Site icon Vistara News

Ram Mandir: ರಾಮಮಂದಿರ ಉದ್ಘಾಟನೆಗೆ ವಿರೋಧ; ಅಪಪ್ರಚಾರಗಳಿಗೆ ಕಿವಿ ಕೊಡದಂತೆ ಶೃಂಗೇರಿ ಮಠ ಕರೆ

Sringeri Mutt seer

ಚಿಕ್ಕಮಗಳೂರು: ರಾಮಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ ವಿರೋಧಿಸುವಂತೆ ಶೃಂಗೇರಿ ಶ್ರೀಗಳು ಹೇಳಿದ್ದಾರೆ ಎಂಬ ವದಂತಿ ಹರಡಿದ ಹಿನ್ನೆಲೆಯಲ್ಲಿ ಶೃಂಗೇರಿ ಮಠ ಸ್ಪಷ್ಟನೆ ನೀಡಿದೆ. ಶೃಂಗೇರಿ ಶ್ರೀಗಳ ಭಾವಚಿತ್ರ ಹಾಗೂ ಹೆಸರನ್ನು ಕೆಲ ಧರ್ಮದ್ವೇಷಿಗಳು ದುರ್ಬಳಕೆ ಮಾಡಿಕೊಂಡಿದ್ದು, ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು, ರಾಮಮಂದಿರ ವಿರೋಧಿಸುವ ಯಾವುದೇ ಸಂದೇಶ ನೀಡಿಲ್ಲ ಎಂದು ಶ್ರೀಮಠ ತಿಳಿಸಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಶೃಂಗೇರಿ ಮಠ, ರಾಮಮಂದಿರ ಪ್ರಾಣ ಪ್ರತಿಷ್ಠಾಪನ ಮಹೋತ್ಸವವನ್ನು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ವಿರೋಧಿಸುತ್ತಿದ್ದಾರೆಂದು www.jainikajagaran.com ಎಂಬ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಪ್ರಚಾರ ಮಾಡಲಾಗಿದೆ. ಈ ಹಿಂದೆ ಶ್ರೀರಾಮ ತಾರಕ ಮಹಾಮಂತ್ರ ಜಪಿಸುವಂತೆ ಭಕ್ತರಿಗೆ ಶೃಂಗೇರಿ ಶ್ರೀಗಳು ಕರೆ ನೀಡಿದ್ದನ್ನು, ಅವರು ಪ್ರತಿಷ್ಠಾಪನೆ ಮಹೋತ್ಸವ ವಿರೋಧಿಸುತ್ತಿದ್ದಾರೆ ಎಂದು ಅಪಪ್ರಚಾರ ಮಾಡಲಾಗಿದೆ. ಹೀಗಾಗಿ ಯಾವುದೇ ಅಪಪ್ರಚಾರಗಳಿಗೆ ಕಿವಿ ಕೊಡಬಾರದು ಎಂದು ಮಠದ ಆಡಳಿತಾಧಿಕಾರಿ ಕೋರಿದ್ದಾರೆ.

ಶೃಂಗೇರಿ ಮಠ ನೀಡಿದ ಸ್ಪಷ್ಟನೆ ಏನು?

ಸುಮಾರು ಐದುನೂರು ವರ್ಷಗಳ ಸುದೀರ್ಘವಾದ ಹೋರಾಟದ ನಂತರ ಶ್ರೀರಾಮಚಂದ್ರನ ಅವತಾರ ಕ್ಷೇತ್ರವಾದ ಪವಿತ್ರ ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನಿಗೆ ಭವ್ಯವಾದ ದೇವಸ್ಥಾನದ ನಿರ್ಮಾಣವು ನೆರವೇರಿ ಇದೇ ಶೋಭಕೃತ್ ಪುಷ್ಯ ಶುಕ್ಲದ್ವಾದಶಿ (22-1-2024) ಸೋಮವಾರದಂದು ಪ್ರಾಣಪ್ರತಿಷ್ಠಾಮಹೋತ್ಸವವು ಅತ್ಯಂತ ವೈಭವೋಪೇತವಾಗಿ ಸಂಪನ್ನಗೊಳ್ಳಲಿದೆ. ಈ ವಿಷಯವು ಸಮಸ್ತ ಆಸ್ತಿಕಸ್ತೋಮಕ್ಕೂ ಅತ್ಯಂತಾನಂದದಾಯಕವಾಗಿದೆ.

ಇದನ್ನೂ ಓದಿ | Ram Mandir: ಬಿಜೆಪಿ-ಕಾಂಗ್ರೆಸ್‌ ಮಧ್ಯೆ ʼರಾಮʼ ಯುದ್ಧ; ರಾಮ ಭಕ್ತಿ ಪ್ರದರ್ಶಿಸಿದ ಕೈಪಡೆ!

ಆದರೆ ಇಂತಹ ಸಂದರ್ಭದಲ್ಲಿ ಕೆಲವರು ಧರ್ಮದ್ವೇಷಿಗಳು ಸಾಮಾಜಿಕ ಜಾಲತಾಣದಲ್ಲಿ “www.dainikjagran.com” ಎಂಬ ಹೆಸರನ್ನು ಉಪಯೋಗಿಸಿಕೊಂಡು ಶೃಂಗೇರಿ ಶಾರದಾಪೀಠದ ಪ್ರಸ್ತುತ ಅಧಿಪತಿಗಳಾದ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರ ಛಾಯಾಚಿತ್ರದ ಜೊತೆಗೆ ಶ್ರೀಗಳು ಈ ಪವಿತ್ರಪ್ರಾಣಪ್ರತಿಷ್ಠಾ ಮಹೋತ್ಸವವನ್ನು ವಿರೋಧಿಸುತ್ತಿದ್ದಾರೆ ಎಂಬ ಅರ್ಥವು ಬರುವ ಹಾಗೆ ಸಂದೇಶವನ್ನು ಹಾಕಿ ಪ್ರಚಾರ ಮಾಡುತ್ತಿದ್ದಾರೆ.

ಆದರೆ, ಜಗದ್ಗುರು ಶ್ರೀಶ್ರೀಭಾರತೀತೀರ್ಥ ಮಹಾಸ್ವಾಮಿಗಳವರು ಇಂತಹ ಯಾವುದೇ ಸಂದೇಶವನ್ನು ನೀಡಿರುವುದಿಲ್ಲ. ಇದು ಕೇವಲ ಧರ್ಮದ್ವೇಷಿಗಳಾದ ಕೆಲವರು ಮಾಡುತ್ತಿರುವ ಮಿಥ್ಯಾಪ್ರಚಾರವೇ ಸರಿ. ಆದ್ದರಿಂದ ಆಸ್ತಿಕಮಹಾಜನರು ಯಾವುದೇ ಕಾರಣಕ್ಕೆ ಇಂತಹ ಅಪಪ್ರಚಾರಗಳಿಗೆ ಬೆಲೆಯನ್ನು ಕೊಡಬಾರದು. ಹಾಗೆಯೇ ದಕ್ಷಿಣಾಮ್ನಾಯ ಶೃಂಗೇರಿ ಶಾರದಾಪೀಠದ ಅಧಿಕೃತವಾದ www.sringeri.net ಎಂಬ ವೆಬ್‌ಸೈಟಿನಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾದ ವಿಷಯಗಳನ್ನು ಮಾತ್ರವೇ ಪ್ರಾಮಾಣಿಕವಾಗಿ ಪರಿಗಣಿಸಬೇಕೆಂದು ಈ ಮೂಲಕ ನಿವೇದಿಸುತ್ತಿದ್ದೇವೆ.

“sharadapeetham” ಯೂಟ್ಯೂಬ್ ಚ್ಯಾನೆಲ್ ಮೂಲಕ ಕಳೆದ ದೀಪಾವಳಿಯ (12-11-2023) ಸಂದರ್ಭದಲ್ಲಿ ಈ ಪವಿತ್ರ ಪ್ರಾಣಪ್ರತಿಷ್ಠಾ ಮಹೋತ್ಸವವನ್ನು ಮನಸ್ಸಿನಲ್ಲಿಟ್ಟುಕೊಂಡು ಶ್ರೀರಾಮತಾರಕ ಮಹಾಮಂತ್ರವನ್ನು ಜಪಿಸುವಂತೆ ಎಲ್ಲಾ ಆಸ್ತಿಕರಿಗೂ ಶೃಂಗೇರಿ ಜಗದ್ಗುರುಗಳು ಸಂದೇಶವನ್ನು ನೀಡಿದ್ದರು. ಅದನ್ನನುಸರಿಸಿ ಆಸ್ತಿಕರು ಅತ್ಯಧಿಕ ಸಂಖ್ಯೆಯಲ್ಲಿ ಮಂತ್ರಜಪವನ್ನು ಮಾಡುತ್ತಿರುವುದು ಈ ಸಂದರ್ಭದಲ್ಲಿ ಗಮನಾರ್ಹವಾಗಿದೆ.

ಇದನ್ನೂ ಓದಿ | Jagajyothi Basaveshwara: ಬಸವಣ್ಣರನ್ನು ‘ಸಾಂಸ್ಕೃತಿಕ ನಾಯಕ’ ಎಂದು ಘೋಷಿಸಲು ಸಿಎಂಗೆ ಮನವಿ

ಹಾಗೆಯೇ ಅತ್ಯಂತ ಪವಿತ್ರವೂ ಅಪರೂಪವು ಆದ ಈ ಪ್ರಾಣಪ್ರತಿಷ್ಠಾಮಹೋತ್ಸವದ ಸುಸಂದರ್ಭದಲ್ಲಿ ಎಲ್ಲಾ ಆಸ್ತಿಕರು ಯಥಾಯೋಗ್ಯವಾಗಿ ಭಾಗವಹಿಸಿ ಶ್ರೀರಾಮನ ಪರಿಪೂರ್ಣಕೃಪೆಗೆ ಪಾತ್ರರಾಗಿ ಕೃತಾರ್ಥರಾಗಬೇಕೆಂದು ಜಗದ್ಗುರು ಮಹಾಸ್ವಾಮಿಗಳವರು ಆಶೀರ್ವದಿಸಿದ್ದಾರೆ ಎಂದು ಶ್ರೀಮಠ ತಿಳಿಸಿದೆ.

Exit mobile version