ಬೆಂಗಳೂರು: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ₹85.63 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇವರಲ್ಲಿ 145 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ. ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮೀಣ ಪ್ರತಿಭೆಗಳು ಉತ್ತಮ ಅಂಕ ಪಡೆದಿದ್ದು, ಸಾಧನೆಗೆ ಬಡತನ ಅಡ್ಡಿಯಾಗದು ಎಂಬುದನ್ನು ತೋರ್ಪಡಿಸಿದ್ದಾರೆ.
ಚಾಲಕನ ಮಗಳ ಸಾಧನೆ: ಕೊಪ್ಪಳದ ಪ್ರಿಯಾಂಕ ಎಂಬ ವಿದ್ಯಾರ್ಥಿನಿ 616 ಅಂಕಗಳನ್ನು ಪಡೆಯುವ ಮೂಲಕ ಪೋಷಕರ ಕನಸಿಗೆ ಭರವಸೆ ಮೂಡಿಸಿದ್ದಾಳೆ. ಕೊಪ್ಪಳ ತಾಲೂಕಿನ ಓಜನಹಳ್ಳಿ ಗ್ರಾಮದ ನಿಂಗಪ್ಪ ಮತ್ತು ಪವಿತ್ರ ದಂಪತಿಯ ಪುತ್ರಿಯಾದ ಪ್ರಿಯಾಂಕ, ಹನಕುಂಟೆ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ. ನಿರಂತರ ಓದು, ಶಿಕ್ಷಕರ ಮಾರ್ಗದರ್ಶನದಿಂದ ಸಾಧನೆ ಮಾಡಲು ಸಾಧ್ಯವಾಗಿದೆ ಎನ್ನುತ್ತಾಳೆ ಪ್ರಿಯಾಂಕ. ಇವರ ತಂದೆ ನಿಂಗಜ್ಜ ಓಜಿನಹಳ್ಳಿ ಅವರು ಗುತ್ತಿಗೆ ಆಧಾರದಲ್ಲಿ 108 ಆಂಬುಲೆನ್ಸ್ ಚಾಲಕರಾಗಿದ್ದಾರೆ. ತಮಗೆ ಬರುವ ಆದಾಯದಲ್ಲಿ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕೆಂಬುದು ಇವರ ಕನಸು. ಮಗಳನ್ನು ಮೆಡಿಕಲ್ ಓದಿಸಬೇಕು ಎಂಬುದು ಪಾಲಕರ ಆಸೆಯಾಗಿದೆ.
ಮೀನುಗಾರಿಕೆ ಕುಟುಂಬದ ಹುಡುಗ: ಮೀನುಗಾರಿಕೆಯಿಂದ ಬದುಕು ಸಾಗಿಸುವ ಬಡಕುಟುಂಬದ ಹುಡುಗ, ಮಲ್ಪೆ ಸರ್ಕಾರಿ ಕಾಲೇಜಿನ ಆಂಗ್ಲ ಮಾಧ್ಯಮ ವಿದ್ಯಾರ್ಥಿ ಪುನೀತ್ ನಾಯ್ಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪೂರ್ಣ ಅಂಕ ಪಡೆದಿದ್ದಾನೆ. ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿ ಉಡುಪಿಯ ಕಲ್ಮಾಡಿಯಲ್ಲಿ ತಾಯಿಯೊಂದಿಗೆ ನೆಲೆಸಿದ್ದು, ಮನೆ ನಿರ್ವಹಣೆಗಾಗಿ ಮಲ್ಪೆ ಬಂದರಿನಲ್ಲಿ ಮೀನು ಲೋಡ್ ಮಾಡಲು ತಾಯಿಗೆ ಸಹಾಯ ಮಾಡುತ್ತಾ ಸ್ವಂತ ದುಡಿಮೆಯಲ್ಲಿ ಶಿಕ್ಷಣದಲ್ಲಿ ಉನ್ನತ ಸಾಧನೆ ಮಾಡಿದ್ದಾನೆ.
ಬಟ್ಟೆ ವ್ಯಾಪಾರಿ ಮಗಳು: ಕುಂದಾಪುರದ ಬಳಿಯ ಕಾಳಾವರ ಸರ್ಕಾರಿ ಪ್ರೌಢಶಾಲೆಯ ಆಂಗ್ಲ ಮಾಧ್ಯಮ ವಿದ್ಯಾರ್ಥಿನಿ ನಿಶಾ 625 ಅಂಕ ಪಡೆದಿದ್ದಾಳೆ. ಕಾಳಾವರ ಸಲ್ವಾಡಿ ನಿವಾಸಿ ಶ್ರೀನಿವಾಸ ಜೋಗಿ- ಆಶಾ ದಂಪತಿ ಪುತ್ರಿ. ಇವರ ತಂದೆ ಬಟ್ಟೆ ವ್ಯಾಪಾರಿಯಾಗಿದ್ದು, ಓದಿಗೆ ಬಡತನ ಅಡಚಣೆಯಾಗದು ಎಂಬುದನ್ನು ನಿರೂಪಿಸಿದ್ದು, ಬಾಲಕಿ ವೈದ್ಯೆಯಾಗುವ ಆಸೆ ಹೊಂದಿದ್ದಾಳೆ.
ಕೂಲಿ ಕಾರ್ಮಿಕ ಕುಟುಂಬದ ವಿದ್ಯಾರ್ಥಿನಿ: ಹಿಜಾಬ್ ವಿವಾದದಿಂದ ಗಮನ ಸೆಳೆದಿದ್ದ ಉಡುಪಿ ಬಾಲಕಿಯರ ಪಿಯು ಕಾಲೇಜಿನ ವಿದ್ಯಾರ್ಥಿನಿ, ಕೂಲಿ ಕಾರ್ಮಿಕ ಕುಟುಂಬದ ಗಾಯತ್ರಿ ಪರೀಕ್ಷೆಯಲ್ಲಿ ಪೂರ್ಣ ಅಂಕ ಪಡೆದಿದ್ದಾಳೆ. ಕಡಿಯಾಳಿ ನಿವಾಸಿ ಗಾಯತ್ರಿ ತಂದೆ ಮೇಸ್ತ್ರಿ ಕೆಲಸ ಮಾಡುತ್ತಿದ್ದಾರೆ. ತಾಯಿ ಬೀಡಿ ಕಟ್ಟುವ ಮೂಲಕ ಕುಟುಂಬಕ್ಕೆ ಆಸರೆಯಾಗಿದ್ದಾರೆ.
ಪೇಪರ್ ವಿತರಿಸುವ ಬಾಲಕ ಟಾಪರ್: ಪ್ರತಿದಿನ ಬೆಳಗ್ಗೆ ತಂದೆಯೊಂದಿಗೆ ಮನೆಮನೆಗೆ ಪೇಪರ್ ಹಾಕುತ್ತಿದ್ದ ಬಾಲಕ, ಬೆಂಗಳೂರಿನ ವಿಜಯನಗರದ ಕಾರ್ಡಿಯಲ್ ಹೈಸ್ಕೂಲ್ ವಿದ್ಯಾರ್ಥಿ ಎನ್.ಡಿ.ಮೋನಿಶ್ ಗೌಡ 625 ಅಂಕ ಪಡೆದಿದ್ದಾನೆ. ಪತ್ರಿಕಾ ವಿತರಕ ದೇವರಾಜ್ ಅವರ ಪುತ್ರನಾದ ಮೋನಿಶ್, ವಾಣಿಜ್ಯ ವಿಭಾಗದಲ್ಲಿ ಶಿಕ್ಷಣ ಪಡೆದು, ಚಾರ್ಟರ್ಡ್ ಅಕೌಂಟೆಂಟ್ ಆಗುವ ಇಚ್ಛೆ ವ್ಯಕ್ತಪಡಿಸಿದ್ದಾನೆ.
ಇದನ್ನೂ ಓದಿ | SSLC Result | ಸಾಧನೆಗೆ ಬಡತನ ಅಡ್ಡಿಯಲ್ಲ ಎಂದು ಸಾಬೀತುಪಡಿಸಿದ ವಿದ್ಯಾರ್ಥಿಗಳು