ಶಿರಸಿ: ʻʻಯಾವುದು ನಮಗೆ ಆಗಬಾರದು ಎಂಬುದನ್ನು ಬಯಸುತ್ತೇವೆಯೋ ಅದು ನಮ್ಮಿಂದ ಇನ್ನೊಬ್ಬನಿಗೂ ಆಗಬಾರದು ಎಂಬುದೇ ಧರ್ಮದ ನಿಜವಾದ ತಿರುಳುʼʼ ಎಂದು ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮಕರ್ತ ಡಾ. ಭೀಮೇಶ್ವರ ಜೋಶಿ ಹೇಳಿದರು.
ಶಿರಸಿ ತಾಲೂಕಿನ ಕೊಳಗಿಬೀಸ್ ಶ್ರೀ ಮಾರುತಿ ದೇವಾಲಯದಲ್ಲಿ ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ, ವಿಸ್ತಾರ ಮೀಡಿಯಾ ಪ್ರೈವೆಟ್ ಲಿಮಿಟೆಡ್‌ನ ನಿರ್ದೇಶಕರಾಗಿರುವ ದಾನಿ ಶ್ರೀನಿವಾಸ ಹೆಬ್ಬಾರ್ ಹಾಗೂ ಹೇಮಾ ಹೆಬ್ಬಾರ್ ಅವರಿಗೆ ಅನುಗ್ರಹ ಸನ್ಮಾನ ನೆರವೇರಿಸಿ ಅವರು ಮಾತನಾಡಿದರು.
ʻʻಧಾರಣೆಗೆ ಯೋಗ್ಯವಾದುದೇ ಧರ್ಮ. ಪರೋಪಕಾರದಲ್ಲಿ ತೊಡಗಿಕೊಂಡ ವ್ಯಕ್ತಿ ಮಾತ್ರ ನಿತ್ಯ ಸಂತೋಷಿ ಆಗಲು ಸಾಧ್ಯ. ಮಾಡುವ ಕಾರ್ಯ ನಮ್ಮ ಅಂತರಂಗಕ್ಕೆ ತೃಪ್ತಿ ಕೊಡುತ್ತದೆ. ನಮ್ಮದೇ ನೆರಳಿಗೆ ನಾವು ಒಪ್ಪಿಗೆ ಆಗುವ ಮಾದರಿಯಲ್ಲಿ ನಾವು ಬದುಕಬೇಕುʼʼ ಎಂದು ಭೀಮೇಶ್ವರ ಜೋಶಿ ಹೇಳಿದರು.
ʻʻನಾವು ಮಾಡುವ ಕೆಲಸದಿಂದ ನಮಗೆ ಆತ್ಮತೃಪ್ತಿ ಸಿಕ್ಕರೆ ಪರಮಾತ್ಮನಿಗೂ ಒಪ್ಪಿತವಾಗುತ್ತದೆ. ಸಮಾಜವೂ ಒಪ್ಪಿಕೊಳ್ಳುತ್ತದೆ. ಮನುಷ್ಯ ಬದುಕಿನಲ್ಲಿ ಸಂಸ್ಕಾರವಿದ್ದರೆ, ಉತ್ತಮ ಒಡನಾಟವಿದ್ದರೆ ಬದುಕನ್ನು ಬಂಗಾರವಾಗಿಸಿಕೊಳ್ಳಬಹುದು. ಸಂತುಷ್ಟ ಚಿತ್ತ ಸಂಪದ್ಭರಿತವಾಗಿರುತ್ತದೆ ಎಂಬುದಕ್ಕೆ ಶ್ರೀನಿವಾಸ ಹೆಬ್ಬಾರ್ ಸಾಕ್ಷಿಯಾಗಿದ್ದಾರೆʼʼ ಎಂದು ಅಭಿನಂದಿಸಿದರು.
ʻʻಈ ಪ್ರಪಂಚದಲ್ಲಿ ನಾವು ಹೊಂದಿದ ಸಂಪತ್ತು ಯಾವುದೂ ನಮ್ಮದಲ್ಲ. ಸಮಾಜ ಸೇವೆ ಮೂಲಕ ಮತ್ತೆ ಪರಮಾತ್ಮನಿಗೆ ಸಮರ್ಪಿಸಿದರೆ ಜೀವನ ಸಾರ್ಥಕ ಎನಿಸುತ್ತದೆʼʼ ಎಂದು ಹೇಳಿದ ಜೋಶಿ ಅವರು, ಮನುಷ್ಯ ತನ್ನ ಜೀವನದ ಆರಂಭದಿಂದ ಕೊನೆಯವರೆಗೆ ಪ್ರತಿಯೊಬ್ಬರೂ ಸಂತೋಷವನ್ನೇ ಬಯಸುತ್ತಾರೆ. ನಿತ್ಯ ಸಂತೋಷಿ ಹೇಗಿರುತ್ತಾರೆ ಎಂಬುದಕ್ಕೆ ಶ್ರೀನಿವಾಸ ಹೆಬ್ಬಾರ್ ದಂಪತಿ ಮಾದರಿʼʼ ಎಂದು ಹೇಳಿದರು.
ಸಂಮಾನ ಸ್ವೀಕರಿಸಿ ಮಾತನಾಡಿದ ಶ್ರೀನಿವಾಸ ಹೆಬ್ಬಾರ್, ಅಭಿವೃದ್ಧಿ ಕಾರ್ಯದಲ್ಲಿ ನಾವು ಪ್ರಾಮಾಣಿಕವಾಗಿ ತೊಡಗಿಕೊಂಡರೆ ಸಮಾಜ ಒಗ್ಗಟ್ಟಾಗಿರಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ದೇವಾಲಯಗಳಿಗೆ ಆಗಮಿಸುವವರ ಸಂಖ್ಯೆ ಕಡಿಮೆ ಆಗುತ್ತಿದೆ. ದೇವಾಲಯದ ಕಟ್ಟಡ ಕಾರ್ಯಕ್ಕೆ ಪ್ರತಿಯೊಬ್ಬರೂ ತಮ್ಮ ಕೈಲಾದ ಸೇವೆ ನೀಡಿ ಕೈಜೋಡಿಸಬೇಕುʼʼ ಎಂದು ಮನವಿ ಮಾಡಿದರು.
ದೇವಾಲಯದ ಅಧ್ಯಕ್ಷ ಶ್ರೀಧರ ಹೆಗಡೆ ಇಳ್ಳುಮನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಾರುತಿ ದೇವಾಲಯದ ಪ್ರಧಾನ ಅರ್ಚಕ ವಿ. ಕುಮಾರ ಭಟ್ ಅವರು ಶ್ರೀನಿವಾಸ ಹೆಬ್ಬಾರ್ ಅವರ ಧಾರ್ಮಿಕ ಸೇವೆ ನೆನಪಿಸಿದರು. ಶ್ರೀಧರ ಭಟ್ ಕೊಳಗಿಬೀಸ್ ಇತರರಿದ್ದರು. ಗಿರಿಧರ ಕಬ್ನಳ್ಳಿ ನಿರ್ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದನ್ನೂ ಓದಿ | Vistara News Launch | ಶ್ರೀನಿವಾಸ್ ಹೆಬ್ಬಾರ್ ಅವರ ಸಾಮಾಜಿಕ ಕಾರ್ಯ ಯುವ ಸಮುದಾಯಕ್ಕೆ ಮಾದರಿ