ಉಡುಪಿ: ಇಂಧನ ಸಚಿವ ಸುನಿಲ್ ಕುಮಾರ್ ಅವರು ಪ್ರತಿನಿಧಿಸುತ್ತಿರುವ ಕಾರ್ಕಳ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಶ್ರೀರಾಮ ಸೇನೆ ಕದನ ತಾರಕಕ್ಕೇರಿದೆ. ಶ್ರೀರಾಮ ಸೇನೆಯ ಸ್ಥಾಪಕ ಪ್ರಮೋದ್ ಮುತಾಲಿಕ್ (Pramod Mutalik) ಅವರು ಕಾರ್ಕಳ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು, ಸುನಿಲ್ ಕುಮಾರ್ ಅವರು ಈ ಕ್ಷೇತ್ರವನ್ನು ಬಿಟ್ಟುಕೊಡಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಅದರೆ, ಯಾವುದೇ ಕಾರಣಕ್ಕೂ ಕಾರ್ಕಳ ಕ್ಷೇತ್ರ ಬಿಟ್ಟುಕೊಡುವುದಿಲ್ಲ ಎಂದು ಸುನಿಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಇದು ಶ್ರೀರಾಮ ಸೇನೆ ಕಾರ್ಯಕರ್ತರನ್ನು ಮತ್ತಷ್ಟು ಕೆರಳಿಸಿದೆ, ಪ್ರತಿಭಟನೆಯೂ ಆರಂಭಗೊಂಡಿದೆ.
ಮಂಗಳವಾರ ಕಾರ್ಕಳದಲ್ಲಿ ಮೊದಲ ಬಾರಿಗೆ ರಾಜ್ಯ ಸರಕಾರದ ವಿರುದ್ಧ ಮತ್ತು ಶಾಸಕರ ವಿರುದ್ಧ ಶ್ರೀರಾಮ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ರಾಮಸೇನೆಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ, ಹಿಂದೂ ಕಾರ್ಯಕರ್ತರ ವಿರುದ್ಧ ವಿನಾಕಾರಣ ಕೇಸು ಹಾಕಿದರೆ ರಾಜ್ಯದ ಹಿಂದು ಸಂಘಟನೆಗಳನ್ನು ಒಂದುಗೂಡಿಸಿ ಕಾರ್ಕಳ ಚಲೋ ಅಭಿಯಾನ ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು.
ಸುನಿಲ್ ಗೆಲುವಿಗೆ ಮುತಾಲಿಕ್ ಕಾರಣ ಎನ್ನುವ ಶ್ರೀರಾಮ ಸೇನೆ
ʻʻ2004ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಮೂವತ್ತು ಶಾಸಕರಿಗೆ ಬಿ ಫಾರಂ ನೀಡಲಾಗಿತ್ತು. ಅದರಲ್ಲಿ ಸುನಿಲ್ ಕುಮಾರ್ ಅವರು ವಿಧಾನಸಭೆ ಪ್ರವೇಶಿಸಲು ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರ ಪರಿಶ್ರಮವೇ ಪ್ರಮುಖ ಕಾರಣವಾಗಿತ್ತು. ಈಗ ಹಿಂದು ಕಾರ್ಯಕರ್ತರಿಗೆ ನೋವಾಗಿದೆ. ಅದಕ್ಕಾಗಿ ಹಿಂದು ಕಾರ್ಯಕರ್ತರ ದನಿಯಾಗಲು ಮುತಾಲಿಕ್ ಅವರು ಕಾರ್ಕಳಕ್ಕೆ ಬಂದಿದ್ದಾರೆʼʼ ಎಂದು ಹೇಳಿದರು ಗಂಗಾಧರ ಕುಲಕರ್ಣಿ.
ಸಚಿವರ ಮೇಲೆ ಭ್ರಷ್ಟಾಚಾರದ ಆರೋಪ
ʻʻಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗೋ ಹತ್ಯೆ, ಮತಾಂತರ, ಲವ್ ಜಿಹಾದ್ ಪ್ರಕರಣಗಳು ಎಲ್ಲೆ ಮೀರಿದೆ. ಸಿಮೆಂಟ್ ಹಗರಣದಂತಹ ಹಲವು ಭ್ರಷ್ಟಾಚಾರಗಳು ಸಚಿವರ ಮೇಲಿದೆʼʼ ಎಂದು ಹೇಳಿರುವ ಶ್ರೀರಾಮ ಸೇನೆ ನಾಯಕರು, ಚುನಾವಣಾ ಸಂದರ್ಭದಲ್ಲಿ ಪೂರಕ ದಾಖಲೆಗಳು ಬಹಿರಂಗಪಡಿಸುವುದಾಗಿ ಹೇಳಿದ್ದಾರೆ.
ʻʻಹಿಂದುತ್ವದಿಂದಲೇ ನೀವು ರಾಜ್ಯದ ಮಂತ್ರಿಮಂಡಲ ಪ್ರವೇಶಿಸಿದ್ದೀರಿ ಎಂಬುವುದನ್ನು ಮರೆಯಬೇಡಿ ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಎಸೆಯುವ ಪ್ರಯತ್ನ ಮಾಡದಿರಿ. ಶ್ರೀರಾಮ ಸೇನಾ ಕಾರ್ಯಕರ್ತರು ಹಿಂದುತ್ವಕ್ಕಾಗಿ ಹಲವು ಕೇಸುಗಳನ್ನು ಎದುರಿಸುತ್ತಿದ್ದಾರೆ. ನಮಗೆ ಯಾವುದೇ ಪಕ್ಷ ಮುಖ್ಯವಲ್ಲ. ಹಿಂದುತ್ವ, ದೇಶ, ಭ್ರಷ್ಟಾಚಾರ ರಹಿತ ಆಡಳಿತ ಮುಖ್ಯʼʼ ಎಂದೂ ಗಂಗಾಧರ ಕುಲಕರ್ಣಿ ಹೇಳಿದರು.
ಪ್ರತಿಭಟನೆಯ ಸಂದರ್ಭ ಶ್ರೀರಾಮ ಸೇನೆಯ ರಾಜ್ಯಕಾರ್ಯದರ್ಶಿ ಆನಂದ ಅಡ್ಯಾರು, ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಜಯರಾಮ ಅಂಬೆಕಲ್ಲು, ವಕೀಲ ಹರೀಶ್ ಅಧಿಕಾರಿ, ಕಾರ್ಕಳ ಪುರಸಭಾ ಸದಸ್ಯ ಲಕ್ಷ್ಮೀನಾರಾಯಣ ಮಲ್ಯ, ಪ್ರವೀಣ್ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ | Election 2023 | 25 ಕ್ಷೇತ್ರಗಳಲ್ಲಿ ಶ್ರೀರಾಮ ಸೇನೆಯ ಪ್ರಖರ ಹಿಂದುತ್ವವಾದಿಗಳ ಸ್ಪರ್ಧೆ: ಮುತಾಲಿಕ್ ಘೋಷಣೆ