Site icon Vistara News

Srisailam Kshetra | ಪೀಠಗಳ ಅಭಿವೃದ್ಧಿಗೆ ಸರ್ಕಾರ ಕಂಕಣ ಬದ್ಧ: ಸಿಎಂ ಬೊಮ್ಮಾಯಿ

Srisailam Kshetra

ಶ್ರೀಶೈಲಂ(ಆಂಧ್ರಪ್ರದೇಶ): ಕರ್ನಾಟಕದಿಂದ ಪ್ರತಿದಿನ ಸಾವಿರಾರು ಜನ ಕಾಶಿಗೆ ಹೋಗುತ್ತಾರೆ. ಕನ್ನಡಿಗರಿಗೆ ಅಲ್ಲಿಯ ಜಂಗಮ ಮಠ ಬಿಟ್ಟರೆ ಉಳಿಯಲು ಬೇರೆ ಸ್ಥಳವಿಲ್ಲ. ಶ್ರೀಶೈಲಕ್ಕೆ (Srisailam Kshetra) ಬಂದರೆ ಶ್ರೀಮಠದ ಆಶ್ರಯವಿದೆ. ಉಜ್ಜಯನಿ ಮಠವೂ ಹಾಗೆಯೇ ಇದೆ. ಆದ್ದರಿಂದ ಪೀಠಗಳ ಅಭಿವೃದ್ಧಿ ಹಾಗೂ ಭಕ್ತರಿಗೆ ವ್ಯವಸ್ಥೆಗಳು ಆಗಬೇಕಿದ್ದು, ಈ ನಿಟ್ಟಿನಲ್ಲಿ ಪೀಠಗಳ ಅಭಿವೃದ್ಧಿಗೆ ಸರ್ಕಾರ ಕಂಕಣ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶ್ರೀಶೈಲಂನಲ್ಲಿ ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದ ವತಿಯಿಂದ ನಿರ್ಮಿಸಿರುವ ನಿತ್ಯ ಅನ್ನದಾನ ಛತ್ರ ಉದ್ಘಾಟಿಸಿ ಮಾತನಾಡಿದರು.

ಪರಮಪೂಜ್ಯರು ಭಕ್ತರ ಬಳಿಗೆ ಹೋಗುವ ಕಾರ್ಯ ಮುಂದುವರಿಯಬೇಕು. ಆಗ ಗುರು ಮತ್ತು ಭಕ್ತರಿಗೆ ಅವಿನಾಭಾವ ಸಂಬಂಧ ಏರ್ಪಡುತ್ತದೆ. ಭಕ್ತರಿಗೆ ವ್ಯವಸ್ಥೆ, ಭಕ್ತರ ಏಳಿಗೆ ಗುರುಗಳಿಗೆ ಬಹಳ ಮುಖ್ಯ. ಈ ದೇಶದಲ್ಲಿ ಆಚಾರ್ಯರಿದ್ದಾರೆ, ಆಚರಣೆ ಬೇಕಾಗಿದೆ. ತತ್ವ ಆದರ್ಶಗಳನ್ನು ಆಚರಣೆ ಮಾಡುವ ಭಕ್ತ ಸಮೂಹ ಬೇಕು. ಈ ದೇಶಕ್ಕೆ ಚರಿತ್ರೆ ಇದೆ. ಚಾರಿತ್ರ್ಯ ಬೇಕಾಗಿದೆ. ಚಾರಿತ್ರ್ಯವಂತ ಸಮಾಜದ ಮೂಲಕ ದೇಶದ ಮೌಲ್ಯ ಹೆಚ್ಚಾಗುತ್ತದೆ. ವಿಶ್ವದಲ್ಲಿ ನಮ್ಮದೇ ಆದ ಸುಸಂಸ್ಕೃತವಾದ, ಸಂಬಂಧಗಳಿಗೆ ಗೌರವ ನೀಡುವ ಸಮಾಜ ಎಂದು ಗುರುತಿಸಲಾಗಿದೆ. ಅದನ್ನು ಕಾಪಾಡಲು ಆಚರಣೆ, ಚರಿತ್ರೆ ಅಗತ್ಯ ಎಂದರು.

ಜಗದ್ಗುರುಗಳು ಸಣ್ಣ ವಯಸ್ಸಿನವರಾದರೂ, ದೊಡ್ಡ ಸಾಧನೆ ಮಾಡುವ ಶಕ್ತಿ ಅವರಿಗಿದೆ. ಈ ಕ್ಷೇತ್ರದ ಅಭಿವೃದ್ಧಿಗೆ ಅವರು ಶ್ರಮಿಸುತ್ತಿದ್ದು, ನಾವೆಲ್ಲರೂ ಅವರ ಜತೆಗೆ ನಿಲ್ಲಬೇಕಿದೆ. 500 ಕಿಮೀ ಪಾದಯಾತ್ರೆ ಮಾಡಿದರು. ಕ್ಷೇತ್ರದ ಅಭಿವೃದ್ಧಿಯಲ್ಲಿ ಕಂಬಿ ಮಂಟಪ, ಕಲ್ಯಾಣ ಮಂಟಪ ಮೊದಲ ಹೆಜ್ಜೆಯಾಗಿದೆ. ಶಾಲೆ, ಆಸ್ಪತ್ರೆ ನಿರ್ಮಾಣದ ಸಂಕಲ್ಪಕ್ಕೆ ಶ್ರೀಶೈಲ ಮಲ್ಲಿಕಾರ್ಜುನ ಆಶೀರ್ವಾದ ಮಾಡುತ್ತಾರೆ. ಸರ್ಕಾರ ಈಗಾಗಲೇ 5 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಮುಂದಿನ ಬಜೆಟ್‌ನಲ್ಲಿ ಇನ್ನೂ ಹೆಚ್ಚಿನ ಅನುದಾನ ನೀಡಲಾಗುವುದು ಎಂದರು. ಎಲ್ಲಿಯೂ ಕೆಲಸ ನಿಲ್ಲದಂತೆ ಎಲ್ಲರೂ ಮನಸ್ಸು ಮಾಡಬೇಕು. ಎಲ್ಲ ಪೀಠಗಳಿಗೆ ಭೇಟಿ ನೀಡಲಾಗುವುದು ಎಂದರು.

ಶ್ರೀ ಕ್ಷೇತ್ರದ ಅಭಿವೃದ್ಧಿಯಾಗಬೇಕು
ಶ್ರೀಶೈಲ ಕ್ಷೇತ್ರಕ್ಕೆ ತನ್ನದೇ ಇತಿಹಾಸವಿದೆ. ಕರ್ನಾಟಕದಲ್ಲಿ ಅತಿ ಹೆಚ್ಚು ಭಕ್ತರನ್ನು ಹೊಂದಿರುವ ಈ ಕ್ಷೇತ್ರ ಚನ್ನಮಲ್ಲಿಕಾರ್ಜುನನ ಸ್ಥಾಪಿತ ಕ್ಷೇತ್ರದಲ್ಲಿ ಧರ್ಮ ಪ್ರಚಾರವಾಗುತ್ತಿದ್ದು 12ನೇ ಶತಮಾನದ ಶಿವಶರಣರ ಅನುಭಾವದ ಸಂಗಮವನ್ನು ಕಾಣುತ್ತೇವೆ. ಅಲ್ಲಮಪ್ರಭು, ಅಕ್ಕಮಹಾದೇವಿ, ದೇವರ ದಾಸಿಮಯ್ಯನ ಸಂಬಂಧವಿದೆ. ಶರಣರ ಸಂಬಂಧ, ಸ್ಥಾಪಿತ ಧರ್ಮ ಪೀಠವೂ ಇದೆ. ಇದರ ಸಮನ್ವಯ ಜನರಿಗೆ ಧರ್ಮ, ನ್ಯಾಯ, ನೀತಿಯ ಬದುಕಿನ ಇತಿಹಾಸವಿದೆ. ಈ ಕ್ಷೇತ್ರ ಅಭಿವೃದ್ಧಿ ಅತ್ಯಗತ್ಯ ಎಂದು ಹೇಳಿದರು.

ಭಕ್ತರ ಮನೆ ಬಾಗಿಲಿಗೆ ಪೀಠ
ಜ್ಯೋತಿರ್ಲಿಂಗಗಳಲ್ಲಿ ಶ್ರೀಶೈಲದ ಮಲ್ಲಿಕಾರ್ಜುನ ಅತ್ಯಂತ ಮಹತ್ವವನ್ನು ಪಡೆದಿದೆ. ಪಂಚಪೀಠಗಳಲ್ಲಿ ಒಂದು ಪೀಠ ಸ್ಥಾಪಿತವಾಗಿ ಮಲ್ಲಿಕಾರ್ಜುನನ ಭಕ್ತಿ ಇಡೀ ಜಗತ್ತಿಗೆ ಸಾರುವ ಕೆಲಸವನ್ನು ಈ ಪೀಠ ಮಾಡಿಕೊಂಡು ಬಂದಿದೆ. ಇಂದಿನ ಜಗದ್ಗುರುಗಳು ಅತ್ಯಂತ ಕಷ್ಟ ಕಾಲದಲ್ಲಿ ಪೀಠ ಅಭಿವೃದ್ಧಿ ಗೊಳಿಸಲು ಸಂಕಲ್ಪ ತೊಟ್ಟಿದ್ದಾರೆ. ಈ ಪಂಚಪೀಠಗಳು ಭಕ್ತರಿಂದ ದೂರವಾಗಿವೆ. ದೊಡ್ಡ ಸಮೂಹವಿದ್ದರೂ, ಇವುಗಳ ಅಭಿವೃದ್ಧಿ ಯಾವ ವೇಗದಲ್ಲಿ ಆಗಿಲ್ಲ. ಆದರೆ ಈಗಿನ ಜಗದ್ಗುರುಗಳು ಪೀಠವೇ ಭಕ್ತರ ಮನೆಯ ಬಾಗಿಲಿಗೆ ಸಂಚರಿಸಿ ಆಶೀರ್ವಾದ ಮಾಡುತ್ತಿದ್ದಾರೆ. ಇದೊಂದು ದೊಡ್ಡ ಬದಲಾವಣೆ. ಭಕ್ತರ ಬಳಿಗೆ ಜಗದ್ಗುರುಗಳು ಹೋದರೆ ದೊಡ್ಡ ಭಕ್ತರಲ್ಲಿ ದೊಡ್ಡ ಪರಿವರ್ತನೆ ಮನೆ, ಮನ ಹಾಗೂ ಬದುಕಿನಲ್ಲಿ ಆಗುತ್ತದೆ. ಪೀಠಗಳ ಅಭಿವೃದ್ಧಿಯ ಅವಶ್ಯಕತೆ ಇದೆ ಎಂದರು.

ಧರ್ಮದ ಹೆಸರಿನಲ್ಲಿ ಸಂಘರ್ಷ
ಧರ್ಮದ ಹೆಸರಿನಲ್ಲಿ ಬಹಳಷ್ಟು ಸಂಘರ್ಷವಾಗುತ್ತಿದೆ. ಯಾವ ಧರ್ಮ ಮನುಜರನ್ನು ಕೂಡಿಸಬೇಕೋ ಅದೇ ಧರ್ಮದ ಹೆಸರಿನಲ್ಲಿ ಸಂಘರ್ಷವಾಗುತ್ತಿದೆ. ಧರ್ಮದ ಹೆಸರಿನಲ್ಲಿ ಭಯೋತ್ಪಾದನೆಯಾಗುತ್ತಿರುವುದು ಆತಂಕದ ಸಂಗತಿ. ಹಿಂಸೆ, ಅತ್ಯಾಚಾರ, ಅನಾಚಾರಗಳಿಗೆ ಧರ್ಮದ ಲೇಪನ ನೀಡಿ ಸ್ವರ್ಗ ಸಿಗುತ್ತದೆ ಎನ್ನುವುದು ಕಂಡಾಗ ಭಯವಾಗುತ್ತದೆ. ಈ ಮನುಕುಲವನ್ನು ಉಳಿಸಲು ಮನಪರಿವರ್ತನೆ ಬಹಳ ಮುಖ್ಯ. ಇದು ಪರಮಪೂಜ್ಯರಿಂದ ಮಾತ್ರ ಸಾಧ್ಯ. ಎಂತಹ ಕಠಿಣ ಮನಸ್ಸಿದ್ದರೂ ಅರಿವು ಮೂಡಿಸಿದಾಗ ಮಾತ್ರ ಮನ ಪರಿವರ್ತನೆಯಾಗುತ್ತದೆ ಎಂದರು ಎಂಬುದಾಗಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಲ ಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ, ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ, ಶಾಸಕ ವೀರಣ್ಣ ಸಿ. ಚರಂತಿಮಠ ಹಾಗೂ ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ರಾಷ್ಟ್ರೀಯ ಧರ್ಮ ಜಾಗೃತಿ ಮಹಾಸಮ್ಮೇಳನದಲ್ಲಿ ಸಿಎಂ ಬೊಮ್ಮಾಯಿ ಭಾಗಿ
ಶ್ರೀಶೈಲದಲ್ಲಿ ಜಗದ್ಗುರು ಲಿಂ. ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಗಳವರ ಜನ್ಮ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ “ರಾಷ್ಟ್ರೀಯ ಧರ್ಮ ಜಾಗೃತಿ ಮಹಾಸಮ್ಮೇಳನ” ಹಾಗೂ “ಕಂಬಿ ಮಂಟಪ”ದ ಅಡಿಗಲ್ಲು ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಪಾಲ್ಗೊಂಡಿದ್ದರು.

ಉಜ್ಜಯನಿಯ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಮಹಾಸ್ವಾಮೀಜಿ, ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ, ಕಾಶಿ ಜಗದ್ಗುರು ಡಾ. ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ, ಶ್ರೀಶೈಲಂನ 1008 ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ | Basavanna-Kempegowda | ವಿಧಾನಸೌಧದ ಎದುರು ಬಸವಣ್ಣ, ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ಭೂಮಿ ಪೂಜೆ

Exit mobile version