Site icon Vistara News

ಬದುಕು ಸಾರ್ಥಕವಾಗಲು ಸ್ವಯಂ ಅರಿವು ಮುಖ್ಯ: ಶ್ರೀ ಸಿದ್ಧಲಿಂಗ ಸ್ವಾಮೀಜಿ

siddhaganga swamiji

ಶಿವಮೊಗ್ಗ: ಬದುಕು ಸಾರ್ಥಕವಾಗಬೇಕಾದರೆ ನಮ್ಮನ್ನು ನಾವು ಅರಿತುಕೊಳ್ಳಬೇಕು. ಬದುಕಿನಲ್ಲಿ ಅರ್ಥ ಬರಬೇಕಾದರೆ ದುರಾಸೆ, ವ್ಯಾಮೋಹ ಬಿಡಬೇಕು, ಜೀವನದ ಮಹತ್ವ ತಿಳಿದುಕೊಳ್ಳಬೇಕು ಎಂದು ಗೋಣಿಬೀಡಿನ ಶೀಲಸಂಪಾದನಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದರು.

ಇಲ್ಲಿನ ವಿನೋಬನಗರದ ಕಲ್ಲಳ್ಳಿಯ ಶ್ರೀ ಶಿವಗಂಗಾ ಯೋಗ ಕೇಂದ್ರದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ಉಚಿತ ಯೋಗ ಶಿಬಿರ ಉದ್ಘಾಟಿಸಿ ಆಶೀರ್ವಚನ ನೀಡಿದರು.
ʼʼಯೋಗವನ್ನು ಈ ಹಿಂದೆ ಋಷಿಮುನಿಗಳು, ಯೋಗಿಗಳು ಮಾತ್ರ ಮಾಡುತ್ತಿದ್ದರು. ಇಂದು ಯೋಗ ಪ್ರಪಂಚದ ಎಲ್ಲರಿಗೂ ಅಗತ್ಯವಾಗಿ ಬೇಕಾಗಿದೆ. ಯಾವುದೇ ಔಷಧದಿಂದ ಗುಣಪಡಿಸಲಾಗದ ಕಾಯಿಲೆಯನ್ನು ಯೋಗದಿಂದ ಗುಣಪಡಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆʼʼ ಎಂದರು.

ಹಿರಿಯ ಪತ್ರಕರ್ತ ಚಂದ್ರಕಾಂತ ಮಾತನಾಡಿ ʼʼಶಿವಮೊಗ್ಗದಲ್ಲಿ 28ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಯೋಗ ಅಭ್ಯಾಸ ಉಚಿತವಾಗಿ ನಡೆಯುತ್ತಿದೆ. ಯೋಗ, ಧ್ಯಾನ, ಪ್ರಾಣಾಯಾಮ ಕಲಿಸುವ ಮೂಲಕ ಸಾವಿರಾರು ಜನರ ಆರೋಗ್ಯ ಉತ್ತಮವಾಗಿರುವಂತೆ ಯೋಗ ಕಲಿಕೆ ಸಹಕಾರಿಯಾಗಿದೆ. ಯೋಗಕೇಂದ್ರದ ಸೇವೆ ಪರಿಗಣಿಸಿ ಸರ್ಕಾರವು ಡಾಕ್ಟರೇಟ್ ಪದವಿಯನ್ನು ಸಿ.ವಿ.ರುದ್ರಾರಾಧ್ಯ ಅವರಿಗೆ ನೀಡಬೇಕುʼʼ ಎಂದು ತಿಳಿಸಿದರು.

ಶಿವಗಂಗಾ ಯೋಗಕೇಂದ್ರದ ಕಾರ್ಯದರ್ಶಿ ಎಸ್.ಎಸ್. ಜ್ಯೋತಿಪ್ರಕಾಶ್ ಮಾತನಾಡಿದರು. ಯೋಗಾಚಾರ್ಯ ಸಿ.ವಿ.ರುದ್ರರಾಧ್ಯ ಯೋಗ ಕುರಿತು ಮಾಹಿತಿ ನೀಡಿದರು. ಯೋಗಕೇಂದ್ರದ ವಿಜಯ ಬಾಯರ್, ಕಾಟನ್ ಜಗದೀಶ್, ಜಿ.ವಿಜಯ್‌ಕುಮಾರ್, ಡಾ. ನಾಗರಾಜ್ ಪರಿಸರ, ಓಂಕಾರ್, ಮಂಜುನಾಥ್, ಚಂದ್ರಶೇಖರಯ್ಯ ಮತ್ತಿತರರು ಹಾಜರಿದ್ದರು.

ಇದನ್ನೂ ಓದಿ | ಅರಮನೆ ಅಂಗಳದಲ್ಲಿ ಯೋಗ ದಿನ ಪೂರ್ವಾಭ್ಯಾಸ; ಭರ್ಜರಿ ಸಿದ್ಧತೆ

Exit mobile version