ಬೆಳಗಾವಿ: ಇಲ್ಲಿನ ಹಿರೇಬಾಗೇವಾಡಿಯ ಕರ್ನಾಟಕ ಪ್ರೌಢ ಶಾಲೆ ಕೇಂದ್ರದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆ (SSLC Exam 2023) ಅಕ್ರಮಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪದಡಿ 7 ಶಿಕ್ಷಕರನ್ನು ಸೇವೆಯಿಂದ ಅಮಾನತುಗೊಳಿಸಿ (7 teachers suspended) ಡಿಡಿಪಿಐ ಬಸವರಾಜ ನಾಲತವಾಡ ಗುರುವಾರ ರಾತ್ರಿ ಆದೇಶ ಹೊರಡಿಸಿದ್ದಾರೆ.
ಎಸ್.ಎಸ್.ಕರವಿನಕೊಪ್ಪ, ವಿ.ಎಸ್.ಬೀಳಗಿ, ಎಲ್.ಆರ್.ಮಹಾಜನಶೆಟ್ಟಿ, ಎಂ.ಎಸ್.ಅಕ್ಕಿ, ಎ.ಎಚ್.ಪಾಟೀಲ, ಎನ್.ಎಂ.ನಂದಿಹಳ್ಳಿ, ಎಸ್.ಸಿ.ದೂಳಪ್ಪನವರ ಅಮಾನತುಗೊಂಡ ಶಿಕ್ಷಕರಾಗಿದ್ದಾರೆ.
ಈ ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಬಸವರಾಜ ನಾಲತವಾಡ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಧಾರವಾಡ ಕಚೇರಿಯ ಹೆಚ್ಚುವರಿ ಆಯುಕ್ತೆ ಜಯಶ್ರೀ ಶಿಂತ್ರಿ ಏಪ್ರಿಲ್ 3ರಂದು ಹಿರೇಬಾಗೇವಾಡಿ ಕೇಂದ್ರಕ್ಕೆ ಭೇಟಿ ನೀಡಿದ್ದರು. ಆಗ ಗಣಿತ ವಿಷಯದ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳ ಬಳಿ ಅಕ್ರಮಕ್ಕೆ ಬಳಸಿದ್ದ ಚೀಟಿ (Exam malpractice) ಪತ್ತೆಯಾಗಿದ್ದವು.
ಈ ಬಗ್ಗೆ ಸಿಬ್ಬಂದಿ ವಿಚಾರಿಸಿದಾಗ, ವಿದ್ಯಾರ್ಥಿಗಳ ತಪಾಸಣೆ, ಪೊಲೀಸ್ ವ್ಯವಸ್ಥೆ ಸರಿಯಾಗಿ ಮಾಡದಿರುವುದು ಹಾಗೂ ಶಾಲಾ ಕೊಠಡಿ ಸುತ್ತ ಜನ ಓಡಾಡುತ್ತಿರುವುದು ಕಂಡು ಬಂದಿತ್ತು. ಹಾಗಾಗಿ ಕರ್ತವ್ಯಲೋಪ ಎಸಗಿದ ಆರೋಪದಡಿ ಏಳು ಶಿಕ್ಷಕರನ್ನು ಹೆಚ್ಚುವರಿ ಆಯುಕ್ತರ ನಿರ್ದೇಶನದ ಮೇರೆಗೆ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿಯ ವಾರ್ಷಿಕ ಪರೀಕ್ಷೆಯು (SSLC Exam 2023) ಮಾರ್ಚ್ 31 ರಿಂದ ಆರಂಭವಾಗಿದೆ. ಈ ಬಾರಿ ಪರೀಕ್ಷೆಗೆ 15,498 ಶಾಲೆಗಳು ನೋಂದಾಯಿಸಿಕೊಂಡಿದ್ದು, 8,42,811 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮಾರ್ಚ್ 31ರಿಂದ ಏಪ್ರಿಲ್ 15ರವರೆಗೆ ಪರೀಕ್ಷೆ ನಡೆಯಲಿದ್ದು, ಈಗಾಗಲೇ ಪ್ರಥಮ ಭಾಷೆ, ಗಣಿತ ಹಾಗೂ ಅಂಧ ವಿದ್ಯಾರ್ಥಿಗಳಿಗೆ ಸಮಾಜಶಾಸ್ತ್ರ ವಿಷಯದ ಪರೀಕ್ಷೆ ಮುಕ್ತಾಯಗೊಂಡಿದೆ. ಏ.8ರಂದು ಅರ್ಥಶಾಸ್ತ್ರ ಹಾಗೂ ಎಲೆಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಷಯಗಳಿಗೆ ಪರೀಕ್ಷೆ ನಡೆಯಲಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷಾ ವೇಳಾಪಟ್ಟಿ ಹೀಗಿದೆ
31-03-2023 -ಪ್ರಥಮ ಭಾಷೆ- ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು , ಉರ್ದು, ಇಂಗ್ಲಿಷ್, ಇಂಗ್ಲಿಷ್ (NCERT), ಸಂಸ್ಕೃತ
03-04-2023 -ಗಣಿತ ಶಾಸ್ತ್ರ, ಸಮಾಜ ಶಾಸ್ತ್ರ
06-04-2023- ದ್ವಿತೀಯ ಭಾಷೆ (ಇಂಗ್ಲಿಷ್, ಕನ್ನಡ)
08-04-2023- ಅರ್ಥಶಾಸ್ತ್ರ ಹಾಗೂ ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್
10-04-2023- ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ತಾನಿ ಸಂಗೀತ, ಕರ್ನಾಟಕ ಸಂಗೀತ
12-04-2023- ತೃತೀಯ ಭಾಷೆ- ಹಿಂದಿ, ಕನ್ನಡ, ಇಂಗ್ಲಿಷ್, ತುಳು, ಕೊಂಕಣಿ, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ
15-04-2023- ಸಮಾಜ ವಿಜ್ಞಾನ
ಇದನ್ನೂ ಓದಿ: Suicide Case: ಗಂಡ ಚಾಕೊಲೇಟ್ ತಂದು ಕೊಡಲಿಲ್ಲವೆಂದು ನೇಣಿಗೆ ಶರಣಾದಳು ಹೆಂಡತಿ!