ಬೆಂಗಳೂರು: ಸೃಷ್ಟಿ ಕಲಾ ವಿದ್ಯಾಲಯದಿಂದ ನೀಡಲಾಗುವ ಸೃಷ್ಟಿ ಯಕ್ಷ ಏಕಲವ್ಯ ಪ್ರಶಸ್ತಿಗೆ ಪ್ರಸಿದ್ಧ ಚೆಂಡೆವಾದಕ ಶ್ರೀನಿವಾಸ ಪ್ರಭು (ಗುಂಡ) ಅವರು ಆಯ್ಕೆಯಾಗಿದ್ದಾರೆ. ಆ.13ರಂದು ಬೆಳಗ್ಗೆ 10 ಗಂಟೆಗೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಬಳಿಯ ಪರಂಪರಾ ಸಭಾಂಗಣದಲ್ಲಿ ಹಮ್ಮಿಕೊಂಡಿರುವ 23ನೇ ಸೃಷ್ಟಿ ಸಂಭ್ರಮದಲ್ಲಿ ಶ್ರೀನಿವಾಸ ಪ್ರಭು (Srinivasa Prabhu) ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಕಾರ್ಯಕ್ರಮದಲ್ಲಿ ಸುಬ್ರಾಯ ಹೆಬ್ಬಾರ್ ಮತ್ತು ಭರತ್ ರಾಜ್ ಪರ್ಕಳ ನಿರ್ದೇಶನದಲ್ಲಿ, ನಿತ್ಯಾನಂದ ನಾಯಕ್ ಪರಿಕಲ್ಪನೆಯಲ್ಲಿ ಸೃಷ್ಟಿ ಕಲಾ ವಿದ್ಯಾಲಯ ವಿದ್ಯಾರ್ಥಿಗಳಿಂದ ಕುಮಾರ ವಿಜಯ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಸೃಷ್ಟಿ ಅಧ್ಯಕ್ಷ ಛಾಯಾಪತಿ ಕಂಚಿಬೈಲ್ ತಿಳಿಸಿದ್ದಾರೆ.
ಇದನ್ನೂ ಓದಿ | Essay Competition: ಸುಮೇರು ಜ್ಯೋತಿರ್ವನಮ್‌ನಿಂದ ರಾಷ್ಟ್ರಮಟ್ಟದ ಪ್ರಬಂಧ ಸ್ಪರ್ಧೆ
ಚೆಂಡೆಯ ಏಕಲವ್ಯ
ಎಳವೆಯಲ್ಲಿಯೇ ಅಭಿಮನ್ಯು, ಕೃಷ್ಣ, ಮಹಿಷಾಸುರ ಮೊದಲಾದ ಪಾತ್ರಗಳನ್ನು ಮಾಡುತ್ತಾ ಕ್ರಮೇಣ ಚೆಂಡೆ ವಾದನದತ್ತ ಆಕರ್ಷಿತರಾಗಿ ಏಕಲವ್ಯನಂತೆ ಚೆಂಡೆಯ ಪಟ್ಟುಗಳನ್ನು ಕರಗತಮಾಡಿಕೊಂಡು, ಇದೀಗ ಬಡಗುತಿಟ್ಟಿನ ಯಶಸ್ವಿ ಚೆಂಡೆಗಾರರಾಗಿ ಗುರುತಿಸಿಕೊಂಡಿರುವ ಶ್ರೀನಿವಾಸ ಪ್ರಭು ಅವರು, ಯಕ್ಷಲೋಕದಲ್ಲಿ ಗುಂಡ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ವಿದೇಶಗಳಲ್ಲಿಯೂ ಚೆಂಡೆಯ ನಾದವನ್ನು ಪಸರಿಸಿ ಸೈ ಎನಿಸಿಕೊಂಡಿರುವ ಶ್ರೀನಿವಾಸ ಪ್ರಭು ಯಕ್ಷಕುಟೀರ ಸಂಸ್ಥೆಯನ್ನು ಹುಟ್ಟುಹಾಕಿ ಯಕ್ಷ ಸೇವೆ ನಡೆಸುತ್ತಿದ್ದಾರೆ.