Site icon Vistara News

SSLC Exam: ಈ ಬಾರಿ 2,750 ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲಿದ್ದಾರೆ 8.69 ಲಕ್ಷ ವಿದ್ಯಾರ್ಥಿಗಳು

Students writing SSLC Exam in Examination centre

ಬೆಂಗಳೂರು: 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ-1ಕ್ಕೆ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದ್ದು, ಈ ಬಾರಿ ಎಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂಬ ಕುರಿತು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾಹಿತಿ ನೀಡಿದೆ. ಒಟ್ಟು 2,750 ಕೇಂದ್ರಗಳಲ್ಲಿ 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಮಂಡಳಿ ತಿಳಿಸಿದೆ.

ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ-1 ಮಾರ್ಚ್‌ 25ರಿಂದ ಏಪ್ರಿಲ್‌ 6ರವರೆಗೆ ನಡೆಯಲಿದೆ. ಹೀಗಾಗಿ ಪ್ರತಿ ಪರೀಕ್ಷಾ ಕೇಂದ್ರಗಳಿಗೆ ಅಗತ್ಯ ಪೊಲೀಸ್ ಭದ್ರತೆ, ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ನಿಷೇಧಿತ ಪ್ರದೇಶ ಎಂದು ಘೋಷಿಸಲಾಗಿದೆ. ಪರೀಕ್ಷಾ ಅಧಿಕಾರಿ, ಸಿಬ್ಬಂದಿ ಹಾಗೂ ಪರೀಕ್ಷಾರ್ಥಿಗಳಿಗೆ ಕಡ್ಡಾಯವಾಗಿ ಮೊಬೈಲ್ ಫೋನ್ ನಿಷೇಧ ಮಾಡಲಾಗಿದ್ದು, ಇಲಾಖೆಯ ವಿವಿಧ ಹಂತದ ಅಧಿಕಾರಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಸ್ಥಾನಿಕ ಜಾಗೃತ ದಳದ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ.

2023-24ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ-1ಕ್ಕೆ ರಾಜ್ಯಾದ್ಯಂತ 4,41,910 ಬಾಲಕರು ಹಾಗೂ 4,28,058 ಬಾಲಕಿಯರು ಸೇರಿ ಒಟ್ಟು 8,69,968 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಒಟ್ಟು ವಿದ್ಯಾರ್ಥಿಗಳ ನೋಂದಣಿಯಲ್ಲಿ 8,10,368 ಶಾಲಾ ವಿದ್ಯಾರ್ಥಿಗಳು, 18,225 ಖಾಸಗಿ ವಿದ್ಯಾರ್ಥಿಗಳು ಹಾಗೂ 41,375 ಪುನರಾವರ್ತಿತ ವಿದ್ಯಾರ್ಥಿಗಳು ಇದ್ದಾರೆ.

5,424 ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲಿಷ್‌, ಹಿಂದಿ, ತೆಲುಗು, ತಮಿಳು, ಉರ್ದು, ಮರಾಠಿ ಸೇರಿ ಏಳು ಮಾಧ್ಯಮಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಅವ್ಯವಹಾರಗಳ ಬಗ್ಗೆ ನಿಗಾವಹಿಸಲು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ನಿರ್ದೇಶಕರು ಮತ್ತು ಸಹನಿರ್ದೇಶಕರ ವೃಂದದ ಅಧಿಕಾರಿಗಳನ್ನು ಜಿಲ್ಲಾ ಮೇಲುಸ್ತುವಾರಿ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಡಯಟ್ ಪ್ರಾಂಶುಪಾಲರನ್ನು ಆಯಾ ಜಿಲ್ಲೆಗೆ ಜಿಲ್ಲಾ ವೀಕ್ಷಕರಾಗಿ ನೇಮಿಸಲಾಗಿದೆ. ಡಯಟ್ ಉಪನ್ಯಾಸಕರನ್ನು ಪರೀಕ್ಷಾ ಕೇಂದ್ರಗಳಿಗೆ ವಿಚಕ್ಷಣ ಜಾಗೃತ ದಳದ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.

ಇದನ್ನೂ ಓದಿ | PSI Exam: ಲೋಕಸಭೆ ಚುನಾವಣೆ; ಮೇ 8ಕ್ಕೆ ನಿಗದಿಯಾಗಿದ್ದ ಪಿಎಸ್ಐ ಪರೀಕ್ಷೆ ಮುಂದೂಡಿಕೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ ಹೀಗಿದೆ

25-03-2024: ಪ್ರಥಮ ಭಾಷೆ ಪರೀಕ್ಷೆ (ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್ + ಇಂಗ್ಲಿಷ್ NCERT, ಸಂಸ್ಕೃತ)
27-03-2024: ಸಮಾಜ ವಿಜ್ಞಾನ (ಕೋರ್‌ ಸಬ್ಜೆಕ್ಟ್‌)
30-03-2024: ವಿಜ್ಞಾನ, ರಾಜ್ಯಶಾಸ್ತ್ರ
02-04-2024: ಗಣಿತ, ಸಮಾಜ ಶಾಸ್ತ್ರ
03-04-2024: ಅರ್ಥಶಾಸ್ತ್ರ
04-04-2024: ತೃತೀಯ ಭಾಷೆ ಪರೀಕ್ಷೆ (ಹಿಂದಿ, ಕನ್ನಡ, ಇಂಗ್ಲಿಷ್‌, ಅರೇಬಿಕ್‌, ಪರ್ಷಿಯನ್‌, ಉರ್ದು, ಸಂಸ್ಕೃತ, ಕೊಂಕಣಿ, ತುಳು)
06-04-2024: ದ್ವಿತೀಯ ಭಾಷೆ ಪರೀಕ್ಷೆ (ಇಂಗ್ಲಿಷ್‌, ಕನ್ನಡ)

5,8,9ನೇ ಕ್ಲಾಸ್‌ ಪಬ್ಲಿಕ್‌ ಪರೀಕ್ಷೆ ಪರಿಷ್ಕೃತ ಟೈಮ್‌ ಟೇಬಲ್‌ ಪ್ರಕಟ; ಯಾವಾಗ ಯಾವ ಪರೀಕ್ಷೆ?

ಬೆಂಗಳೂರು: ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ ನಡೆಸುತ್ತಿರುವ 5,8 ಮತ್ತು 9ನೇ ತರಗತಿ ಪಬ್ಲಿಕ್‌ ಪರೀಕ್ಷೆಗೆ (Public Exam) ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌ ನೀಡಿದ ಬೆನ್ನಲ್ಲೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಪರಿಷ್ಕೃತ ಪರೀಕ್ಷಾ ವೇಳಾಪಟ್ಟಿ (Revised Exam time table) ಬಿಡುಗಡೆ ಮಾಡಿದೆ.

ಹಲವು ಸುತ್ತಿನ ಕಾನೂನು ಸಮರದ ಬಳಿಕ ಪಬ್ಲಿಕ್‌ ಪರೀಕ್ಷೆ ಮುಂದುವರಿಸಲು ರಾಜ್ಯ ಹೈಕೋರ್ಟ್‌ (Karnataka High Court) ಶುಕ್ರವಾರ ಬೆಳಗ್ಗೆ ಗ್ರೀನ್‌ ಸಿಗ್ನಲ್‌ (Karnataka High Court Green Signal) ನೀಡಿತ್ತು. ಇದೀಗ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ರುಪ್ಸಾ ಇದನ್ನು ಪ್ರಶ್ನಿಸಿ ಮತ್ತೆ ಸುಪ್ರೀಂಕೋರ್ಟ್‌ ಮೊರೆ ಹೋಗಲು ನಿರ್ಧರಿಸಿದೆ. ಅದರ ನಡುವೆಯೇ ಹೈಕೋರ್ಟ್‌ಗೆ ಮಾಹಿತಿ ನೀಡಿರುವಂತೆಯೇ ಸೋಮವಾರದಿಂದ ಪರೀಕ್ಷೆ ಮುಂದುವರಿಸಲು ಸರ್ಕಾರದ ಶಿಕ್ಷಣ ಇಲಾಖೆ ನಿರ್ಧರಿಸಿ ವೇಳಾಪಟ್ಟಿ ಪ್ರಕಟಿಸಿದೆ.

ಉಳಿದ ಪರೀಕ್ಷೆಗಳು ಮಾರ್ಚ್ 25 ರಿಂದ ನಡೆಯಲಿದ್ದು, 28ಕ್ಕೆ ಕೊನೆಯ ಪರೀಕ್ಷೆ ಇರುತ್ತದೆ ಎಮದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಆದೇಶ ತಿಳಿಸಿದೆ.

ಪರೀಕ್ಷೆ ಮುಂದುವರಿಸುವ ಆದೇಶದಲ್ಲಿ ಏನಿದೆ?

ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 5, 8 ಮತ್ತು 9ನೇ ತರಗತಿಗಳ ವಿದ್ಯಾರ್ಥಿಗಳಿಗೆ 2023-24ನೇ ಸಾಲಿನ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಮೌಲ್ಯಾಂಕನ ನಡೆಸುವ ಸಂಬಂಧ ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ಎಸ್.ಎಲ್.ಪಿ ಸಂಖ್ಯೆ: 6256/2024, ಎಸ್.ಎಲ್.ಪಿ ಸಂಖ್ಯೆ: 6257/2024 ಮತ್ತು ಡೈರಿ ಸಂಖ್ಯೆ: 11192/2024 ದಾವೆಗಳನ್ನು ಹೂಡಿದ್ದು, ಸದರಿ ದಾವೆಗಳನ್ನು ವಿಚಾರಣೆ ನಡೆಸಿ, ಈ ಹಿಂದೆ ರಾಜ್ಯ ಉಚ್ಛ ನ್ಯಾಯಾಲಯದ ದ್ವಿಸದಸ್ಯ ಪೀಠವು ಮೌಲ್ಯಾಂಕನವನ್ನು ಮುಂದುವರೆಸುವಂತೆ ನೀಡಿದ್ದ ಮಧ್ಯಂತರ ತೀರ್ಪನ್ನು ರದ್ದುಪಡಿಸಿರುತ್ತದೆ ಮತ್ತು ಪ್ರಕರಣವನ್ನು ರಾಜ್ಯ ಉಚ್ಛ ನ್ಯಾಯಾಲಯ ವಿಭಾಗೀಯ ಪೀಠಕ್ಕೆ ರವಾನಿಸಿತ್ತು. ಈ ಹಿನ್ನೆಲೆಯಲ್ಲಿ ದಿನಾಂಕ: 13-3-2024ರಿಂದ ನಡೆಯಬೇಕಾಗಿದ್ದ 5.8 ಮತ್ತು 9ನೇ ತರಗತಿಗಳ SA-2 ಮೌಲ್ಯಾಂಕನವನ್ನು ಮುಂದಿನ ಆದೇಶದವರೆಗೆ ಮುಂದೂಡುವಂತೆ ಶಾಲೆಗಳಿಗೆ ಸೂಚಿಸಲಾಗಿತ್ತು.

ಮುಂದುವರೆದು, ರಾಜ್ಯ ಘನ ಉಚ್ಛ ನ್ಯಾಯಾಲಯದ ವಿಭಾಗೀಯ ಪೀಠವು ಸದರಿ ದಾವೆಯ ಪ್ರಕರಣವನ್ನು ವಿಚಾರಣೆ ನಡೆಸಿ ದಿನಾಂಕ: 22-3-2024ರಂದು ಅಂತಿಮ ತೀರ್ಪು ನೀಡಿದ್ದು, 5, 8 ಮತ್ತು 9ನೇ ತರಗತಿಗಳು 2023-24ನೇ ಸಾಲಿನ ಸಂಕಲನಾತ್ಮಕ ಮೌಲ್ಯಮಾಪನ-2 (SA-2) ಮೌಲ್ಯಾಂಕನ ಕಾರ್ಯವನ್ನು ಉಳಿದ ವಿಷಯಗಳಿಗೆ ಮುಂದುವರೆಸಲು ಸೂಚಿಸಿ ಆದೇಶಿಸಿರುತ್ತದೆ. ಅದರಂತೆ ಸದರಿ ಮೌಲ್ಯಾಂಕನ ಕಾರ್ಯವನ್ನು ವಿದ್ಯಾರ್ಥಿಗಳ ಅಭ್ಯಾಸದ ಹಿತದೃಷ್ಟಿಯಿಂದ ದಿನಾಂಕ: 25-3-2024ರಿಂದ ಪ್ರಾರಂಭಿಸಲು ಕ್ರಮವಹಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಗೆ ಕೋರಿದೆ ಎಂದು ಪ್ರಕಟಣೆ ತಿಳಿಸಿದೆ.

ಹಾಗಿದ್ದರೆ ಯಾವಾಗ ಯಾವ ಪರೀಕ್ಷೆ? ಪರಿಷ್ಕೃತ ವೇಳಾಪಟ್ಟಿ ಇಲ್ಲಿದೆ

5, 8 ಮತ್ತು 9ನೇ ತರಗತಿಯ ಉಳಿದ ಪರೀಕ್ಷೆಗಳನ್ನು ಸೋಮವಾರದಿಂದಲೇ ನಡೆಸುವ ಬಗ್ಗೆ ಕೋರ್ಟ್ ಗೆ ಸರ್ಕಾರ ಮಾಹಿತಿ ನೀಡಿದೆ. ಈಗಾಗಲೇ ಐದನೇ ತರಗತಿ ನಾಲ್ಕು ವಿಷಯಗಳ‌ ಪರೀಕ್ಷೆ ಮುಗಿದಿವೆ. 8 ಹಾಗೂ 9 ತಗರತಿಗಳ ಎರಡೆರಡು ವಿಷಯಗಳ ಪರೀಕ್ಷೆ ನಡೆದಿವೆ. 11ನೇ ತರಗತಿ ಎಲ್ಲಾ ವಿಷಯಗಳ‌ ಪರೀಕ್ಷೆ ಮುಕ್ತಾಯವಾಗಿದೆ. ಉಳಿದ ಪರೀಕ್ಷೆಗಳಿಗೆ ಸಂಬಂಧಿಸಿದ ವೇಳಾಪಟ್ಟಿ ಇಲ್ಲಿದೆ.

5ನೇ ತರಗತಿ ವೇಳಾಪಟ್ಟಿ

25-03-2024- ಪರಿಸರ ಅಧ್ಯಯನ
26-03-2024- ಗಣಿತ

8ನೇ ತರಗತಿ ವೇಳಾಪಟ್ಟಿ

25-03-2024- ತೃತೀಯ ಭಾಷೆ
26-03-2024- ಗಣಿತ
27-03-2024- ವಿಜ್ಞಾನ
28-03-2024- ಸಮಾಜ ವಿಜ್ಞಾನ

9ನೇ ತರಗತಿ ವೇಳಾಪಟ್ಟಿ

25-03-2024- ತೃತೀಯ ಭಾಷೆ
26-03-2024- ಗಣಿತ
27-03-2024- ವಿಜ್ಞಾನ
28-03-2024- ಸಮಾಜ ವಿಜ್ಞಾನ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುವ ದಿನ ಮಧ್ಯಾಹ್ನ 2.30ಕ್ಕೆ ಪರೀಕ್ಷೆ
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಲ್ಲದ ದಿನ ಬೆಳ್ಳಗೆ 10ಗಂಟೆಗೆ ಪರೀಕ್ಷೆ

ಇದನ್ನೂ ಓದಿ | UPSC Prelims: ಚುನಾವಣೆ ಹಿನ್ನೆಲೆ ಯುಪಿಎಸ್‌ಸಿ ಪರೀಕ್ಷೆ ಮುಂದೂಡಿಕೆ; ಇಲ್ಲಿದೆ ಹೊಸ ದಿನಾಂಕ

Exit mobile version