ಬೆಂಗಳೂರು: ರಾಜ್ಯಾದ್ಯಂತ 3,305 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆಯು (SSLC Evaluation) ಸೋಮವಾರದಿಂದ (ಏ.24) ಆರಂಭಗೊಂಡಿದೆ. ಮೇ ತಿಂಗಳ ಎರಡನೇ ವಾರದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆಯ ಫಲಿತಾಂಶ (SSLC Exam Result) ಪ್ರಕಟವಾಗುವ ಸಾಧ್ಯತೆ ಇದೆ.
ಈಗಾಗಲೇ ಪರೀಕ್ಷಾ ಮಂಡಳಿ ಮೌಲ್ಯಮಾಪನ ಕಾರ್ಯಕ್ಕೆ ಹಾಜರಾಗುವ ಶಿಕ್ಷಕರಿಗೆ ಶೀಘ್ರ ಮೌಲ್ಯಮಾಪನ ಪ್ರಕ್ರಿಯೆ ಮುಗಿಸಿ, ಆದಷ್ಟು ಬೇಗ ಫಲಿತಾಂಶ ಪ್ರಕಟಿಸಲು ಸೂಚಿಸಿದೆ. ಮೇ 2ನೇ ವಾರದಲ್ಲಿ ವಿಧಾನಸಭಾ ಚುನಾವಣೆ ಮತ್ತು ಫಲಿತಾಂಶ ಎರಡು ಇರುವುದರಿಂದ ಇದಕ್ಕೆ ಅಡ್ಡಿಯಾಗದಂತೆ ಫಲಿತಾಂಶವನ್ನು ಪ್ರಕಟಿಸಲು ಯೋಜಿಸಿದೆ.
ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸಿದ ಎಸ್‌ಎಸ್‌ಎಲ್‌ಸಿಯ ವಾರ್ಷಿಕ ಪರೀಕ್ಷೆಯಲ್ಲಿ (SSLC Exam 2023) ಈ ಬಾರಿ 15,498 ಶಾಲೆಗಳು ನೋಂದಾಯಿಸಿಕೊಂಡಿದ್ದು, 8,42,811 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಮಾರ್ಚ್ 31ರಿಂದ ಏಪ್ರಿಲ್ 15ರವರೆಗೆ ಪರೀಕ್ಷೆ ನಡೆದಿದೆ.
ಈ ಬಾರಿ ಪರೀಕ್ಷೆಗೆ 5,833 ಸರ್ಕಾರಿ ಶಾಲೆಗಳು, 3,605 ಅನುದಾನಿತ ಶಾಲೆಗಳು, 6060 ಅನುದಾನರಹಿತ ಶಾಲೆಗಳು ನೋಂದಾಯಿಸಿಕೊಂಡಿತ್ತು. ಒಟ್ಟು 8,42,811 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ ಹೊಸಬರು 7,94,611 ವಿದ್ಯಾರ್ಥಿ, ಪುನರಾವರ್ತಿತ ವಿದ್ಯಾರ್ಥಿಗಳು 20,750 ಹಾಗೂ 18,272 ಖಾಸಗಿ ಅಭ್ಯರ್ಥಿಗಳು, 8,862 ಖಾಸಗಿ ಪುನರಾವರ್ತಿತ ಅಭ್ಯರ್ಥಿಗಳು, 2010ಕ್ಕಿಂತ ಹಿಂದಿನ ಸಾಲಿನವರು 301 ಮಂದಿ ಇದ್ದರೆ, 2010ಕ್ಕಿಂತ ಹಿಂದಿನ ಸಾಲಿನ ಪುನರಾವರ್ತಿತ 15 ಅಭ್ಯರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದರು. ಸರ್ಕಾರಿ ಶಾಲೆಗಳ 3,60,862 ವಿದ್ಯಾರ್ಥಿಗಳು, ಅನುದಾನಿತ ಶಾಲೆಗಳ 2,20,831, ಅನುದಾನರಹಿತ ಶಾಲೆಗಳ 2,61,118 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು.
ಇದನ್ನೂ ಓದಿ: Amit Shah: ಜೆಡಿಎಸ್-ಕಾಂಗ್ರೆಸ್ ಭದ್ರಕೋಟೆಯಲ್ಲಿಂದು ಅಮಿತ್ ಶಾ ಪ್ರವಾಸ: ಮೈಸೂರು-ಹಾಸನದಲ್ಲಿ ಭರ್ಜರಿ ಪ್ರಚಾರ
ಈ ವೈಬ್‌ಸೈಟ್‌ಗಳಲ್ಲಿ ಫಲಿತಾಂಶ ಲಭ್ಯ
ಇಲಾಖೆಯ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಳ್ಳಲಿದೆ. karresults.nic.in ಮತ್ತು kseab.karnataka.gov.in ಮೂಲಕ ಫಲಿತಾಂಶವನ್ನು ತಿಳಿಯಬಹುದಾಗಿದೆ.