ವಿಜಯಪುರ/ಆನೇಕಲ್: ಜೆಇಇ ಪಾಸಾಗಿ ಐಐಟಿಗೆ ಸೇರುವುದೇ ನನ್ನ ಜೀವನದ ಗುರಿಯಾಗಿದೆ ಎಂದು ಭೀಮನಗೌಡ ಹಣಮಂತಗೌಡ ಬಿರ್‌ದಾರ್ ಪಾಟೀಲ್ ತಿಳಿಸಿದ್ದಾರೆ. ಭೀಮನಗೌಡ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯದ ಟಾಪರ್‌ಗಳ (SSLC Toppers) ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಗಿಟ್ಟಿಸಿದ್ದಾನೆ.
ಪಿಯುಸಿಯಲ್ಲಿ ವಿಜ್ಞಾನವನ್ನು ಆಯ್ಕೆ ಮಾಡಿಕೊಳ್ಳುವ ಆಸೆಯನ್ನು ಹೊಂದಿರುವ ಭೀಮನಗೌಡ, ಬಳಿ ಜೆಇಇ ಪಾಸಾಗಿ ಐಐಟಿಗೆ ಸೇರುವ ಗುರಿ ಹೊಂದಿದ್ದಾನೆ. ಮೂಲತಃ ಬಾಗಲಕೋಟೆಯ ಮುಧೋಳ ತಾಲೂಕಿನ ಬುದ್ನಿ ಬಿ.ಕೆ ಗ್ರಾಮದ ರೈತ ಹಣಮಂತಗೌಡ ಬಿರ್‌ದಾರ್ ಪಾಟೀಲ್ ಹಾಗೂ ಶಂಕರವ್ವ ಬಿರ್‌ದಾರ್ ಪಾಟೀಲ್ ಅವರ ಸುಪುತ್ರನಾಗಿದ್ದಾನೆ. ರೈತ ಕುಟುಂಬದವನಾದ ಈತ 9 ಮತ್ತು 10ನೇ ತರಗತಿಯನ್ನು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟದಲ್ಲಿರುವ ಆಕ್ಸ್‌ಫರ್ಡ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾನೆ.
ಮನೆಯೇ ಮೊದಲ ಪಾಠ ಶಾಲೆ
ಬೆಂಗಳೂರು- ಹೊಸೂರು ಮುಖ್ಯರಸ್ತೆಯ ಕೂಡ್ಲು ಗೇಟ್‌ನಲ್ಲಿನ ಹೊಸಪಾಳ್ಯದಲ್ಲಿರುವ ನ್ಯೂ ಮೆಕಾಲೆ ಇಂಗ್ಲಿಷ್ ಹೈಸ್ಕೂಲ್ ಶಾಲೆಯ ವಿದ್ಯಾರ್ಥಿನಿ ಭೂಮಿಕಾ ಕೂಡ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಟಾಪರ್ ಆಗಿದ್ದಾಳೆ. ಭೂಮಿಕಾ ಆರ್. ಪೈ 625ಕ್ಕೆ 625 ಅಂಕ ಗಳಿಸಿ ಸಾಧನೆ ಮಾಡಿದ್ದಾಳೆ.
ತನ್ನ ಸಾಧನೆ ಕುರಿತು ಪ್ರತಿಕ್ರಿಯಿಸಿರುವ ಭೂಮಿಕಾ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಟಾಪರ್ ಆಗಿದ್ದು ಖುಷಿ ತಂದಿದೆ. ಇದನ್ನೂ ನಿರೀಕ್ಷೆ ಮಾಡಿರಲಿಲ್ಲ. ಪರೀಕ್ಷೆಗಾಗಿ ಟ್ಯೂಷನ್ ಎಂದೆಲ್ಲ ಯಾವುದಕ್ಕೂ ಹೋಗಲಿಲ್ಲ. ಬದಲಿಗೆ ಮನೆಯೇ ಮೊದಲ ಪಾಠ ಶಾಲೆಯಾಗಿತ್ತು. ಶಾಲೆಯಲ್ಲಿ ಶಿಕ್ಷಕರು ಹೇಳಿಕೊಟ್ಟಿದ್ದನ್ನು ಆಗಾಗಲೇ ಅಭ್ಯಾಸವನ್ನು ಮಾಡುತ್ತಿದ್ದೆ. ಮುಂದೆ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡು ಬಾಹ್ಯಾಕಾಶ ವಿಜ್ಞಾನಿ ಆಗುವ ಕನಸನ್ನು ನನಸು ಮಾಡಿಕೊಳ್ಳುವುದಾಗಿ ತಿಳಿಸಿದ್ದಾಳೆ.
ಮನೆಯಲ್ಲಿ ಯಾರ ಒತ್ತಡವಿಲ್ಲದೆ ಓದಿದ ಕಾರಣಕ್ಕೆ ಪೂರ್ಣ ಅಂಕವನ್ನು ಗಳಿಸಿದ್ದೇನೆ. ಮೊಬೈಲ್ ಮತ್ತು ಟಿವಿಯೆಲ್ಲ ನನ್ನ ಓದಿಗೆ ಅಡ್ಡಿ ಆಗಿಲ್ಲ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಕಷ್ಟ ಪಟ್ಟು ಅಲ್ಲ ಇಷ್ಟ ಪಟ್ಟು ಓದಿದ್ದೇನೆ. ಕುಟುಂಬಸ್ಥರು ಹಾಗೂ ಶಿಕ್ಷಕರ ಬೆಂಬಲದಿಂದಾಗಿ ರಾಜ್ಯಕ್ಕೆ ಮೊದಲ ಸ್ಥಾನವನ್ನು ಗಳಿಸಲು ಸಾಧ್ಯವಾಯಿತು ಎಂದು ಭೂಮಿಕಾ ತಿಳಿಸಿದರು. ಭೂಮಿಕಾ ಉಡುಪಿಯ ತನ್ನ ಅಜ್ಜಿ ಮನೆಯಲ್ಲಿದ್ದು, ಅಲ್ಲೆ ಕುಟುಂಬಸ್ಥರು ಹಾಗೂ ಸ್ನೇಹಿತರೊಂದಿಗೆ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು.
ಇದನ್ನೂ ಓದಿ: SSLC Result 2023: ಫೇಲಾಗಿದ್ದರೆ ಡೋಂಟ್ ವರಿ, ನಿಮಗಿದೆ ಸಪ್ಲಿಮೆಂಟರಿ; ಪೂರಕ ಪರೀಕ್ಷೆ ನೋಂದಣಿಗೆ ಲಾಸ್ಟ್ ಡೇಟ್ ಯಾವಾಗ?
ಇತ್ತ ಭೂಮಿಕಾ ಓದಿದ ನ್ಯೂ ಮೆಕಾಲೆ ಶಾಲೆಯಲ್ಲೂ ಸಂಭ್ರಮ ಮನೆ ಮಾಡಿತ್ತು. ಶಾಲೆಯ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮಾಚರಣೆ ಮಾಡಿದರು. ಭೂಮಿಕಾ ರಾಜ್ಯಕ್ಕೆ ಫಸ್ಟ್ ಬಂದು ಶಾಲೆಯ ಕೀರ್ತಿ ಹೆಚ್ಚಿಸಿದ್ದು ಸಂತಸ ತಂದಿದೆ ಎಂದರು. ಇದೇ ವೇಳೆ ಶಾಲೆಯ ಆಡಳಿತ ಮಂಡಳಿಯು ಮಾಧ್ಯಮದ ಮೂಲಕ ಭೂಮಿಕಾಗೆ ಅಭಿನಂದನೆ ತಿಳಿಸಿದೆ.