಂಡು ಸತ್ಕರಿಸುವುದನ್ನು ಸ್ವತಃ ಕಂಡಿರುವ ಅಧಿಕಾರಿಗಳು, ಪೊಲೀಸ್ ವರಿಷ್ಠರು ಹಾಗೂ ಇತರರು ಆಶ್ಚರ್ಯವನ್ನು ವ್ಯಕ್ತಪಡಿಸುತ್ತಾರೆ. ಆದರೆ ಪೂಜ್ಯ ಸ್ವಾಮೀಜಿಯವರು, ತಾವು ಸ್ವಾಮಿ ವಿವೇಕಾನಂದರ ನಿಷ್ಠಾವಂತ ಸೈನಿಕ ಹಾಗೂ ಸೇವಕ ಎಂದು ತಿಳಿಸುತ್ತಾರೆ. ತಮಿಳುನಾಡಿನಲ್ಲಿ ನೆರೆ ಪರಿಹಾರ ಕಾರ್ಯ ಜನವರಿ ತಿಂಗಳ ಅಂತ್ಯದವರೆಗೆ ನಡೆಯಲಿದೆ.

Exit mobile version